ಪೊಲೀಸ್ ಕಾನ್ಸ್ಟೆಬಲ್ ಒಬ್ಬ 25 ವರ್ಷದ ದಲಿತ ಮಹಿಳೆಯೊಬ್ಬಳನ್ನು ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ಇಂದು ನಡೆದಿದೆ.
ಮಹಿಳೆಯ ಶವ ಪೊಲೀಸ್ ಕಾನ್ಸ್ಟೆಬಲ್ ಬಾಡಿಗೆಯಿದ್ದ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೊಲೀಸರ ವರದಿಯ ಪ್ರಕಾರ ಮಹಿಳೆಯು ಪೊಲೀಸ್ ಕಾನ್ಸ್ಟೆಬಲ್ ಮನೆಗೆ ಘಟನೆ ಸಂಭವಿಸಿದ ಒಂದು ದಿನ ಮುನ್ನ ಭೇಟಿ ನೀಡಿದ್ದರು.
“27 ವರ್ಷದ ಪೊಲೀಸ್ ಕಾನ್ಸ್ಟೆಬಲ್ ರಾಘವೇಂದ್ರ ಸಿಂಗ್ ಎಂಬಾತನನ್ನು 25 ವರ್ಷದ ದಲಿತ ಸಮುದಾಯದ ಮಹಿಳೆಯ ಕೊಲೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 306, 376 ಹಾಗೂ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಸಹಾಯಕ ಪೊಲೀಸ್ ಆಯುಕ್ತರಾದ ಆರ್ ಕೆ ಸಿಂಗ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಅತಿಥಿ ಉಪನ್ಯಾಸಕರು ಇತ್ತ ಸರಕಾರ; ನಡುವೆ ನಲುಗದಿರಲಿ ವಿದ್ಯಾರ್ಥಿಗಳು
“ಮೂಲತಃ ಝಾನ್ಸಿಯ ಪ್ರದೇಶದವನಾದ ಕಾನ್ಸ್ಟೆಬಲ್ ರಾಘವೇಂದ್ರ ಸಿಂಗ್ ಆಗ್ರಾದ ಬೆಳನ್ಗಂಜ್ ಪ್ರದೇಶದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ. ಮೃತ ಮಹಿಳೆ ಹಾಗೂ ಆರೋಪಿ ಕಲೇದ ಕೆಲ ದಿನಗಳಿಂದ ಪರಿಚಿತರಾಗಿದ್ದರು. ಮಹಿಳೆಯು ಸ್ಥಳೀಯ ಖಾಸಗಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಳು” ಎಂದು ಆರ್ ಕೆ ತಿಳಿಸಿದ್ದಾರೆ.
ಮಹಿಳೆಯ ಕುಟುಂಬದ ಸದಸ್ಯರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
ಝಾನ್ಸಿಯಲ್ಲಿ ಮಹಿಳೆ ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ದಿನದಿಂದಲೂ ಆರೋಪಿಯು ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಎಂದು ಮಹಿಳೆಯ ಸಹೋದರ ತಿಳಿಸಿದ್ದಾರೆ.
“ನಾವು ರಾಘವೇಂದ್ರ ಸಿಂಗ್ ಮನೆಗೆ ಕೂಡ ಭೇಟಿ ನೀಡಿದ್ದೆವು. ಆದರೆ ನಮ್ಮ ತಂಗಿಯೊಟ್ಟಿಗೆ ಮದುವೆ ಪ್ರಸ್ತಾಪವನ್ನು ಆರೋಪಿಯ ಕುಟುಂಬ ನಿರಾಕರಿಸಿತ್ತು. ಆದರೂ ಈತ ನಮ್ಮ ತಂಗಿಯೊಂದಿಗೆ ಸಂಪರ್ಕದಲ್ಲಿದ್ದ” ಎಂದು ಮಹಿಳೆಯ ಸಹೋದರ ತಿಳಿಸಿದ್ದಾರೆ.