ದೆಹಲಿ ವಾಯುಮಾಲಿನ್ಯ | ಬಡವರ ಸುರಕ್ಷತೆ ಸರ್ಕಾರದ ಜವಾಬ್ದಾರಿಯಲ್ಲವೇ?

Date:

Advertisements
ವಾಯುಮಾಲಿನ್ಯ ಎಲ್ಲರಿಗೂ ಸಮಸ್ಯೆ ಹುಟ್ಟಿಸುತ್ತದೆ ಹೌದು. ಆದರೆ ಅದರಲ್ಲೂ ಹೆಚ್ಚು ತೊಂದರೆಗೆ ಒಳಗಾಗುವವರು ಬಡವರು. ಈಗಾಗಲೇ ಬೆಲೆ ಏರಿಕೆ, ಹಣದುಬ್ಬರ ಬಡ, ಮಧ್ಯಮ ವರ್ಗವನ್ನು ಕುಕ್ಕಿ ತಿನ್ನುತ್ತಿದೆ. ಹೀಗಿರುವಾಗ ವಾಯುಮಾಲಿನ್ಯ ದುಷ್ಪರಿಣಾಮಕ್ಕೆ ತುತ್ತಾಗಿ ಖಾಸಗಿ ಲಾಭಕೋರ ಆಸ್ಪತ್ರೆಗಳ ಸುಳಿಯಲ್ಲಿ ಸಿಲುಕಿ ನಲುಗುವುದು ಬಡವರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಅತೀ ಕಳಪೆ ಮಟ್ಟಕ್ಕೆ ತಲುಪಿದೆ. ಗಂಭೀರ ಹಂತದಲ್ಲಿರುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡರೂ ಕೂಡಾ ವಾಯು ಗುಣಮಟ್ಟ ಮಾತ್ರ ಸುಧಾರಿಸುತ್ತಿಲ್ಲ. ವಿಶ್ವ ಸಂಸ್ಥೆ ‘ಅಪಾಯಕಾರಿ’ ಎಂದು ಕರೆಯುವ ಮಟ್ಟಕ್ಕೆ ದೆಹಲಿ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ತಲುಪಿದೆ. ಪ್ರತಿ ಚಳಿಗಾಲದಲ್ಲೂ ದೆಹಲಿಯ ಸ್ಥಿತಿ ಹೀಗೆಯೇ ಶೋಚನೀಯ ಹಂತಕ್ಕೆ ತಲುಪುತ್ತದೆ ಎಂಬುದು ಗಮನಾರ್ಹ.

ದೆಹಲಿ ಮಾತ್ರವಲ್ಲ ಇನ್ನೂ ಹಲವು ನಗರಗಳಲ್ಲಿ ಗಾಳಿ ಕಲುಷಿತಗೊಂಡಿದೆ. ಮುಂಬೈ, ಉತ್ತರ ಪ್ರದೇಶ, ಬಿಹಾರದಲ್ಲಿಯೂ ಇದೇ ಸ್ಥಿತಿ. ಆದರೆ ದೆಹಲಿಯ ಪರಿಸ್ಥಿತಿ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಜನರ ಆರೋಗ್ಯದ ಬಗ್ಗೆ, ರಾಷ್ಟ್ರ ರಾಜಧಾನಿಯ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿವೆ. ಜೊತೆಗೆ ಟ್ರೋಲಿಗರಿಗೆ ಆಹಾರವೂ ಆಗಿದೆ. “ಬೆಂಗಳೂರಿನಲ್ಲಿ ಧೂಮಪಾನ ಮಾಡುವುದು ದೆಹಲಿಯಲ್ಲಿ ಯೋಗ ಮಾಡುವುದಕ್ಕಿಂತ ಆರೋಗ್ಯಕರ” ಎಂಬ ಜೋಕ್‌ಗಳು ಕೂಡಾ ನೆಟ್ಟಿಗರು ಸೃಷ್ಟಿಸಲು ದೆಹಲಿಯ ಸ್ಥಿತಿ ಕಾರಣವಾಗಿದೆ.

