ಮಿಚಾಂಗ್ ಚಂಡಮಾರುತವು ಮಂಗಳವಾರ ಆಂಧ್ರಪ್ರದೇಶದ ಕರಾವಳಿ ದಾಟುತ್ತಿದ್ದಂತೆ ದುರ್ಬಲತೆ ಕಂಡುಬಂದಿದೆ. 770 ಕಿ.ಮೀ. ವೇಗದಲ್ಲಿ ಬಂದ ಚಂಡಮಾರುತದಿಂದ ನೂರಾರು ಹಳ್ಳಿಗಳ ರಸ್ತೆಗಳು, ಗಿಡ ಮರಗಳು ಸೇರಿದಂತೆ ಹಲವು ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದೆ. ಘಟನೆಯಿಂದ ಕೆಲವು ಜಾನುವಾರುಗಳು ಮೃತಪಟ್ಟಿವೆ.
ಆಂಧ್ರಪ್ರದೇಶದ ಮುಖ್ಯಮಂತ್ರಿಗಳ ಕಚೇರಿ ಹಂಚಿಕೊಂಡ ಮಾಹಿತಿಯ ಪ್ರಕಾರ, 25 ಹಳ್ಳಿಗಳ ಮುಳುಗಡೆ ಸೇರಿದಂತೆ 194 ಹಳ್ಳಿಗಳು ಮತ್ತು ಎರಡು ಪಟ್ಟಣಗಳ ಸುಮಾರು 40 ಲಕ್ಷ ಜನರು ಮಿಚಾಂಗ್‌ನಿಂದ ತೊಂದರೆಗೀಡಾಗಿದ್ದಾರೆ.
ಮಿಚಾಂಗ್ ಚಂಡಮಾರುತದಿಂದ ಉಂಟಾದ ಮಳೆ ಸಂಬಂಧಿತ ಹಾನಿಯಿಂದ ಆಂಧ್ರ ಮತ್ತು ತಮಿಳುನಾಡಿನಲ್ಲಿ ಕನಿಷ್ಠ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಂಗಳವಾರ(ಡಿ.5) ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ, ಸೋಮವಾರ ತಿರುಪತಿ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಗುಡಿಸಲು ಗೋಡೆ ಕುಸಿದು ಬಾಲಕ ಮೃತಪಟ್ಟಿದ್ದಾನೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶಕ ಬಿ ಆರ್ ಅಂಬೇಡ್ಕರ್ ಹೇಳಿದ್ದಾರೆ.
ಬಾಪಟ್ಲಾ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದರೆ, ಸಾವಿಗೆ ಚಂಡಮಾರುತ ಕಾರಣವಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ವಕುಲ್ ಜಿಂದಾಲ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ತೆಲಂಗಾಣ: ಎಬಿವಿಪಿಯಿಂದ ಫೈರ್ ಬ್ರಾಂಡ್ ನಾಯಕನವರೆಗೆ; ರೇವಂತ್ ರೆಡ್ಡಿ ನಡೆದುಬಂದ ಹಾದಿ
ಭಾರತೀಯ ಹವಾಮಾನ ಇಲಾಖೆ ತನ್ನ ಇತ್ತೀಚಿನ ಬುಲೆಟಿನ್ ಪ್ರಕಾರ, ಸದ್ಯ ಚಂಡಮಾರುತವು ದುರ್ಬಲಗೊಂಡಿದ್ದು, ಬಾಪಟ್ಲಾದಿಂದ ಸುಮಾರು 100 ಕಿಮೀ ಉತ್ತರ ವಾಯವ್ಯ ಮತ್ತು ಖಮ್ಮಮ್‌ನಿಂದ 50 ಕಿಮೀ ಆಗ್ನೇಯಕ್ಕೆ ಕೇಂದ್ರೀಕೃತವಾಗಿದೆ. ಮುಂದಿನ 6 ಗಂಟೆಗಳಲ್ಲಿ ಚಂಡಮಾರುತವು ಮತ್ತಷ್ಟು ದುರ್ಬಲಗೊಳ್ಳಲಿದೆ” ಎಂದು ತಿಳಿಸಿದೆ.
