ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸಾರ್ವಜನಿಕವಾಗಿ ಅಪ್ಪಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದರಿಂದ ತಪ್ಪಿಸಿಕೊಳ್ಳಲು ಅವರು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನೂ ಆಲಿಂಗಿಸಲು ಉಕ್ರೇನ್‌ಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ, ಇನ್ನೂ ಕೇಂದ್ರ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ. ಆದರೆ, ಮೋದಿ ಅವರು ಆಗಸ್ಟ್ 23ರಂದು ಕೈವ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಅವರ ಭೇಟಿಯು ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸಲು ಯಾವ ರೀತಿಯಲ್ಲಿ ಪ್ರಾಮುಖ್ಯತೆ ನೀಡುತ್ತದೆ ಎಂದು ಚರ್ಚೆಗಳು ನಡೆಯುತ್ತಿವೆ. ರಷ್ಯಾ-ಉಕ್ರೇನ್ ನಡುವಿನ ಸಂಘರ್ಷವನ್ನು ಮೋದಿ ತಡೆಯುತ್ತಾರೆಯೇ ಎಂಬ ಪ್ರಶ್ನೆಗಳು ಮುನ್ನೆಲೆಯಲ್ಲಿವೆ.
ಇದೇ ಹೊತ್ತಿನಲ್ಲಿ, ‘ಇದು ಯುದ್ಧದ ಯುಗವಲ್ಲ’ ಎಂದು ಹೇಳಿರುವ ಮೋದಿ ಅವರ ಭಾಷಣದ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ವಿಶ್ವಾಸಾರ್ಹತೆ ಹೊಂದಿಲ್ಲ. ಯಾಕೆಂದರೆ, ಭಾರತವು ತನ್ನ ‘ಆಯ್ಕೆಯ ಸ್ವಾತಂತ್ರ್ಯ’ ಮತ್ತು ‘ಕಾರ್ಯತಂತ್ರದ ಸ್ವಾಯತ್ತತೆ’ಯ ಮೂಲಕ ರಷ್ಯಾದೊಂದಿಗೆ ಮಿಲಿಟರಿ ಮತ್ತು ವ್ಯಾಪಾರ ಸಂಬಂಧಗಳನ್ನು ಕಾಪಾಡಿಕೊಳ್ಳುವುದಾಗಿಯೂ ಇದೇ ಸಮಯದಲ್ಲಿ ಹೇಳುತ್ತಿದೆ. ಈವರೆಗೆ, ಭಾರತ ಸರ್ಕಾರವು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ವಿರೋಧಿಸಿಲ್ಲ, ಖಂಡಿಸಿಲ್ಲ. ಅಂತಹ ಯಾವುದೇ ಹೇಳಿಕೆಗಳೂ ಬಂದಿಲ್ಲ.
ಗಮನಿಸಬೇಕಾದ ಮತ್ತೊಂದು ಸಂಗತಿ, ಝೆಲೆನ್ಸ್ಕಿಯವರ ಒಪ್ಪಿಗೆ ಮೇರೆಗೆ ಸ್ವಿಟ್ಜರ್‌ಲೆಂಡ್ ಆಯೋಜಿಸಿದ್ದ ಶಾಂತಿ ಶೃಂಗಸಭೆಯಿಂದ ಭಾರತವು ಅಂತರ ಕಾಯ್ದುಕೊಂಡಿತು. ಯಾಕೆಂದರೆ, ಆ ಸಭೆಗೆ ರಷ್ಯಾವನ್ನು ಆಹ್ವಾನಿಸಿರಲಿಲ್ಲ. ಹೀಗಾಗಿ, ಭಾರತವು ತನ್ನ ಒಬ್ಬ ಹಿರಿಯ ಅಧಿಕಾರಿಯನ್ನು ಮಾತ್ರ ಸಭೆಗೆ ಕಳಿಸಿತು. ಅಲ್ಲದೆ, ಸಭೆಯಲ್ಲಿ ಹೊರಡಿಸಿದ ಪತ್ರಕ್ಕೆ ಸಹಿ ಹಾಕಲು ಭಾರತ ಅಂದರೆ, ಮೋದಿ ಸರ್ಕಾರ ನಿರಾಕರಿಸಿತು.