“ಬೆಳ್ಳಗಿನ ಜಾವ ವಾಕಿಂಗ್ ಮಾಡುವುದು ನಮ್ಮ ದೇಹಕ್ಕೆ, ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಆದರೆ ಈಗ ಕಲುಷಿತಗೊಂಡ ಗಾಳಿಯಿಂದಾಗಿ ಮುಂಜಾನೆ ಓಡಾಟವೇ ಕಷ್ಟವಾಗಿದೆ. ಮಧ್ಯಾಹ್ನವಾಗುತ್ತಿದ್ದಂತೆ ಕಣ್ಣು ಬಿಡಲಾಗದಷ್ಟು ಉರಿಯುತ್ತದೆ” ಎನ್ನುತ್ತಾರೆ ದೆಹಲಿಯ ಜನರು.

Advertisements

ಇದನ್ನು ಓದಿದ್ದೀರಾ? ವಾಯುಮಾಲಿನ್ಯ | ದೆಹಲಿಯನ್ನು ಹಿಂದಿಕ್ಕಲು ಬೆಂಗಳೂರಿನ ಓಟ!

ನಿನ್ನೆಯಷ್ಟೆ ದೆಹಲಿಯಲ್ಲಿ ಹದಗೆಟ್ಟಿರುವ ಗಾಳಿಯ ಗುಣಮಟ್ಟದ ಕುರಿತು ದೆಹಲಿ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ಮಾಲಿನ್ಯವನ್ನು ತಡೆಗಟ್ಟುವ ಕ್ರಮ ತೆಗೆದುಕೊಳ್ಳುವುದು ಯಾಕೆ ತಡವಾಗಿದೆ? ವಾಯು ಗುಣಮಟ್ಟ ಸೂಚ್ಯಂಕ 300 ದಾಟಲು ನಾವು ಕಾಯುತ್ತಿದ್ದೇವೆಯೇ” ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಪ್ರತಿ ವರ್ಷ ದೆಹಲಿಯಲ್ಲಿ ಚಳಿಗಾಲದಲ್ಲಿ ಮಂಜಿನಂತೆ ಹೊಗೆ ಆವರಿಸಿರುವುದು ಸಾಮಾನ್ಯ. ಆದರೆ ಈ ವರ್ಷ ಗಾಳಿಯ ಗುಣಮಟ್ಟ ಸೂಚ್ಯಂಕ 500ರ ಸಮೀಪಕ್ಕೆ ತಲುಪಿರುವುದೇ ಇಷ್ಟೊಂದು ಚರ್ಚೆಗೆ ಕಾರಣ.

ದೆಹಲಿಯ ವಾಯುಮಾಲಿನ್ಯ ನಿಯಂತ್ರಣ ಬರೀ ದೆಹಲಿ ಸರ್ಕಾರದ ಹೊಣೆಯಲ್ಲ ಕೇಂದ್ರ ಸರ್ಕಾರದ್ದು ಕೂಡಾ ಹೌದು. ದೆಹಲಿಯ ಎಲ್ಲಾ ಅಭಿವೃದ್ದಿಯ ಶ್ರೇಯಸ್ಸನ್ನು ಪಡೆದುಕೊಳ್ಳುವ ಗವರ್ನರ್ ವಿಎನ್ ಸಕ್ಸೇನಾ ಅವರದ್ದು ಕೂಡಾ ಹೌದು. ಈ ವಿಚಾರದಲ್ಲಿಯೂ ಕೇಂದ್ರ-ರಾಜ್ಯ ಸರ್ಕಾರದ ರಾಜಕೀಯ ಕೆಸರೆರಚಾಟ ಅಸಮರ್ಥನೀಯ.

ಚಳಿಗಾಲದಲ್ಲಿ ಗಾಳಿ ಗುಣಮಟ್ಟ ಇಷ್ಟೊಂದು ಕಲುಷಿತಗೊಳ್ಳುವುದೇಕೆ?

