ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೆಹಲಿಯಲ್ಲಿ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಅಪಹರಿಸಿದ ಬಳಿಕ ವ್ಯಕ್ತಿ ಆಕೆ ಮೇಲೆ ದೌರ್ಜನ್ಯ ಎಸಗಿದ್ದಾನೆ. ಸಂತ್ರಸ್ತ ಬಾಲಕಿಯ ದೇಹದ ಮೇಲೆ ಕಚ್ಚಿದ ಹಲ್ಲುಗಳ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 6 ರಂದು ಕೋಟ್ಲಾ ಮುಬಾರಕ್‌ಪುರ ಪ್ರದೇಶದಿಂದ ಬಾಲಕಿಯನ್ನು ಅಪಹರಿಸಲಾಗಿತ್ತು. ಆಕೆಯ ಅಪಹರಣವಾದ ಸುಮಾರು 24 ಗಂಟೆಗಳ ನಂತರ ಅಕೆಯನ್ನು ಪೊಲೀಸರು ರಕ್ಷಿಸಿದ್ದಾರೆ.
ಘಟನೆಯ ನಂತರ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಯ ದೈಹಿಕ ಸ್ಥಿತಿ ಸ್ಥಿರವಾಗಿದ್ದರೂ, ಆಘಾತಕಾರಿ ಘಟನೆಯಿಂದ ಮಾನಸಿಕ ಪರಿಣಾಮಗಳನ್ನು ಎದುರಿಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅರ್ಜುನ್ ಅಲಿಯಾಸ್ ಮೊಹಮ್ಮದ್ ಉಮರ್ ಎಂಬಾನತನ್ನು ಬಂಧಿಸಲಾಗಿದೆ. ಈ ಹಿಂದೆಯೂ ಅತ ಇದೇ ರೀತಿಯ ಹೇಯ ಕೃತ್ಯ ಎಸಗಿದ್ದ ಎಂದು ಶಂಕಿಸಲಾಗಿದೆ. ಮೇ 6ರಂದು ಮಧ್ಯಾಹ್ನ ಅಂಧೇರಿಯಾ ಮೋಡ್‌ನಲ್ಲಿರುವ ತನ್ನ ನಿವಾಸಕ್ಕೆ ಬಾಲಕಿಯನ್ನು ಕರೆದೊಯ್ದಿದ್ದ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ಮಾನಸಿಕ ಅಸ್ವಸ್ತತೆಯ ಲಕ್ಷಣಗಳನ್ನು ಹೊಂದಿದ್ದಾನೆ ಎಂದು ಹೇಳಲಾಗಿದೆ.
“ಆರೋಪಿಗಳನ್ನು ಗುರುತಿಸಲು ನಾವು ಡಿಟಿಸಿ ಬಸ್‌ಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಅಪಹರಣಕ್ಕೊಳಗಾದ ಬಾಲಕಿಯ ವಿವರಗಳನ್ನು ಪೊಲೀಸ್ ನೆಟ್‌ವರ್ಕ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಮಂಗಳವಾರ ಬಾಲಕಿಯನ್ನು ರಕ್ಷಿಸಲಾಗಿದೆ. ಪೊಲೀಸರು ಉಮರ್‌ನನ್ನು ಬಂಧಿಸಿದ್ದಾರೆ” ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅಂಕಿತ್ ಚೌಹಾಣ್ ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಉಮರ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ‘ತಾನು ಗಾಜಿನಿಂದ ಸಣ್ಣ ಆಟಿಕೆಗಳನ್ನು ತಯಾರಿಸುತ್ತೇನೆ. ಗಾಜು ಸಂಗ್ರಹಿಸಲು ಕೋಟ್ಲಾಗೆ ಬಂದಿದ್ದೆ. ಅಲ್ಲಿ ಬಾಲಕಿ ಆಟವಾಡುತ್ತಿದ್ದಳು. ಆಕೆಯನ್ನು ಅಪಹರಿಸಿದೆ’ ಎಂದು ಆತ ಹೇಳಿದ್ದಾನೆ” ಎಂದು ಡಿಸಿಪಿ ತಿಳಿಸಿದ್ದಾರೆ.