ಭಾರತದಂತಹ ಬಹು ಸಂಸ್ಕೃತಿಯ ದೇಶಕ್ಕೆ ʼಜಾತಿʼ ಒಂದು ಪಿಡುಗು ಎನ್ನುವುದನ್ನು ಮತ್ತೆ ಮತ್ತೆ ಹೇಳುವ ಅಗತ್ಯವೇ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾದರೂ ಈ ಜಾತಿ ಆಧಾರಿತ ಹಿಂಸಾಚಾರಗಳಿಂದ ಭಾರತೀಯ ಸಮಾಜ ಇನ್ನೂ ಮುಕ್ತವಾಗಿಲ್ಲ. ಇತ್ತೀಚೆಗಂತೂ ದಿನಾ ಒಂದಿಲ್ಲೊಂದು ಪ್ರಕರಣಗಳು ಎಸ್ಟಿ/ಎಸ್ಸಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ದಾಖಲಾಗುತ್ತಲೇ ಇದೆ. ಕಾನೂನು ಕ್ರಮಗಳು ಎಷ್ಟೇ ಬಿಗಿಯಾಗಿದ್ದರೂ ಕೂಡಾ ಅದನ್ನೂ ಮೀರಿದ ಹಿಂಸಾಚಾರಗಳು ನಡೆಯತ್ತಿರುವುದು ಶೋಚನೀಯ.
ಜಾತಿ ನಿಂದನೆ, ದೇವಸ್ಥಾನ ಪ್ರವೇಶಿಸಿದ್ದಕ್ಕೆ, ಜೀತಪದ್ದತಿಗೆ ನಿರಾಕರಿಸಿದ್ದಕ್ಕೆ ದಲಿತ ವ್ಯಕ್ತಿಗೆ ಗ್ರಾಮಸ್ಥರಿಂದ ಥಳಿತ, ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಪ್ರೀತಿ ವಿಚಾರಕ್ಕೆ ಮರ್ಯಾದಾಹತ್ಯೆ… ಇವೆಲ್ಲದರ ನಡುವೆ ಈಗ ದಲಿತ ಯುವಕರು ಗಡ್ಡ ಮೀಸೆಯನ್ನೂ ಬೆಳೆಸಬಾರದಂತೆ. ಅದು ಮೇಲ್ಜಾತಿಗಳಿಗೆ ಮಾತ್ರ ಮೀಸಲಾಗಿದೆಯಂತೆ!
ಇಂತಹದೊಂದು ಅಮಾನವೀಯ ಘಟನೆ ಗುಜರಾತ್ನ ಜುನಾಗಢ್ ಜಿಲ್ಲೆಯ ಖಂಬೋಲಿಯಾ ಗ್ರಾಮದಲ್ಲಿ ಆಗಸ್ಟ್ 11ರಂದು ನಡೆದಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಗಡ್ಡ ಮೀಸೆ ಬಿಟ್ಟಿರುವ ಕಾರಣಕ್ಕೆ ದಲಿತ, ಕಾರ್ಮಿಕ ಯುವಕನಾಗಿರುವ ಸಾಗರ್ ಮಕ್ವಾನ್ ಮತ್ತು ಅವರ ಮಾವ ಜೀವನ್ಭಾಯ್ ವಾಲಾ ಅವರ ಮೇಲೆ ಜಾತಿವಾದಿ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಸಾಗರ್ ತನ್ನ ಬೈಕ್ ರಿಪೇರಿ ಮಾಡಿಸಲು ಖಂಬೋಲಿಯಾಕ್ಕೆ ಹೋಗಿದ್ದರು. ಆದರೆ ಗ್ಯಾರೇಜ್ ಮುಚ್ಚಿದ್ದರಿಂದ ಮರಳಿ ತನ್ನ ಮನೆಗೆ ತೆರಳುತ್ತಿದ್ದಾಗ, ನವಿ ಚಾವಂದ್ ಗ್ರಾಮದ ಶೈಲೇಶ್ ಜೆಬಾಲಿಯಾ ಎಂಬವರು ರೈಲ್ವೇ ಸೇತುವೆಯ ಬಳಿ ಸಾಗರ್ನನ್ನು ತಡೆದಿದ್ದಾರೆ. ಬೈಕ್ನಿಂದ ಅವರನ್ನು ಕೆಡವಿ ಗಡ್ಡ ಮತ್ತು ಮೀಸೆ ಬಿಟ್ಟಿದ್ದಾರೆ ಎಂಬ ಕಾರಣಕ್ಕೆ ಜಾತಿ ನಿಂದನೆ ಮಾಡಿದ್ದಾರೆ.