ದೆಹಲಿಯಲ್ಲಿ ವರ್ಷಪೂರ ಗಾಳಿ ಕಲುಷಿತವಾಗಿದ್ದರೂ ಕೂಡಾ ಚಳಿಗಾಲದಲ್ಲಿ ದೆಹಲಿಯ ಗಾಳಿ ಉಸಿರಾಡಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂಬ ಹಂತಕ್ಕೆ ತಲುಪುತ್ತದೆ. ಚಳಿಗಾಲದಲ್ಲಿ ತಂಪಾದ ಗಾಳಿಯ ಪದರವು ರೂಪುಗೊಳ್ಳುತ್ತದೆ ಹಾಗೂ ಮಾಲಿನ್ಯಕಾರಕ ಗಾಳಿಯೂ ಅದರಲ್ಲಿ ಸೇರಿಕೊಳ್ಳುತ್ತದೆ. ಅವು ಹೊಗೆಯಂತೆ ಎಲ್ಲೆಡೆ ಆವರಿಸುತ್ತದೆ. ಹಾಗೆಯೇ ಚಳಿಗಾಲದಲ್ಲಿ ಗಾಳಿಯ ವೇಗ ಕಡಿಮೆಯಾಗಿರುತ್ತದೆ. ಇದು ಮಾಲಿನ್ಯ ಗಾಳಿಯ ಪ್ರಸರಣವನ್ನು ಕಡಿಮೆಗೊಳಿಸುತ್ತದೆ.

ಈ ಚಳಿಗಾಲದಲ್ಲೇ ಕೃಷಿ ಕಳೆಗಳನ್ನು ಸುಡಲಾಗುತ್ತದೆ. ಪಂಜಾಬ್ ಮತ್ತು ಹರಿಯಾಣದಂತಹ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯಗಳನ್ನು ಚಳಿಗಾಲ ಸಮೀಪಿಸುತ್ತಿದ್ದಂತೆ ಸುಡಲಾಗುತ್ತದೆ. ಆ ಹೊಗೆಯು ಗಾಳಿ ಸೇರಿ ದೆಹಲಿಗೆ ತಲುಪುತ್ತದೆ. ಇದು ದೆಹಲಿಯಲ್ಲಿ ಪ್ರತಿ ವರ್ಷವೂ ಚಳಿಗಾಲದಲ್ಲಿ ವಾಯುಮಾಲಿನ್ಯದ ಸಮಸ್ಯೆಯನ್ನು ಉಲ್ಭಣಗೊಳಿಸುತ್ತದೆ.

ಕೃಷಿ ತ್ಯಾಜ್ಯ

ದೆಹಲಿ ವಾಯುಮಾಲಿನ್ಯಕ್ಕೆ ಅತೀ ಹೆಚ್ಚು ಕೊಡುಗೆ ಇವರಿಂದ!

ವಿಜ್ಞಾನ ಮತ್ತು ಪರಿಸರ ಕೇಂದ್ರ ಅಧ್ಯಯನದ ಪ್ರಕಾರ ಅಕ್ಟೋಬರ್ 12ರಿಂದ ನವೆಂಬರ್ 3ರವರೆಗೆ ದೆಹಲಿ ವಾಯುಮಾಲಿನ್ಯಕ್ಕೆ ಅಗಾಧ ಕೊಡುಗೆಯನ್ನು ನೀಡಿರುವುದು ಅಲ್ಲಿ ವಾಹನ ಚಲಾಯಿಸುವ ಜನರು. ವಾಹನ ಹೊರಸೂಸುವ ಹೊಗೆಯೇ ದೆಹಲಿ ವಾಯುಮಾಲಿನ್ಯದಲ್ಲಿ ಶೇಕಡ 51.5ರಷ್ಟು ಪಾಲು ಹೊಂದಿದೆ. ಇತರೆ ಜಿಲ್ಲೆಗಳು ಶೇಕಡ 34.97, ಕೃಷಿ ತ್ಯಾಜ್ಯ ಸುಡುವುದರಿಂದ ಶೇಕಡ 8.19, ಧೂಳು ಶೇಕಡ 3.7ರಷ್ಟು ದೆಹಲಿ ವಾಯುಮಾಲಿನ್ಯಕ್ಕೆ ಕಾರಣವಾಗಿದೆ.