ಅಂದಹಾಗೆ, ಮೋದಿಯವರು ಪುಟಿನ್ ಅಥವಾ ಝೆಲೆನ್ಸ್ಕಿಯವರನ್ನು ಸಂಘರ್ಷದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಸಾಧ್ಯವೇ ಇಲ್ಲ. ಯಾಕೆಂದರೆ, ಉಕ್ರೇನ್ ಸಂಘರ್ಷಕ್ಕೆ ಪುಟಿನ್ ಬೊಟ್ಟು ಮಾಡಿರುವ ಸಮಸ್ಯೆಯನ್ನು ಮೋದಿ ಅವರಿಂದ ಪರಿಹರಿಸಲು ಸಾಧ್ಯವಿಲ್ಲ. ಶೀತಲ ಸಮರದ ಕೊನೆಯಲ್ಲಿ ಪೂರ್ವಕ್ಕೆ ‘ಒಂದು ಇಂಚು’ ಕೂಡ ವಿಸ್ತರಿಸುವುದಿಲ್ಲ ಎಂದು ಭರವಸೆ ನೀಡಿದ್ದ ನ್ಯಾಟೋ (NATO) ಉಕ್ರೇನ್ ಅನ್ನು ಸೇರಿಸಿಕೊಳ್ಳಲು ಮುಂದಾಗಿದೆ. ಪೂರ್ವಕ್ಕೂ ವಿಸ್ತರಿಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದು ನಿಜವೇ ಆಗಿದ್ದರೂ, ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳು ಉಕ್ರೇನ್ ಸೇನೆಯೊಂದಿಗೆ ಹೋರಾಡುತ್ತಿದ್ದು, ಪ್ರತ್ಯೇಕವಾದಿಗಳಿಗೆ ರಷ್ಯಾ ಬೆಂಬಲ ನೀಡಿತು. ಮಾತ್ರವಲ್ಲದೆ, ಉಕ್ರೇನ್ ಮೇಲೆ ದಾಳಿ ಮಾಡಿತು. ಇದರಿಂದಾಗಿಯೇ ರಷ್ಯಾ-ಉಕ್ರೇನ್ ಯುದ್ಧ ಆರಂಭವಿದೆ. ಆದರೆ, ಪುಟಿನ್ ‘ನ್ಯಾಟೋ’ದೆಡೆಗೆ ಬೊಟ್ಟು ಮಾಡುತ್ತಿದ್ದಾರೆ.
ಉಕ್ರೇನ್-ರಷ್ಯಾ ಗಡಿಯಲ್ಲಿ ರಷ್ಯಾದ ಆಕ್ರಮಣಕಾರಿ ಶಸ್ತ್ರಾಸ್ತ್ರಗಳ ನಿಯೋಜನೆಯನ್ನು ತಡೆಯಲು ಮತ್ತು 1997ರ ನ್ಯಾಟೋ-ರಷ್ಯಾ ಸಂಸ್ಥಾಪನಾ ಕಾಯಿದೆಯಂತೆ ನ್ಯಾಟೋ ತನ್ನ ಮೂಲಸೌಕರ್ಯಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಲು ಮೋದಿ ಅವರಿಗೆ ಸಾಧ್ಯವಿಲ್ಲ. 1999ರಲ್ಲಿ ಆರಂಭಗೊಂಡ NATO 2024ರ ವೇಳೆಗೆ ವಿವಿಧ ದೇಶಗಳಿಗೆ ವಿಸ್ತರಿಸಿದೆ. ವಿಸ್ತರಣೆಯನ್ನು ಮುಂದುವರೆಸಿದೆ. ಉಕ್ರೇನ್ ಕೂಡ 2022ರಲ್ಲಿ ನ್ಯಾಟೋ ಭಾಗವಾಗಲು ಅರ್ಜಿ ಸಲ್ಲಿಸಿದೆ. ಇಂತಹ ಸಂದರ್ಭದಲ್ಲಿ ಉಕ್ರೇನ್‌ಗೆ ನ್ಯಾಟೋ ಸಹಕಾರ ನೀಡುವ ಮೂಲಕ ತನ್ನ ವಿರುದ್ಧ ಸಂಭಾವ್ಯ ದಾಳಿಗೆ ನ್ಯಾಟೋ ವೇದಿಕೆ ಸಿದ್ದಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಪುಟಿನ್ ಹೇಳುತ್ತಿದ್ದಾರೆ. ಅವರ ಈ ಗ್ರಹಿಕೆಯನ್ನು ಮರುಪರಿಶೀಲಿಸುವಂತೆ ಪುಟಿನ್‌ಗೆ ಮನವರಿಕೆ ಮಾಡಿಕೊಡಲು ಮೋದಿಗೆ ಸಾಧ್ಯವಿಲ್ಲ.
