ವಿದ್ಯುತ್ ತಂತಿ ಕಳ್ಳತನದ ಆರೋಪದ ಮೇಲೆ ವಿದ್ಯುತ್ ಇಲಾಖೆಯ ಭದ್ರತಾ ಸಿಬ್ಬಂದಿ ದಲಿತ ಯುವಕನೊಬ್ಬನನ್ನು ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ರತುಸಾರ್ ಗ್ರಾಮವೊಂದರಲ್ಲಿ ನಡೆದಿದೆ.
ರತುಸಾರ್ ಗ್ರಾಮದವರಾದ ಕನ್ನಯ್ಯಲಾಲ್ ಮೇಘಾವಾಲ್ ಹತ್ಯೆಯಾದ ದಲಿತ ಸಮುದಾಯದ ಯುವಕ. ಕನ್ನಯ್ಯಲಾಲ್ ಮೇಘಾವಾಲ್ ಹಾಗೂ ಗಂಗಾರಾಮ್ ಮೇಘಾವಾಲ್ ಎಂಬುವವರು 400ಕೆವಿ ಹೈಟೆನ್ಷನ್ ಸಾಮರ್ಥ್ಯದ ವಿದ್ಯುತ್ ತಂತಿಯನ್ನು ಕಳವು ಮಾಡಿದ್ದಾರೆ ಎಂಬ ಶಂಕೆಯ ಮೇಲೆ ವಿದ್ಯುತ್ ಇಲಾಖೆಯ ನಾಲ್ವರು ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಕನ್ನಯ್ಯಲಾಲ್ ಮೇಘಾವಾಲ್ ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಗಂಗಾರಾಮ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಮಿತ್ ಶರ್ಮಾ, ಗೋವಿಂದ್ ಶರ್ಮಾ, ಭಾರತ್ ಸಿಂಗ್ ಹಾಗೂ ಸಂಜಯ್ ಯಾದವ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಕನ್ನಯ್ಯಲಾಲ್ ಮೇಘಾವಾಲ್ ಮೃತದೇಹವನ್ನು ಸ್ವೀಕರಿಸಲು ಕುಟುಂಬಸ್ಥರು ನಿರಾಕರಿಸಿದ್ದು, ಆರೋಪಿಗಳ ಶೀಘ್ರ ಬಂಧನದ ಜೊತೆ ಕುಟುಂಬಸ್ಥರಿಗೆ ಒಂದು ಕೋಟಿ ರೂ. ಪರಿಹಾರ ಹಾಗೂ ಸರ್ಕಾರಿ ನೌಕರಿಯನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ಮೃತ ಕನ್ನಯ್ಯಲಾಲ್ ಮೇಘಾವಾಲ್ ಅವರ ಪುತ್ರ, ಸ್ಥಳೀಯ ಶಾಸಕ ಅವರ ನೇತೃತ್ವದಲ್ಲಿ ನೂರಾರು ಮಂದಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.