ವಿವಾಹ ಮಂಟಪದಲ್ಲಿ ಮದುವೆ ಸಮಾರಂಭವನ್ನು ನಡೆಸಿದ್ದಕ್ಕಾಗಿ ದಲಿತ ಕುಟುಂಬವೊಂದಕ್ಕೆ ಸವರ್ಣಿಯರ ಗುಂಪೊಂದು ಅಮಾನುಷವಾಗಿ ಕೋಲು ಮತ್ತು ರಾಡ್‌ಗಳಿಂದ ಥಳಿಸಿದ ಘಟನೆ ಉತ್ತರ ಪ್ರದೇಶದ ರಾಸ್ರಾದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಪೊಲೀಸರು ಭಾನುವಾರ ತಿಳಿಸಿದ್ದಾರೆ. ದಾಳಿ ನಡೆಸುವ ಮುನ್ನ ಗುಂಪು, “ದಲಿತ ಸಮುದಾಯದವರಾಗಿದ್ದು, ನೀವು ಹಾಲ್‌ನಲ್ಲಿ(ಮದುವೆ ಮಂಟಪ) ಮದುವೆಯನ್ನು ಹೇಗೆ ನಡೆಸುತ್ತಿದ್ದೀರಿ” ಎಂದು ಪ್ರಶ್ನಿಸಿದ್ದಾರೆ. ಬಳಿಕ ಅಮಾನುಷವಾಗಿ ಥಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ಕುದುರೆ ಮೇಲೆ ಮೆರವಣಿಗೆ: ದಲಿತ ವರನ ಮೇಲೆ 40 ಮಂದಿ ಪ್ರಬಲ ಜಾತಿಯ ದುರುಳರಿಂದ ಹಲ್ಲೆ
ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯೊಬ್ಬರ ಸಹೋದರ ರಾಘವೇಂದ್ರ ಗೌತಮ್ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಸುಮಾರು 20ಕ್ಕೂ ಅಧಿಕ ಜನರ ಗುಂಪು ರಾತ್ರಿ 10:30 ರ ಸುಮಾರಿಗೆ ಸ್ವಯಂವರ ಮದುವೆ ಮಂಟಪಕ್ಕೆ ನುಗ್ಗಿ ಕೋಲು ಮತ್ತು ರಾಡ್‌ಗಳಿಂದ ಎಲ್ಲರ ಮೇಲೆ ದಾಳಿ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಾಗೆಯೇ ಮಲ್ಲಾಹ್ ಟೋಲಿ ಪ್ರದೇಶದ ಅಮನ್ ಸಾಹ್ನಿ, ದೀಪಕ್ ಸಾಹ್ನಿ, ರಾಹುಲ್ ಮತ್ತು ಅಖಿಲೇಶ್ ಮತ್ತು 15-20 ಅಪರಿಚಿತ ವ್ಯಕ್ತಿಗಳು ಈ ಗುಂಪಿನಲ್ಲಿದ್ದರು ಎಂದು ದೂರುದಾರರು ತಿಳಿಸಿದ್ದಾರೆ. ಶುಕ್ರವಾರ ಘಟನೆ ನಡೆದಿದ್ದರೂ ಈ ಘಟನೆಗೆ ಸಂಬಂಧಿಸಿ ಈವರೆಗೂ ಯಾರನ್ನೂ ಬಂಧಿಸಲಾಗಿಲ್ಲ.
ಇದನ್ನು ಓದಿದ್ದೀರಾ? ಗುಜರಾತ್ | ಪ್ರಬಲ ಜಾತಿ ಮಗುವನ್ನು ‘ಬೇಟಾ’ ಎಂದಿದ್ದಕ್ಕೆ ದಲಿತನ ಹತ್ಯೆ
ಗೌತಮ್ ಅವರ ಸಂಬಂಧಿಕರಾದ ಅಜಯ್ ಕುಮಾರ್ ಮತ್ತು ಮನನ್ ಕಾಂತ್ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಾಸ್ರಾ ಪೊಲೀಸ್ ಠಾಣೆಯ ಉಸ್ತುವಾರಿ ವಿಪಿನ್ ಸಿಂಗ್ ದೃಢಪಡಿಸಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಜಾತಿ ದೌರ್ಜನ್ಯ
ದೇಶ ಎಷ್ಟು ಅಭಿವೃದ್ಧಿಯಾದರೂ ಜಾತಿ ದೌರ್ಜನ್ಯ ಇಂದಿಗೂ ಜೀವಂತವಾಗಿ ಉಳಿದಿದೆ. ಸಾಂವಿಧಾನಿಕ ರಕ್ಷಣೆ, ಕಾನೂನು ರಕ್ಷಣೆ ಇದ್ದರೂ ದೇಶದಲ್ಲಿ ದಲಿತರ ಮೇಲೆ ವ್ಯವಸ್ಥಿತ ಹಿಂಸೆ, ತಾರತಮ್ಯ ಮುಂದುವರೆದಿದೆ. ಅಲ್ಲಲ್ಲಿ ದಲಿತರು ಸಾಮಾಜಿಕ ಬಹಿಷ್ಕಾರವನ್ನು ಎದುರಿಸುತ್ತಲೇ ಇದ್ದಾರೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದ ಕುಟುಂಬ ಕೊಂಚ ಸಂಭ್ರಮದಿಂದ ವಿವಾಹ ನಡೆಸಿದರೆ, ದೇವಾಲಯಕ್ಕೆ ಪ್ರವೇಶಿಸಿದರೆ ಅದಕ್ಕೆ ಸವರ್ಣಿಯರ ವಿರೋಧ, ದಾಳಿ ಇಂದಿಗೂ ನಿಂತಿಲ್ಲ. ಜಾತಿ ದೌರ್ಜನ್ಯ ಹಲ್ಲೆಗೆ ಕೊನೆಯಾಗಿಲ್ಲ, ಹತ್ಯೆಯೂ ನಡೆಯುತ್ತಿದೆ. ಇತ್ತೀಚೆಗೆ ಗುಜರಾತ್‌ನಲ್ಲಿ ಪ್ರಬಲ ಜಾತಿಯ ಮಗುವನ್ನು ‘ಮಗು’ ಎಂದು ಕರೆದಿದ್ದಕ್ಕೆ ಹತ್ಯೆ ಮಾಡಲಾಗಿದೆ. ಅನ್ಯ ಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ, ಬಾವಿಯಿಂದ ನೀರು ತೆಗೆದಿದ್ದಕ್ಕೆ ಹೀಗೆ ದಲಿತ ಎಂಬ ಕಾರಣಕ್ಕೆ ಹತ್ಯೆ, ಹಲ್ಲೆ ಕೃತ್ಯಗಳು ಅಲ್ಲಲ್ಲಿ ವರದಿಯಾಗುತ್ತಿದೆ.