ಅಲ್ಲದೆ, ಉಕ್ರೇನ್‌ನಲ್ಲಿ ತನ್ನ ಸೈನ್ಯವನ್ನು ನಿಯೋಜಿಸುವ ಮೂಲಕ ಸಶಸ್ತ್ರೀಕರಣಗೊಳಿಸುವುದು ಮತ್ತು ಉಕ್ರೇನ್‌ಅನ್ನು ನಾಝಿಮುಕ್ತಗೊಳಿಸುವುದು ಪುಟಿನ್ ಅವರ ಎರಡು ಪ್ರಮುಖ ಗುರಿಗಳಾಗಿವೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನು ನವ-ನಾಝಿ ಎಂದು ಪುಟಿನ್ ನೋಡುತ್ತಿದ್ದಾರೆ. ಝೆಲೆನ್ಸ್ಕಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪುಟಿನ್ ಬಯಸುತ್ತಿದ್ದಾರೆ. ಈ ವಿಚಾರದಲ್ಲಿ ಮೋದಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ.
ಪುಟಿನ್ ಯುದ್ಧ ವಿರಾಮ ಘೋಷಿಸಲು ಮತ್ತು ಮಾತುಕತೆ ನಡೆಸಲು ಸಿದ್ದವಾಗಿದ್ದಾರೆ. ಆದರೆ, ಉಕ್ರೇನ್‌ನ ಡೊನೆಟ್ಸ್ಕ್, ಲುಹಾನ್ಸ್ಕ್, ಝಪೊರಿಝಿಯಾ ಮತ್ತು ಖೆರ್ಸನ್ ಪ್ರದೇಶಗಳನ್ನು ರಷ್ಯಾ ಆಕ್ರಮಿಸಿಕೊಂಡಿದೆ. ಈ ಪ್ರದೇಶಗಳ ಮೇಲೆ ತನ್ನ ಹಿಡಿತವನ್ನು ಮುಂದುವರೆಸುವ ಪುಟಿನ್ ಷರತ್ತುಗಳ ಮೇಲೆ ಶಾಂತಿ ಮಾತುಕತೆಗೆ ಝೆಲೆನ್ಸ್ಕಿ ಸಿದ್ದರಿಲ್ಲ. ಮಾತ್ರವಲ್ಲದೆ, 2014ರಲ್ಲಿ ಪುಟಿನ್ ವಶಪಡಿಸಿಕೊಂಡ ಕ್ರೈಮಿಯಾ ಮತ್ತು ರಷ್ಯಾ ಬೆಂಬಲಿತ ಪ್ರತ್ಯೇಕವಾದಿಗಳಿರುವ ಪೂರ್ವ ಡಾನ್‌ಬಾಸ್ ಪ್ರದೇಶವನ್ನು ಮರಳಿ ಪಡೆಯಲು ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದಾರೆ.
ಆದ್ದರಿಂದ, ಕೈವ್‌ನಲ್ಲಿ ಝೆಲೆನ್ಸ್ಕಿ ಜೊತೆಗೆ ಫೋಟೋ ತೆಗೆದುಕೊಳ್ಳುವ ಅವಕಾಶಕ್ಕಿಂತ ಹೆಚ್ಚಿನದನ್ನು ಮೋದಿ ನಿರೀಕ್ಷಿಸಲು ಸಾಧ್ಯವಿಲ್ಲ. ಈ ವರ್ಷದ ಫೆಬ್ರವರಿಯಲ್ಲಿ ಕೈವ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿ ನೀಡಿದ್ದಂತೆ, ಭಾರತವು ತನ್ನ ಭೇಟಿಯ ಬಗ್ಗೆ ರಷ್ಯಾಕ್ಕೆ ತಿಳಿಸಬೇಕಾಗುತ್ತದೆ. ಇದರಿಂದಾಗಿ ಮೋದಿ ಅವರ ಭೇಟಿ ಸುರಕ್ಷಿತವಾಗಿರಲಿದೆ. ಜೊತೆಗೆ, ನಾಗರಿಕ ವಿಮಾನ ಸಂಚಾರಕ್ಕಾಗಿ ಉಕ್ರೇನಿಯನ್ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಮೋದಿ ಪೋಲೆಂಡ್‌ಗೆ ತೆರಳಿ, ಅಲ್ಲಿಂದ ಭೂ ಮಾರ್ಗದ ಮೂಲಕ ಕೈವ್‌ಗೆ ಪ್ರಯಾಣಿಸಬೇಕಾಗುತ್ತದೆ.
