ದೆಹಲಿ ಸರ್ಕಾರ ನಡೆಸುತ್ತಿರುವ ವಿಶೇಷಚೇತನರ ‘ಆಶಾ ಕಿರಣ್’ ಆಶ್ರಯಧಾಮದಲ್ಲಿ ಕಳೆದ 20 ದಿನಗಳಲ್ಲಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ತನಿಖೆಯಿಂದ ತಿಳಿದುಬಂದಿದೆ. ಅಲ್ಲದೆ, ಜನವರಿಯಿಂದ ಈವರೆಗೆ 27 ಸಾವುಗಳು ವರದಿಯಾಗಿವೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಕಳಪೆ ನಿರ್ವಹಣೆಯೇ ಸಾವುಗಳಿಗೆ ಕಾರಣವೆಂದು ಬಿಜೆಪಿ ಆರೋಪಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಮೃತರಲ್ಲಿ ಒಬ್ಬರು 14-15 ವರ್ಷ ವಯಸ್ಸಿನ ಅಪ್ರಾಪ್ತರಾಗಿದ್ದು, 13 ಮಂದಿ 20 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಾಗಿದ್ದಾರೆ.
ಜುಲೈ 1 ಮತ್ತು 15 ರ ನಡುವೆ ಒಬ್ಬರು ಸಾವನ್ನಪ್ಪಿದ್ದು, ಜುಲೈ 15 ಮತ್ತು 31ರ ನಡುವೆ 13 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ, 8 ಮಹಿಳೆಯರು ಮತ್ತು 5 ಪುರುಷರು ಸೇರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಶಾಕಿರಣ್ ಆಶ್ರಯ ಮನೆಯಲ್ಲಿ ಸಂಭವಿಸಿರುವ ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಸಾವಿನ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ ಎಂದು ಎಸ್‌ಡಿಎಂ ಗಮನಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಗಳ ನಂತರ ಸಾವಿನ ನಿಜವಾದ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ. ಆಶ್ರಯ ಮನೆಯಲ್ಲಿ ನೀಡುತ್ತಿರುವ ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ಸತ್ಯಶೋಧನಾ ತಂಡವನ್ನು ಆಶ್ರಯ ಮನೆಗೆ ಕಳುಹಿಸಿದೆ. ಎಎಪಿ ಸರ್ಕಾರದ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದೆ.
“ದೆಹಲಿ ಸರ್ಕಾರವು ನಡೆಸುತ್ತಿರುವ ಆಶಾ ಕಿರಣ್ ಆಶ್ರಯ ಮನೆಯು ಎಲ್ಲ ಆಶಾ (ಭರವಸೆ) ಕಳೆದುಕೊಂಡಿದೆ. ಜನರು ಅದರಲ್ಲಿ ನರಳುತ್ತಿದ್ದಾರೆ ಮತ್ತು ಸಾಯುತ್ತಿದ್ದಾರೆ. ದೆಹಲಿ ಸರ್ಕಾರವು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಪರಿಸ್ಥಿತಿಯ ವಿಚಾರಣೆಗೆ ತಂಡವನ್ನು ಕಳುಹಿಸಲಾಗಿದೆ” ಎಂದು ಎನ್‌ಸಿಡಬ್ಲ್ಯ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.
ಸಾವುಗಳ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಸಚಿವೆ ಅತಿಶಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮ್ಯಾಜಿಸ್ಟ್ರೇಟ್ ತನಿಖೆಯನ್ನು ಪರಾಮರ್ಶಿಸಿ, 48 ಗಂಟೆಗಳಲ್ಲಿ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿfದಾರೆ. 2024ರ ಜನವರಿಯಿಂದ ಆಶ್ರಯ ಮನೆಯಲ್ಲಿ 14 ಸಾವುಗಳು ಸಂಭವಿಸಿವೆ ಎಂದು ಅತಿಶಿ ಹೇಳಿದ್ದಾರೆ.
ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡುವಂತೆ ಸಚಿವರು ತಿಳಿಸಿದ್ದಾರೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಪರಿಸ್ಥಿತಿ ಅವಲೋಕಿಸಲು ದೆಹಲಿ ಬಿಜೆಪಿಯ ತಂಡವೊಂದು ಆಶಾ ಕಿರಣ್ ಆಶ್ರಯ ಮನೆಗೆ ತೆರಳಿದೆ. “ಆಶ್ರಯಧಾಮದಲ್ಲಿ ಕುಡಿಯಲು ಗಲೀಜು ನೀರು ಬರುತ್ತಿದೆ, ಉತ್ತಮ ಊಟ ಸಿಗುತ್ತಿಲ್ಲ, ಚಿಕಿತ್ಸೆ ಸಿಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ, ಇದರಲ್ಲಿ ಭಾಗಿಯಾದ ಎಲ್ಲ ಅಧಿಕಾರಿಗಳನ್ನು ಶಿಕ್ಷಿಸಬೇಕು” ಎಂದು ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ರೇಖಾ ಗುಪ್ತಾ ಹೇಳಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ದೆಹಲಿ ಸಚಿವ ಗೋಪಾಲ್ ರೈ, “ಮಯೂರ್ ವಿಹಾರ್‌ನ ಚರಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ ತಾಯಿ ಮತ್ತು ಮಗನ ಮನೆಗೆ ಕೇಸರಿ ಪಕ್ಷದ ನಾಯಕರು ಭೇಟಿ ನೀಡಲಿಲ್ಲ. ಅವರು ಆಶಾಕಿರಣ್ ಆಶ್ರಯಧಾಮದಲ್ಲಿ ಪ್ರತಿಭಟನೆ ನಡೆಸಲು ಬಂದಿದ್ದಾರೆ” ಎಂದು ಹೇಳಿದ್ದಾರೆ.