ಇದನ್ನು ಓದಿದ್ದೀರಾ? ದೆಹಲಿ ವಾಯುಮಾಲಿನ್ಯ | ‘ಗ್ಯಾಸ್ ಚೇಂಬರ್’ ಪ್ರವೇಶಿಸಿದಂತಿತ್ತು: ಪ್ರಿಯಾಂಕಾ ಗಾಂಧಿ

ಐಕ್ಯೂಏರ್ ಸಂಸ್ಥೆಯ ಅಧ್ಯಯನದ ಪ್ರಕಾರ ದೆಹಲಿಯಲ್ಲಿ ನೈಸರ್ಗಿಕ ಮತ್ತು ಮಾನವನಿರ್ಮಿತ ಮಾಲಿನ್ಯದಿಂದಾಗಿ ಗಾಳಿಯ ಗುಣಮಟ್ಟವು ಕಲುಷಿತವಾಗಿದೆ. ನಿರ್ಮಾಣ ಕಾರ್ಯ, ತ್ಯಾಜ್ಯ ಘಟಕ ಮತ್ತು ಕೃಷಿ ತ್ಯಾಜ್ಯ ಸುಡುವುದು ಮುಖ್ಯವಾಗಿ ಗಾಳಿಯಲ್ಲಿ ಧೂಳಿನ ಕಣ ಸೇರಲು ಕಾರಣವಾಗಿದೆ. ಕಾಡ್ಗಿಚ್ಚು, ತ್ಯಾಜ್ಯ ಸುಡುವುದರಿಂದ ಬಿಡುಗಡೆಯಾಗುವ ವಿಷಕಾರಿ ಹೊಗೆ, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್‌ಗಳು, ವಾಹನಗಳಿಂದ ಹೊರಸೂಸುವ ಇಂಗಾಲದ ಮಾನಾಕ್ಸೈಡ್, ನೈಟ್ರೋಜನ್ ಆಕ್ಸೈಡ್ ಮತ್ತು ಹೈಡ್ರೋಕಾರ್ಬನ್‌ಗಳು ವಾಯುಮಾಲಿನ್ಯಕ್ಕೆ ಕಾರಣ ಎನ್ನುತ್ತದೆ ಐಕ್ಯೂಏರ್ ಸಂಸ್ಥೆಯ ಅಧ್ಯಯನ.

ಚಳಿಗಾಲದ ಮಾಲಿನ್ಯದಿಂದ ಆರೋಗ್ಯಕ್ಕೆ ಪರಿಣಾಮ

ದೆಹಲಿ ವಾಯುಮಾಲಿನ್ಯವು ಜನರ ಆರೋಗ್ಯದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಮುಖ್ಯವಾಗಿ ಹಿರಿಯ ನಾಗರಿಕರಿಗೆ, ಉಸಿರಾಟದ ಸಮಸ್ಯೆ ಇರುವವರಿಗೆ ದೆಹಲಿಯಲ್ಲಿ ಉಸಿರಾಡುವುದೇ ಕಷ್ಟ ಎನ್ನಬಹುದು. ಕಣ್ಣು-ಮೂಗು – ಗಂಟಲಿನ ಸೋಂಕು, ಅಸ್ತಮಾ, ಹೃದಯದೊತ್ತಡ, ಕೆಮ್ಮು, ಉಸಿರಾಟದ ಸಮಸ್ಯೆ ಮೊದಲಾದವುಗಳು ದೆಹಲಿ ಮಾಲಿನ್ಯದಿಂದ ಉಂಟಾಗುತ್ತದೆ. ಈ ಎಲ್ಲಾ ಸಮಸ್ಯೆಗಳು ಮಾನಸಿಕ ಖಿನ್ನತೆಗೂ ಕೂಡಾ ಕಾರಣವಾಗುತ್ತದೆ. ಓರ್ವ ವ್ಯಕ್ತಿಗೆ ನಿರಂತರವಾಗಿ ಆರೋಗ್ಯ ಸಮಸ್ಯೆಗಳು ಕಾಡಿದಾಗ ಆತ/ಆಕೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವುದು, ಕಡೆಗೆ ಅದು ಸಾವಿನೆಡೆಗೆ ದೂಡಬಹುದು ಎನ್ನುತ್ತಾರೆ ಹಲವು ಮಾನಸಿಕ ತಜ್ಞರುಗಳು.

