ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಜಿ20 ಶೃಂಗಸಭೆಗೆ ಮುನ್ನ ದೆಹಲಿಯ ಹಲವಾರು ಮೆಟ್ರೋ ನಿಲ್ದಾಣಗಳ ಗೋಡೆಗಳಲ್ಲಿ ಖಲಿಸ್ತಾನ್ ಪರ ಬರಹಗಳು ಕಂಡು ಬಂದಿವೆ.
ಪಂಜಾಬಿ ಬಾಗ್, ಶಿವಾಜಿ ಪಾರ್ಕ್, ಮಾದಿಪುರ್, ಪಶ್ಚಿಮ ವಿಹಾರ್, ಉದ್ಯೋಗ್ ನಗರ್ ಮತ್ತು ಮಹಾರಾಜ ಸೂರಜ್ಮಲ್ ಸ್ಟೇಡಿಯಂ ಸೇರಿದಂತೆ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ‘ದೆಹಲಿ ಬನೇಗಾ ಖಲಿಸ್ತಾನ್’ ಮತ್ತು ‘ಖಲಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಬರೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಕಾರ್ಯಕರ್ತರು ಶಿವಾಜಿ ಪಾರ್ಕ್ ಮತ್ತು ಪಂಜಾಬಿ ಬಾಗ್ ಸೇರಿದಂತೆ ಹಲವು ಮೆಟ್ರೋ ನಿಲ್ದಾಣಗಳಳಿಗೆ ಆಗಮಿಸಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ | ದಲಿತ ವ್ಯಕ್ತಿಯ ಹತ್ಯೆ; ಆತನ ತಾಯಿಯನ್ನು ನಗ್ನಗೊಳಿಸಿ ಅವಮಾನ
ನಂಗ್ಲೋಯ್ನಲ್ಲಿರುವ ಸರ್ಕಾರಿ ಸರ್ವೋದಯ ಬಾಲ ವಿದ್ಯಾಲಯದ ಗೋಡೆಯ ಮೇಲೂ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿದೆ.
ಘಟನೆ ಬೆಳಕಿಗೆ ಬಂದ ನಂತರ ದೆಹಲಿ ಪೊಲೀಸರ ವಿಶೇಷ ತಂಡ ಗೋಡೆ ಬರಹಗಳನ್ನು ಅಳಿಸಿಹಾಕುವಲ್ಲಿ ನಿರತವಾಗಿದೆ. ಅಲ್ಲದೆ ಆರೋಪಿಗಳನ್ನು ಪತ್ತೆ ಹಚ್ಚಿ ಆದಷ್ಟು ಬೇಗ ಬಂಧಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯುತ್ತಿರುವ ಸೆಪ್ಟೆಂಬರ್ 10 ರಂದು ಕೆನಡಾದ ಸರ್ರೆಯಲ್ಲಿ ಖಲಿಸ್ತಾನ್ನ ಜನಾಭಿಪ್ರಾಯ ಸಂಗ್ರಹಣೆ ನಡೆಯಲಿದೆ ಎಂದು ಅದರ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ವಿಡಿಯೋದಲ್ಲಿ ತಿಳಿಸಿದ್ದಾರೆ.
ಜಿ-20 ಶೃಂಗಸಭೆ ಸೆ. 9 ಹಾಗೂ 10ರಂದು ನಡೆಯಲಿದೆ. 40ಕ್ಕೂ ಹೆಚ್ಚು ದೇಶಗಳ ನಾಯಕರು, ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು, ಆಯ್ದ ದೇಶಗಳ ಅತಿಥಿಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಲಿದ್ದಾರೆ.