ಮೋದಿ ಅವರು ಉಕ್ರೇನ್-ರಷ್ಯಾ ಸಂಘರ್ಷದಲ್ಲಿ ಏನನ್ನಾದರೂ ಅಮೂಲ್ಯವಾದದ್ದನ್ನು ಸಾಧಿಸಬಹುದು ಎಂಬ ಯಾವುದೇ ನಿರೀಕ್ಷೆಗಳು ಇಲ್ಲದಿರುವಾಗ, ಅವರು ಉಕ್ರೇನ್‌ಗೆ ಅಧಿಕೃತ ಭೇಟಿಯನ್ನು ಯಾಕೆ ನಿರ್ಧರಿಸಿದ್ದಾರೆ? ಅಮೆರಿಕದ ಒತ್ತಡ ಮತ್ತು ತನ್ನನ್ನು ತಾನು ಜಾಗತಿಕ ನಾಯಕ ಎಂದು ಬಿಂಬಿಸಿಕೊಂಡಿರುವ ಇಮೇಜ್ ಕಾರಣಕ್ಕಾಗಿ ಮೋದಿ ಕೈವ್‌ಗೆ ಹೋಗುತ್ತಿದ್ದಾರೆ ಎಂಬುದೊಂದೇ ಸ್ಪಷ್ಟ.
ಮಾಸ್ಕೋ ಭೇಟಿಯ ನಂತರ, ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು “ಸಂಘರ್ಷದ ಸಮಯದಲ್ಲಿ ‘ಕಾರ್ಯತಂತ್ರದ ಸ್ವಾಯತ್ತತೆ’ ವಿಷಯಗಳಿಗೆ ಆಸ್ಪದವಿಲ್ಲ. ಇದನ್ನು ಲಘುವಾಗಿ ತೆಗೆದುಕೊಳ್ಳಬೇಡಿ” ಎಂದು ಭಾರತಕ್ಕೆ ಎಚ್ಚರಿಕೆ ನೀಡಿದರು.
ದಕ್ಷಿಣ ಮತ್ತು ಮಧ್ಯ ಏಷ್ಯಾದ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲು ಅವರು ಅಮೆರಿಕ ಸೆನೆಟ್‌ನಲ್ಲಿ, ಭಾರತದ ಪ್ರಧಾನಿ ಮೋದಿಯವರ ಮಾಸ್ಕೋ ಪ್ರವಾಸದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು. ಭೇಟಿಯ ಬಗ್ಗೆ ಭಾರತದೊಂದಿಗೆ ಕಠಿಣ ಮಾತುಕತೆ ನಡೆಸುತ್ತಿದೆ ಎಂದು ಅವರು ಹೇಳಿದ್ದರು. ಅಲ್ಲದೆ, “ಚೀನಾ ಕೂಡ ರಷ್ಯಾದ ಕಿರಿಯ ಪಾಲುದಾರ ರಾಷ್ಟ್ರವಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಬಿಕ್ಕಟ್ಟಿನಲ್ಲಿ ಭಾರತದೊಂದಿಗೆ ವಿಶ್ವಾಸಾರ್ಹ ಸ್ನೇಹಿತನಾಗಿರುವ ಸಾಧ್ಯತೆಗಳಿಲ್ಲ” ಎಂದು ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಭಾರತಕ್ಕೆ ಎಚ್ಚರಿಕೆ ನೀಡಿದ್ದರು.
ಈ ವರದಿ ಓದಿದ್ದೀರಾ?: ಸಂಸತ್‌ನಲ್ಲಿ ಜಾತಿ ವಿಷಜಂತು: ಮನುವಾದ ಮೆರೆದ ಮೋದಿ
ಅಂದಹಾಗೆ, 2020ರಲ್ಲಿ ಭಾರತದ ಭೂಭಾಗದ ಮೇಲೆ ಚೀನಾದ ಆಕ್ರಮಣದ ಸಮಯದಲ್ಲಿ ಭಾರತಕ್ಕೆ ಅಮೆರಿಕವು ಅಗತ್ಯವಿರುವ ಗುಪ್ತಚರ ಸಹಕಾರ ಮತ್ತು ಲಡಾಖ್‌ನಲ್ಲಿ ನಿಯೋಜಿಸಲಾದ ಹೆಚ್ಚುವರಿ ಭಾರತೀಯ ಸೈನಿಕರಿಗೆ ಚಳಿಗಾಲದ ಉಡುಪುಗಳನ್ನು ಪೂರೈಸಿತ್ತು. ರಕ್ಷಣೆ, ಗುಪ್ತಚರ ಮತ್ತು ನಿರ್ಣಾಯಕ ತಂತ್ರಜ್ಞಾನ ವರ್ಗಾವಣೆಯನ್ನು ಹೆಚ್ಚಿಸಲು ಭಾರತ ಮತ್ತು ಅಮೆರಿಕ ನಡುವೆ ನಾಲ್ಕು ಒಪ್ಪಂದಗಳು ಕೂಡ ನಡೆದಿವೆ. ಹೀಗಾಗಿ, ಪುಟಿನ್ ಜೊತೆಗಿನ ಮೋದಿಯವರ ಬಾಂಧವ್ಯದ ಬಗ್ಗೆ ಅಮೆರಿಕ ಅಸಮಾಧಾನವನ್ನು ಹೊರಹಾಕುತ್ತಿದೆ.
