ಉಷ್ಣೋಗ್ರತೆಯನ್ನು ಸಹಿಸುವ ಶಕ್ತಿಯು ಜಾತಿಗಳನ್ನು ಆಧರಿಸಿದ ಉದ್ಯೋಗ ವ್ಯವಸ್ಥೆಯನ್ನು ಪ್ರತಿಬಿಂಬಿಸಿದೆ. ಪರಿಶಿಷ್ಟರು ಮತ್ತು ಹಿಂದುಳಿದವರ ಸರಾಸರಿ ತಾಪ ಸಹನಾ ಸಾಮರ್ಥ್ಯವು ಇತರರಿಗಿಂತ ಹೆಚ್ಚು ಎಂದು ರಾಷ್ಟ್ರವ್ಯಾಪಿ ಅಧ್ಯಯನವೊಂದು ತಿಳಿಸಿದೆ.
ಪರಿಶಿಷ್ಟ ಜಾತಿ– ಪರಿಶಿಷ್ಟ ಪಂಗಡಗಳು ಹಾಗೂ ಹಿಂದುಳಿದ ವರ್ಗಗಳ ಜನರು ದುಡಿಮೆಯ ವೇಳೆ ಇತರರಿಗಿಂತ ಹೆಚ್ಚು ಉಷ್ಣೋಗ್ರತೆಗೆ ಗುರಿಯಾಗುತ್ತಿದ್ದಾರೆ. ಜಾತಿ ವ್ಯವಸ್ಥೆಯ ಅಸಮಾನತೆಗೆ ಸಂಬಂಧಿಸಿದ ಬಿಸಿ ತಾಪದ ಅನ್ಯಾಯಕ್ಕೆ ಗುರಿಯಾಗುತ್ತಿದ್ದಾರೆಂದು ಅಧ್ಯಯನಗಳು ಹೇಳಿವೆ.
ಉಷ್ಣೋಗ್ರತೆಯನ್ನು ಸಹಿಸುವ ಶಕ್ತಿಯು ಜಾತಿಗಳನ್ನು ಆಧರಿಸಿದ ಉದ್ಯೋಗ ವ್ಯವಸ್ಥೆಯನ್ನು ಪ್ರತಿಬಿಂಬಿಸಿದೆ. ಪರಿಶಿಷ್ಟರು ಮತ್ತು ಹಿಂದುಳಿದವರ ಸರಾಸರಿ ತಾಪ ಸಹನಾ ಸಾಮರ್ಥ್ಯವು ಇತರರಿಗಿಂತ ಹೆಚ್ಚು ಎಂದು ರಾಷ್ಟ್ರವ್ಯಾಪಿ ಅಧ್ಯಯನವೊಂದು ತಿಳಿಸಿದೆ.
ಕೇಂದ್ರ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ನಡೆಸುವ ಭಾರತೀಯ ಕಾರ್ಮಿಕ ಪಡೆ ಸಮೀಕ್ಷೆಯ ದತ್ತಾಂಶವನ್ನು ಶ್ರಮಿಕರು ತಾಪಮಾನಕ್ಕೆ ಗುರಿಯಾಗುವ ಕುರಿತ ಹವಾಮಾನ ದತ್ತಾಂಶದ ಜೊತೆ ಕಲೆಸಿ ನಡೆಸಿದ ಅಧ್ಯಯನದಿಂದ ಈ ಅಂಶ ಹೊರಬಿದ್ದಿದೆ.
‘ಜಾತಿ ಆಧಾರಿತ ಅಸಮಾನತೆಯ ಮತ್ತೊಂದು ಮುಖವನ್ನು ನಮ್ಮ ಅಧ್ಯಯನವು ಬಯಲು ಮಾಡಿದೆ. ಅಧಿಕ ತಾಪಮಾನವನ್ನು ಎದುರಿಸಲು ರೂಪಿಸಲಾಗುವ ನೀತಿ ನಿರ್ಧಾರಗಳು ಈ ಅಂಶವನ್ನು ಗಮನಿಸಬೇಕು’ ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಸಹಾಯಕ ಪ್ರೊಫೆಸರ್ ಅರ್ಪಿತ್ ಶಾ ತಿಳಿಸಿದ್ದಾರೆ. ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ನ ಸ್ನೇಹಲ್ ಥಪ್ಲಿಯಾಲ್, ಗಾಂಧೀನಗರ ಐಐಟಿಯ ವಿಮಲ್ ಮಿಶ್ರಾ, ಬೆಂಗಳೂರು ಐಐಎಂನ ಅನೀಶ್ ಸುಗತನ್ ಮತ್ತು ದೀಪಕ್ ಮಲ್ಘನ್ ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಇತರರು.

ದಲಿತರು, ಬುಡಕಟ್ಟು ಜನರು ಹಾಗೂ ಹಿಂದುಳಿದವರ ತಾಪ ಸಹನಾ ಸಾಮರ್ಥ್ಯವು ಇತರೆ ಸಾಮಾನ್ಯ ವರ್ಗಗಳ ಜನರಿಗಿಂತ ಅಧಿಕ. ಸಾಮಾನ್ಯ ವರ್ಗಗಳ ಶ್ರಮಿಕರು ತಮ್ಮ ದುಡಿಮೆಯ ಅವಧಿಯ ಶೇ.28ರಷ್ಟು ಕಾಲಮಾನವನ್ನು ಅಧಿಕ ಬಿಸಿಲಿನ ತಾಪಮಾನದಲ್ಲಿ ಕಳೆದರೆ ದಲಿತ-ಬುಡಕಟ್ಟು-ಹಿಂದುಳಿದವರು ತಮ್ಮ ದುಡಿಮೆಯ ಕಾಲಮಾನದ ಶೇ.43-49ರಷ್ಟನ್ನು ಉಷ್ಣೋಗ್ರತೆಯಲ್ಲಿ ಕಳೆದಿದ್ದಾರೆ.
