ದಲಿತ ಮಹಿಳೆಯರ ಮೇಲೆ ಗುಜರಾತ್ ಹಾಗೂ ಮಧ್ಯ ಪ್ರದೇಶದಲ್ಲಿ ಎರಡು ಘನಘೋರ ದುರಂತಗಳು ನಡೆದಿರುವ ಪ್ರಕರಣ ಬೆಳಕಿಗೆ ಬಂದಿವೆ.
ಮೂರು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ನಿರಾಕರಿಸಿದ್ದಕ್ಕಾಗಿ ನಾಲ್ವರು ಸವರ್ಣೀಯರು 45 ವರ್ಷದ ದಲಿತ ಮಹಿಳೆಯೊಬ್ಬರನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ.
ಶೈಲೇಶ್ ಕೋಲಿ, ರೋಹಲ್ ಕೋಲಿ ಮತ್ತು ಇವರ ಇಬ್ಬರು ಅಪರಿಚಿತ ಸಹಚರರು ಮಾರಕಾಸ್ತ್ರಗಳಿಂದ ದಲಿತ ಸಮುದಾಯದ ಗೀತಾಬೆನ್ ಮಾರು ಅವರ ಮೇಲೆ ಹಲ್ಲೆ ನಡೆಸಿದ್ದು, ಮಹಿಳೆಯು ಸೋಮವಾರ(ನ.27) ರಂದು ಮೃತಪಟ್ಟಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್‌ಆರ್ ಸಿಂಘಾಲ್ ಹೇಳಿದ್ದಾರೆ.
ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಕೊಲೆ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಲ ಬಾಚುವ ಮೃತ ಕಾರ್ಮಿಕನ ಪತ್ನಿಗೆ 30 ಲಕ್ಷ ರೂ. ಪರಿಹಾರ ನೀಡಲು ದೆಹಲಿ ಹೈಕೋರ್ಟ್ ಆದೇಶ
ಮಹಿಳೆಯ ಹತ್ಯೆ ಬಗ್ಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಗುಜರಾತಿನ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, “ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಭಾವನಗರ ಜಿಲ್ಲೆಯ ಗೌತಮ್ ಮಾರು ಎಂಬ ಯುವಕನ ಮೇಲೆ ಸಮಾಜ ವಿರೋಧಿ ಶಕ್ತಿಗಳು ದಾಳಿ ನಡೆಸಿದ್ದಾರೆ. ಹಲ್ಲೆ ನಂತರ ಈತನ ತಾಯಿ ಪೊಲೀಸ್ ದೂರು ದಾಖಲಿಸಿದರು. ಪ್ರಕರಣವು ನ್ಯಾಯಾಲಯಕ್ಕೆ ತಲುಪುತ್ತಿದ್ದಂತೆ, ಆರೋಪಿಗಳು ರಾಜಿ ಮಾಡಿಕೊಳ್ಳಲು ದೂರುದಾರರಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು.
ಆದಾಗ್ಯೂ, ಗೌತಮ್ ಅವರ ಕುಟುಂಬ ನಿರಾಕರಿಸಿತು ಮತ್ತು ನ್ಯಾಯಾಲಯದ ಮೂಲಕ ನ್ಯಾಯವನ್ನು ಪಡೆಯಲು ನಿರ್ಧರಿಸಿತು. ಕೆಲ ದಿನಗಳ ಹಿಂದೆ ಆರೋಪಿಗಳು ಗೌತಮ್ ಅವರ ತಾಯಿ ಗೀತಾಬೆನ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆಯನ್ನು ಭಾವನಗರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಂವಿಧಾನದ ದಿನದಂದು ಈ ದಾಳಿ ನಡೆದಿದ್ದು, ರಾಜ್ಯದಲ್ಲಿ ಗೂಂಡಾಗಿರಿಯ ದುಷ್ಕೃತ್ಯ ಎಲ್ಲೆ ಮೀರಿದೆ. ಗುಜರಾತ್ ಸರ್ಕಾರವು ಯಾವಾಗಲೂ ದಲಿತರು, ವಂಚಿತರು ಮತ್ತು ಶೋಷಿತರ ದೌರ್ಜನ್ಯದ ವಿಷಯದಲ್ಲಿ ಮೂಕ ಪ್ರೇಕ್ಷಕನಾಗಿದೆ” ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಮಧ್ಯ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರ
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ 17 ವರ್ಷದ ಯುವತಿಯ ಮೇಲೆ ಯುವಕನೊಬ್ಬ ತನ್ನ ಇತರ ಮೂವರು ಸ್ನೇಹಿತರ ಜತೆಗೆ ಅತ್ಯಾಚಾರ ಎಸಗಿದ ಘಟನೆ ಸೋಮವಾರ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.
ಸಂತ್ರಸ್ತ ಯುವತಿ ದಲಿತ ಸಮುದಾಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಿದ್ದು, ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ ಎನ್ನಲಾಗುತ್ತಿದೆ.
ನವೆಂಬರ್ 21ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ನಾಲ್ಕು ದಿನಗಳ ಬಳಿಕ ಯುವತಿ ದೂರು ನೀಡಿದ್ದಾಳೆ. ಈ ಘಟನೆಯನ್ನು ಬಹಿರಂಗಪಡಿಸದಂತೆ ಆರೋಪಿಗಳು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ದೂರು ನೀಡಲು ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯುವತಿ ಹಾಗೂ ಆಕೆಯ ಕುಟುಂಬದವರು ದೂರು ನೀಡಿದ್ದನ್ನು ಹೆಚ್ಚುವರಿ ಎಸ್ಪಿ ನಿರಂಜನ್ ಶರ್ಮಾ ತಿಳಿಸಿದ್ದಾರೆ.
ಈ ಯುವತಿ ಕಳೆದ ವರ್ಷ ಯುವಕನ ಜತೆಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ್ದಳು. ನವೆಂಬರ್ 21ರಂದು ಆರೋಪಿ ನಿರ್ಜನ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದು ಇತರ ಮೂವರು ಸ್ನೇಹಿತರ ಜತೆಗೆ ಅತ್ಯಾಚಾರ ಎಸಗಿದ್ದಾನೆ. ಈ ಪೈಕಿ ಒಬ್ಬ ಆರೋಪಿ ಪ್ರಭಾವಿ ರಾಜಕಾರಣಿಯೊಬ್ಬರ ನಿಕಟ ಸಂಬಂಧಿ ಎಂದು ಪೊಲೀಸ್ ಮೂಲಗಳು ಹೇಳಿವೆ.
ಅತ್ಯಾಚಾರವೆಸಗಿದ ಬಳಿಕ ಯುವತಿಗೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ. ಆರೋಪಿಗಳ ವಿರುದ್ಧ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ), ಮತ್ತು 377 (ಅಸ್ವಾಭಾವಿಕ ಕೃತ್ಯ) ಇತರವುಗಳ ಅಡಿಯಲ್ಲಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.