ನಿಜವಾಗಿ ಸಮಸ್ಯೆ ಅನುಭವಿಸುವವರು ಯಾರು?

ಈ ಮಾಲಿನ್ಯಕ್ಕೆ ಕಾರಣ, ಅದರ ನಿರ್ವಹಣೆ ಎಲ್ಲವುದರ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ. ವರದಿಗಳನ್ನು ಬರೆಯುತ್ತೇವೆ. ಆದರೆ ಇದರಿಂದ ನಿಜವಾಗಿ ಸಮಸ್ಯೆ ಅನುಭವಿಸುವವರು ಯಾರು? ಎಂಬ ಬಗ್ಗೆ ನಾವು ಎಂದಿಗೂ ಯೋಚಿಸಲಾರೆವು. ವಾಯುಮಾಲಿನ್ಯ ಎಲ್ಲರಿಗೂ ಸಮಸ್ಯೆ ಹುಟ್ಟಿಸುತ್ತದೆ ಹೌದು. ಆದರೆ ಅದರಲ್ಲೂ ಹೆಚ್ಚು ತೊಂದರೆಗೆ ಒಳಗಾಗುವವರು ಬಡವರು. ಈಗಾಗಲೇ ಬೆಲೆ ಏರಿಕೆ, ಹಣದುಬ್ಬರ ಬಡ, ಮಧ್ಯಮ ವರ್ಗವನ್ನು ಕುಕ್ಕಿ ತಿನ್ನುತ್ತಿದೆ. ಹೀಗಿರುವಾಗ ವಾಯುಮಾಲಿನ್ಯ ದುಷ್ಪರಿಣಾಮಕ್ಕೆ ತುತ್ತಾಗಿ ಖಾಸಗಿ ಲಾಭಕೋರ ಆಸ್ಪತ್ರೆಗಳ ಸುಳಿಯಲ್ಲಿ ಸಿಲುಕಿ ನಲುಗುವುದು ಬಡವರು.

ಶ್ರೀಮಂತರು, ಉಳ್ಳವರು ಕೊಂಚ ದಿನ ಕೂತು ತಿನ್ನಬಲ್ಲರು. ಆದರೆ ಬಡವರ ಹೊಟ್ಟೆ, ಮಧ್ಯಮ ವರ್ಗದವರ ಮೇಲಿರುವ ಸಾಲದ ಮಾಸಿಕ ಕಂತುಗಳನ್ನು ತುಂಬಲು ಜನರು ಪ್ರತಿದಿನ ದುಡಿಯಬೇಕಾಗುತ್ತದೆ. ಅದಕ್ಕಾಗಿ ಮನೆಯಿಂದ ಹೊರಬರಬೇಕು, ಕಲುಷಿತಗೊಂಡ ಗಾಳಿಗೆ ತಮ್ಮ ಮೈಯೊಡ್ಡಬೇಕು. ಈ ಹಿಂದೆಯೂ, ಇಂದಿಗೂ ಮತ್ತು ಮುಂದೆಯೂ ದೇಶದಲ್ಲಿ ಯಾವುದೇ ಆರ್ಥಿಕ, ಸಾಮಾಜಿಕ, ನೈಸರ್ಗಿಕ ಬದಲಾವಣೆಯಾದರೂ ಅದರ ಕೆಟ್ಟ ಪರಿಣಾಮ ಪರೋಕ್ಷ/ ಪ್ರತ್ಯಕ್ಷವಾಗಿ ತಟ್ಟುವುದು ಬಡವನ ಮನೆ ಬಾಗಿಲನ್ನು.