ದೇಶದ ಉದ್ದಗಲದ ಕನಿಷ್ಠ ಪಕ್ಷ 65 ಜಿಲ್ಲೆಗಳಲ್ಲಿ ಶೇ.75ರಷ್ಟು ದಲಿತ-ಬುಡಕಟ್ಟು ಜನರು ಮನೆಯ ಹೊರಗಣ ದುಡಿಮೆ ಶೇ.75ರಷ್ಟು ಕಾಲಮಾನವನ್ನು ತೀವ್ರ ತಾಪಮಾನದಲ್ಲಿ ಕಳೆದಿದ್ದಾರೆ. ಸಾಮಾನ್ಯ ವರ್ಗಗಳ ಶೇ.75ರಷ್ಟು ಶ್ರಮಿಕರು ಮನೆಯ ಹೊರಗಿನ ದುಡಿಮೆಯ ಶೇ.22ರಷ್ಟು ತಾಸುಗಳನ್ನು ಮಾತ್ರವೇ ತೀವ್ರ ತಾಪಮಾನದಲ್ಲಿ ಕಳೆದಿದ್ದಾರೆ. 2019 ಮತ್ತು 2022ರ ವರ್ಷಗಳಿಗೆ ಸಂಬಂಧಿಸಿದ ಅಂಕಿಅಂಶಗಳಿವು.
ಈ ಉಷ್ಣೋಗ್ರತೆಯ ಅನ್ಯಾಯದ ಬೇರುಗಳು ಜಾತಿ ವ್ಯವಸ್ಥೆಯ ಅನ್ಯಾಯದಲ್ಲಿವೆ. 1948ರ ಜಾತಿ ಆಧಾರಿತ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯು ಜಾತಿ ಆಧಾರಿತ ಔದ್ಯೋಗಿಕ ಪ್ರತ್ಯೇಕತೆಯು ತಗ್ಗಿಸಿಲ್ಲ. ಶ್ರಮಿಕ ಮಾರುಕಟ್ಟೆಯನ್ನು ಜಾತಿಯು ದೊಡ್ಡ ಪ್ರಮಾಣದಲ್ಲಿ ಪ್ರಭಾವಿಸಿದೆ. ಕೃಷಿ, ಕಟ್ಟಡ ನಿರ್ಮಾಣ, ಗಣಿಗಾರಿಕೆ, ರಸ್ತೆ ನಿರ್ಮಾಣ ಹಾಗೂ ನೈರ್ಮಲ್ಯದಂತಹ ಕೆಲಸಗಳನ್ನು ಮಾಡುವವರು ಸಮಾಜದ ಕಟ್ಟಕಡೆಯ ಜಾತಿವರ್ಗಗಳ ಜನರೇ ಆಗಿದ್ದಾರೆ.
ತಾಪಮಾನ ಸಂಬಂಧಿತ ಕಾಯಿಲೆಗಳು ಹಾಗೂ ಜೀವಕ್ಕೇ ಆಪತ್ತು ತರುವ ಉಷ್ಣೋಗ್ರತೆಯ ಹೊಡೆತಗಳು ಈ ಶ್ರಮಗಳಲ್ಲಿಯೇ ಅತ್ಯಧಿಕ. ಕಳೆದ ಮಾರ್ಚ್ ತಿಂಗಳಿನಿಂದ ಜೂನ್ ಮಧ್ಯಭಾಗದವರೆಗಿನ ಅವಧಿಯಲ್ಲಿ ದೇಶದ ವಾತಾವರಣ ಉಷ್ಣಾಂಶವು 48 ಡಿಗ್ರಿಗಳಿಗೆ ಏರಿತ್ತು. ಪರಿಣಾಮವಾಗಿ ಅಧಿಕ ತಾಪಮಾನ ಸಂಬಂಧಿ ಕಾಯಿಲೆಗಳು ಅಧಿಕ ಸಂಖ್ಯೆಯಲ್ಲಿ ವರದಿಯಾದವು. ಕನಿಷ್ಠ ಪಕ್ಷ 110 ಮಂದಿ ಸಾವಿಗೀಡಾದರು ಎಂಬುದು ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರ ಸಂಗ್ರಹಿಸಿರುವ ಅಂಕಿಅಂಶಗಳಿಂದ ತಿಳಿದು ಬಂದಿದೆ.
ಭಾರೀ ಪ್ರಮಾಣದ ಜನವರ್ಗಗಳು ಅಧಿಕ ತಾಪಮಾನದ ಹೊಡೆತದಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ. ಫ್ಯಾನುಗಳು, ತಂಪು ಹವೆಯನ್ನು ನೀಡುವ ಏರ್ ಕೂಲರ್ ಗಳು ಹಾಗೂ ಹವಾನಿಯಂತ್ರಣ ವ್ಯವಸ್ಥೆ ಈ ಜನವರ್ಗಗಳಿಗೆ ಎಟುಕುತ್ತಿಲ್ಲ ಎಂದು ವಾತಾವರಣ ಮತ್ತು ಸ್ವಾಸ್ಥ್ಯ ತಜ್ಞರು ಹೇಳಿದ್ದಾರೆ