ನೆರೆಯ ಆಂಧ್ರಪ್ರದೇಶದ ಕರಾವಳಿಯನ್ನು ದಾಟಿದ ನಂತರ, ಒಡಿಶಾದ ದಕ್ಷಿಣ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ ಚಂಡಮಾರುತದ ಪ್ರಭಾವದಿಂದ ಮಳೆಯ ತೀವ್ರತೆಯನ್ನು ಹೆಚ್ಚಿಸಿವೆ.
ತೀವ್ರ ಚಂಡಮಾರುತದಿಂದ ಆಂಧ್ರದ 10 ಸ್ಥಳಗಳ ಪೈಕಿ ತಿರುಪತಿಯಲ್ಲಿ ಏಳು, ನೆಲ್ಲೂರಿನ ಮೂರು ಸ್ಥಳಗಳಲ್ಲಿ ಮಂಗಳವಾರ 200 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ. ನೆಲ್ಲೂರು ಜಿಲ್ಲೆಯ ಮನುಬೋಳುವಿನಲ್ಲಿ 366.5 ಮಿ.ಮೀ ಮಳೆ ದಾಖಲಾಗಿದೆ.
ಬುಧವಾರ, ವಿಶಾಖಪಟ್ಟಣಂ, ವಿಜಯನಗರಂ, ಅಲ್ಲೂರಿ ಸೀತಾರಾಮ ರಾಜು, ಅನಕಾಪಲ್ಲಿ, ಕಾಕಿನಾಡ, ಕೋನಸೀಮಾ ಮತ್ತು ಏಲೂರು ಜಿಲ್ಲೆಗಳಲ್ಲಿ 64.5 ಮಿಮೀ ನಿಂದ 115.5 ಮಿಮೀ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂತ್ರಸ್ತ ಜಿಲ್ಲೆಗಳಿಗೆ ಆಂಧ್ರ ಸರ್ಕಾರ ಪರಿಹಾರ ಕಾರ್ಯಗಳಿಗಾಗಿ 23 ಕೋಟಿ ರೂ. ಘೋಷಿಸಿದೆ.
ರೇವಂತ್ ರೆಡ್ಡಿ ಸೂಚನೆ
ಡಿಸೆಂಬರ್ 7 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಕಾಂಗ್ರೆಸ್‌ನ ತೆಲಂಗಾಣ ಘಟಕದ ಮುಖ್ಯಸ್ಥ ಎ ರೇವಂತ್ ರೆಡ್ಡಿ, ರಾಜ್ಯದ ವಿವಿಧ ಜಿಲ್ಲೆಗಳ ಮೇಲೆ ಮಿಚಾಂಗ್ ಚಂಡಮಾರುತದ ಪ್ರಭಾವದ ಬಗ್ಗೆ ಐಎಂಡಿಯ ಎಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಜಾಗರೂಕರಾಗಿರಬೇಕು ಎಂದು ಮಂಗಳವಾರ ಹೇಳಿದ್ದಾರೆ.
ಭತ್ತದ ಬೆಳೆ ಹಾನಿಯಾಗದಂತೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರೇವಂತ್ ರೆಡ್ಡಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಈ ನಡುವೆ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಭಾರೀ ಹಾನಿಯಿಂದಾಗಿ 5,060 ಕೋಟಿ ರೂಪಾಯಿಗಳ ಮಧ್ಯಂತರ ಆರ್ಥಿಕ ನೆರವು ಕೋರಿ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಚಂಡಮಾರುತವು ಸಮೀಪಿಸುತ್ತಿದ್ದಂತೆ ಕಳೆದ ಎರಡು ದಿನಗಳಲ್ಲಿ ಎತ್ತರದ ಅಲೆಗಳು ದಕ್ಷಿಣ ಕರಾವಳಿ ಪಟ್ಟಣಗಳಿಗೆ ಅಪ್ಪಳಿಸಿದವು. ಇಡೀ ಹಳ್ಳಿಗಳನ್ನು ಮುಳುಗಿಸಿತು. ಇದರಿಂದ 3,90,000 ಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದಾರೆ.
ಚೆನ್ನೈನಲ್ಲಿ ಮಳೆ ನಿಂತು ಒಂದು ದಿನ ಕಳೆದರೂ ಇನ್ನೂ ನೀರು ಇಳಿದಿಲ್ಲ. ಪ್ರವಾಹ ಪರಿಹಾರ ಕಾರ್ಯಾಚರಣೆಗಾಗಿ ಚೆನ್ನೈನಲ್ಲಿ ಐಎಎಫ್ ಚೇತಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.