ಇದನ್ನು ಓದಿದ್ದೀರಾ? ನಾನ್ಸೆನ್ಸ್‌ ಅಣ್ಣಾಮಲೈ | ವಾಯುಮಾಲಿನ್ಯಕ್ಕೆ ಬಿಜೆಪಿ ಅಧ್ಯಕ್ಷನ ಪ್ರಚೋದನೆ

ಸಾಮಾನ್ಯ ಜನರು ಕಲುಷಿತ ಗಾಳಿಯಿಂದ ತಮ್ಮನ್ನು ಸುರಕ್ಷಿತವಾಗಿಡುವ ಎನ್‌95 ಮಾಸ್ಕ್‌ಗಳನ್ನು ಖರೀದಿಸಲು ಸಾಧ್ಯವೇ? 200ರಿಂದ 800 ರೂಪಾಯಿವರೆಗಿನ ದುಬಾರಿ ಮಾಸ್ಕ್ ಅನ್ನು ಸೈಕಲ್‌ನಲ್ಲಿ ಓಡಾಡುವ, ದಿನಗೂಲಿಯಾಗಿ 200-300 ಪಡೆಯುವ ಕಾರ್ಮಿಕನಿಗೆ ಖರೀದಿಸಲು ಸಾಧ್ಯವೇ? ಜನರ ಸುರಕ್ಷತೆಗಾಗಿ ಕಡಿಮೆ ದರದಲ್ಲಿ ಅಥವಾ ಉಚಿತ ಮಾಸ್ಕ್ ವಿತರಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ? ರಾತ್ರೋರಾತ್ರಿ ಗಾಳಿಯ ಗುಣಮಟ್ಟ ಸುಧಾರಿಸಲು ಸರ್ಕಾರದಿಂದ ಸಾಧ್ಯವಿಲ್ಲ. ಆದರೆ ಉಚಿತ ಮಾಸ್ಕ್ ವಿತರಿಸಬಹುದಲ್ಲವೇ?

ಹಾಗಾದರೆ ಮುಂದೇನು?

ಜನರು ತಮ್ಮ ಆರೋಗ್ಯವನ್ನು ಪಣಕ್ಕಿಟ್ಟು ಮನೆಯಿಂದ ಹೊರಬರಬೇಕಾದ ಸ್ಥಿತಿಗೆ ದೆಹಲಿ ತಲುಪಿರುವುದು ದೇಶದ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆಯ ಪಾಠ. ನಾವು ನಮ್ಮ ನಗರ, ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಮಾಲಿನ್ಯಗೊಳಿಸದೆ ಕಾಪಾಡುವ ಹೊಣೆ ಸ್ವಯಂ ಆಗಿ ಹೊರಬೇಕು. ಇಂದಿನ ಸ್ಥಿತಿಯಲ್ಲಿ ಅದು ಕರ್ತವ್ಯವೂ ಹೌದು. ದೆಹಲಿಯಲ್ಲಿ ವಾಯುವಿನ ಗುಣಮಟ್ಟ ಶೀಘ್ರವೇ ಸುಧಾರಿಸುವುದು ಅಸಾಧ್ಯ. ನಮ್ಮ ರಾಜ್ಯದಲ್ಲಿ ಕಳಪೆ ಗಾಳಿ ಗುಣಮಟ್ಟ ಹೊಂದಿರುವ ಬೆಂಗಳೂರು, ಮಂಗಳೂರು ನಗರಗಳನ್ನಾದರೂ ನಾವು ದೆಹಲಿಯಂತಹ ಕೆಟ್ಟ ಸ್ಥಿತಿಗೆ ಕೊಂಡೊಯ್ಯದಂತೆ ಕಾಪಾಡೋಣ. ಈಗಲೇ ಸೂಕ್ತ ಮುನ್ನೆಚ್ಚರಿಕೆ ಕ್ರಮಕ್ಕೆ ಸರ್ಕಾರವನ್ನು ಒತ್ತಾಯಿಸೋಣ.

Mayuri
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X