ಅಮೆರಿಕದ ಒತ್ತಡದ ಕಾರಣದಿಂದಾಗಿ ಮೋದಿ ಅವರು ಕೈವ್‌ಗೆ ಭೇಟಿ ನೀಡಲು ನಿರ್ಧರಿಸಿದ್ದರೆ, ಅಮೆರಿಕನ್ನರು ಈ ತೋರಿಕೆಯ ಪ್ರಹಸನದಿಂದ ಸಂತೋಷಪಡುತ್ತಾರೆ. ಅಲ್ಲದೆ, ಕಳೆದ ಭಾನುವಾರ ಟೋಕಿಯೋದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರನ್ನು ಭೇಟಿ ಮಾಡಿದ್ದಾರೆ. “ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ‘ನ್ಯಾಯ ಮತ್ತು ಶಾಶ್ವತ ಶಾಂತಿ’ಯನ್ನು ಬಯಸುತ್ತಿರುವ ಉಕ್ರೇನ್‌ಗೆ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ದೊರೆಯಬೇಕಿದೆ” ಎಂದು ಒತ್ತಿ ಹೇಳುವ ಕ್ವಾಡ್ ಜಂಟಿ ಹೇಳಿಕೆಗೆ ಭಾರತ ಸಹಿ ಹಾಕಿದೆ.
ಇದು, ಭಾರತವು ರಷ್ಯಾವನ್ನು ಬಿಟ್ಟುಕೊಡಲು ಅಥವಾ ಅಮೆರಿಕವನ್ನು ಎದುರು ಹಾಕಿಕೊಳ್ಳಲು ಆಗದ ದ್ವಂದ್ವ ಸ್ಥಿತಿಯಲ್ಲಿರುವುದನ್ನು ಸೂಚಿಸುತ್ತದೆ.
ಅದೇನೆ ಆಗಿರಲಿ, ಉಕ್ರೇನಿಯನ್ ಪರಿಸ್ಥಿತಿಯು ಯುರೋಪ್, ಅಮೆರಿಕ ಮತ್ತು ರಷ್ಯಾದಿಂದ ಸೃಷ್ಟಿಸಲ್ಪಟ್ಟ ಅವ್ಯವಸ್ಥೆಯಾಗಿದೆ. ಇದು ಜಾಗತಿಕ ಬಿಕ್ಕಟ್ಟಾಗಿ ಮಾರ್ಪಟ್ಟಿದೆ. ಇಂತಹ ಸಂದರ್ಭದಲ್ಲಿ ಭಾರತವು ಅಂತರರಾಷ್ಟ್ರೀಯ ಸಮುದಾಯವನ್ನು ಜವಾಬ್ದಾರರನ್ನಾಗಿ ಮಾಡಲು, ಅಂತಹ ಹೇಳಿಕೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ.
ಉಕ್ರೇನ್-ರಷ್ಯಾ ಬಿಕ್ಕಟ್ಟಿನಲ್ಲಿ ಯಾವುದೇ ಶಾಂತಿ ಮಾತುಕತೆಗಳು ರಷ್ಯಾ ಮತ್ತು ಅಮೆರಿಕಾ ನಡುವೆಯೇ ನಡೆಯಬೇಕಿದೆ. ‘ವಿಶ್ವ ನಾಯಕ’ ಸೇರಿದಂತೆ ಉಳಿದವರೆಲ್ಲರೂ ಅತಿಥಿ ಪಾತ್ರ ನಿರ್ವಹಿಸುವ ಸೈಡ್‌ಶೋಗಳಾಗಲಿದ್ದಾರೆ.