ದಲಿತ ಯುವಕನೊಬ್ಬನ ಆತ್ಮಹತ್ಯೆಯ ನಂತರ ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಕೊಪ್ರಾಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನದಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮೃತ ಯುವಕನನ್ನು ವಿಠಲ್ ನಿತಿನ್ ಕಾಂತಿಲಾಲ್ ಶಿಂಧೆ ಎಂದು ಗುರುತಿಸಲಾಗಿದೆ. ಗ್ರಾಮದ ಸ್ಥಳೀಯ ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸಿದ ನಂತರ ಮೇಲ್ಜಾತಿ ಯುವಕರು ಹಲ್ಲೆ ನಡೆಸಿ ನಿಂದಿಸಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರದಿಯ ಪ್ರಕಾರ ವಿಠಲ್ ಹಿಂದೂ ಮಹರ್ ದಲಿತ ಸಮುದಾಯದ ಸದಸ್ಯರಾಗಿದ್ದರು. ಮೇಲ್ಜಾತಿ ಮರಾಠ ಸಮುದಾಯದ ಕೆಲವರಿಂದ ವಿರೋಧಕ್ಕೆ ಒಳಗಾಗಿದ್ದರು.
ಎಫ್‌ಐಆರ್‌ನಲ್ಲಿರುವಂತೆ ವಿಠಲ್ ತಂದೆ ಕಾಂತಿಲಾಲ್ ಅವರ ಹೇಳಿಕೆಯ ಪ್ರಕಾರ, ಮೇ 1ರಂದು ತಮಾಷ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮೇಲ್ಜಾತಿ ಯುವಕರು ನಿಂದಿಸಿ ವಿಠಲ್ ಮೇಲೆ ಹಲ್ಲೆ ನಡೆಸಿದ್ದಾರೆ. ವಿಠಲ್‌ನನ್ನು ಸ್ಮಶಾಣ ಭೂಮಿಗೆ ಕರೆದೋಯ್ದು ಅಲ್ಲಿಯೂ ಜಗಳ ಪ್ರಾರಂಭಿಸಿ ಆತನ ಮೈಮೇಲಿದ್ದ ಬಟ್ಟೆಯನ್ನು ಬಲವಂತವಾಗಿ ಕಿತ್ತೆಸೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಗಾಯಗೊಂಡು ಮನೆಗೆ ಮರಳಿದ ವಿಠಲ್ ಮೇಲ್ಜಾತಿ ಜನರ ದೌರ್ಜನ್ಯ ಹಾಗೂ ಅವಮಾನದಿಂದ ಮನನೊಂದು ಮರುದಿನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಆತ್ಮಹತ್ಯೆ ಚೀಟಿ ಬರೆದಿಟ್ಟಿದ್ದು, ಇದರಲ್ಲಿ ಇಬ್ಬರು ಪ್ರಮುಖ ಆರೋಪಿಗಳ ಬಗ್ಗೆ ವಿವರಿಸಿದ್ದಾರೆ.
ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿರುವ ಪೊಲೀಸರು ಆರೋಪಿಗಳ ವಿರುದ್ಧ ಎಸ್‌ಸಿಎಸ್‌ಟಿ ದೌರ್ಜನ್ಯ ಕಾಯ್ದೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ. ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಪತ್ತೆ ಕಾರ್ಯ ನಡೆಸುತ್ತಿದ್ದಾರೆ.
ಘಟನೆಯ ನಂತರ ವಿಠಲ್ ಕುಟುಂಬದವರ ಜೊತೆ ಗ್ರಾಮಸ್ಥರು ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದರು. ಮೃತ ವಿಠಲ್ ಪೋಷಕರ ಜೊತೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