ಇದರಿಂದ ಭಯಗೊಂಡ ಸಾಗರ್ ತನ್ನ ಮಾವನಿಗೆ ಸಹಾಯಕ್ಕಾಗಿ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಆ ಸ್ಥಳಕ್ಕೆ ಲಾಲೋ ಭೂಪತ್ ಮತ್ತು ಮೂವರು ಅಪರಿಚಿತ ವ್ಯಕ್ತಿಗಳು ನಂಬರ್ ಪ್ಲೇಟ್ ಇಲ್ಲದ ಬಿಳಿ ಕಾರೊಂದರಲ್ಲಿ ಬಂದು ಹಲ್ಲೆ ನಡೆಸಲು ಆರಂಭಿಸಿದ್ದಾರೆ. ಜಾತಿ ನಿಂದನೆಯ ಜೊತೆಗೆ ಹಿಂಸಾತ್ಮಕ ದಾಳಿ ಮಾಡುತ್ತಾ ಜೀವನ್ಬಾಯಿ ಅವರಿಗೆ ಕಪಾಳಮೋಕ್ಷ ಮಾಡಿ, ಸಾಗರ್ನನ್ನು ಕಾರಿನ ಚಕ್ರಕ್ಕೆ ತಳ್ಳಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ಒಟ್ಟು ಸೇರುತ್ತಿದ್ದಂತೆ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.
ಪ್ರಸ್ತುತ ಸಂತ್ರಸ್ತರು ಇಬ್ಬರೂ ಜುನಾಗಢ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ. ಆರೋಪಿಗಳಾದ ಶೈಲೇಶ್ ಜೆಬಾಲಿಯಾ, ಲಾಲೋ ಕಥಿ ದರ್ಬಾರ್ ಮತ್ತು ಮೂರು ಅಪರಿಚಿತರ ವಿರುದ್ದ ಎಸ್ಟಿ/ಎಸ್ಸಿ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಎಸ್ಪಿ ರೋಹಿತ್ ಕುಮಾರ್ ಡಾಗರ್, “ಸಧ್ಯಕ್ಕೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಗುಜರಾತ್ನ ಗ್ರಾಮೀಣ ಭಾಗದಲ್ಲಿ ಆಳವಾಗಿ ಬೇರೂರಿವ ಜಾತಿ ತಾರತಮ್ಯದ ಘರ್ಷಣೆಗಳು ಮತ್ತೆ ಕಳವಳ ಹುಟ್ಟುಹಾಕಿದೆʼ ಎಂದರು.
ಭಾರತದಲ್ಲಿ ಬಲಾಡ್ಯರ ಅಡಿಯಾಳಾಗಿರುವ ವ್ಯವಸ್ಥೆಯು ಇಂದಿಗೂ ತಳಸಮುದಾಯಗಳು ಮುನ್ನಲೆಗೆ ಬರುವುದನ್ನು ಸಹಿಸುತ್ತಲೇ ಇಲ್ಲ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಂವಿಧಾನದಂತಹ ಸಮಾನತೆಯನ್ನು ಸಾರುವ ವ್ಯವಸ್ಥೆಗಳು ಜಾರಿಯಲ್ಲಿದ್ದರೂ ತಳಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕೊನೆ ಇಲ್ಲದಂತಾಗಿದೆ. ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವ ಈ ಕಾಲಗಟ್ಟದಲ್ಲಿಯೂ ಶೋಷಿತರ, ತಳಸಮುದಾಯಗಳ ಮೇಲೆ ನಡೆಯತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎಂದರೆ ನಮ್ಮ ವ್ಯವಸ್ಥೆಗಳು ಹಿಮ್ಮುಖವಾಗಿ ಸಾಗುತ್ತಿರುವುದರ ಬಗ್ಗೆ ಪ್ರಶ್ನೆ ಮಾಡಬೇಕಾಗಿದೆ.