ತರಗತಿಯ ಗೋಡೆಗಳಿಗೆ ದೆಹಲಿ ಕಾಲೇಜು ಪ್ರಾಂಶುಪಾಲೆ ಸಗಣಿ ಬಳಿದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪ್ರಾಂಶುಪಾಲೆ ಮೇಜಿನ ಮೇಲೆ ನಿಂತು ಕೈಯಲ್ಲೇ ಸೆಗಣಿ ತೆಗೆದು ಗೋಡೆಗೆ ಬಳಿಯುತ್ತಿರುವ ವಿಡಿಯೋದಲ್ಲಿ ಕಂಡು ಬಂದಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ “ಇದು ನನ್ನ ಸಂಶೋಧನೆ ಯೋಜನೆ” ಎಂದು ಪ್ರಾಂಶುಪಾಲೆ ಹೇಳಿಕೊಂಡಿದ್ದಾರೆ.
ಸುಮಾರು 35 ಸೆಕೆಂಡುಗಳ ವಿಡಿಯೋದಲ್ಲಿರುವುದು ದೆಹಲಿಯ ಲಕ್ಷ್ಮೀಬಾಯಿ ಕಾಲೇಜಿನ ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, “ಇದು ನನ್ನ ಸಂಶೋಧನಾ ಯೋಜನೆಯೊಂದರ ಭಾಗವಾಗಿದೆ. ಸಂಶೋಧನೆ ಮುಂದುವರೆದಿದೆ. ಒಂದು ವಾರದ ಬಳಿಕ ಸಂಪೂರ್ಣ ಮಾಹಿತಿ ನೀಡುವೆ. ಸಗಣಿ ನೈಸರ್ಗಿಕವಾದುದ್ದು, ಅದನ್ನು ಮುಟ್ಟುವುದರಿಂದ ಏನೂ ಆಗುವುದಿಲ್ಲ. ಆದರೆ ಕೆಲವರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಗಾಳಿಯಲ್ಲಿ ಗುಂಡು ಹಾರಿಸಿ ಅಪ್ರಾಪ್ತೆಯ ಅಪಹರಣ; ವಿಡಿಯೋ ವೈರಲ್
ಪ್ರಾಂಶುಪಾಲೆ ಈ ವಿಡಿಯೋವನ್ನು ತನ್ನ ಕಾಲೇಜಿನ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಂದ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. “ಶೀಘ್ರವೇ ಈ ಕೋಣೆಯು ಹೊಸ ರೀತಿಯಲ್ಲಿ ಕಾಣಲಿದೆ. ಇದು ನೀವು ಪಾಠ ಮಾಡುವ ಅನುಭವವನ್ನು ಹಿತಗೊಳಿಸಲಿದೆ” ಎಂದು ಪ್ರಾಂಶುಪಾಲೆ ಹೇಳಿದ್ದಾರೆ.
ಆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಉದ್ಯೋಗಾವಕಾಶಗಳ ಬಗ್ಗೆ ಶಿಕ್ಷಣ ತಜ್ಞ ವಿಜೇಂದರ್ ಚೌಹಾಣ್ ಅವರು ಪ್ರಶ್ನಿಸಿದ್ದಾರೆ. “ಅವರು ನಮ್ಮ ವಿಶ್ವವಿದ್ಯಾಲಯದ ಕಾಲೇಜಿನ ಪ್ರಾಂಶುಪಾಲರು. ತರಗತಿಯ ಗೋಡೆಗಳ ಮೇಲೆ ಗೋವಿನ ಮಲವನ್ನು ಬಳಿಯುತ್ತಿದ್ದಾರೆ. ನನಗೆ ಈಗ ಹಲವು ವಿಷಯಗಳ ಬಗ್ಗೆ ಚಿಂತೆ ಉಂಟಾಗಿದೆ. ನೀವು ಉದ್ಯೋಗದಾತರಾಗಿದ್ದರೆ ಇಂತಹ ಕಾಲೇಜಿನಲ್ಲಿ ಕಲಿತವರಿಗೆ ಉದ್ಯೋಗ ನೀಡುವಿರಾ” ಎಂದು ಪ್ರಶ್ನಿಸಿದ್ದಾರೆ.
The principal of Delhi University's Laxmibai College has been caught on video smearing cow dung on the walls of a classroom.
— Mr. Perfect (@Brave_092) April 14, 2025
When asked, Principal Pratyush Vatsala said that the purpose is to keep the classrooms cool in a natural way during summers.
#DelhiUniversity #BabyGirl pic.twitter.com/rpEKj0HLth
ಸದ್ಯ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಟ್ಟಿಗರು ಪ್ರಾಂಶುಪಾಲೆಯನ್ನು ಹಾಡಿಹೊಗಳಿದರೆ, ಇನ್ನು ಕೆಲವರು ಇದು ಅಂಧ ಭಕ್ತಿ ಎಂದಿದ್ದಾರೆ. “ಇದು ತರಗತಿ ತಂಪಾಗಿರಲು ಉತ್ತಮ ಕ್ರಮವೇ ಅಥವಾ ಅಂಧ ಭಕ್ತಿಯೇ” ಎಂದು ಗ್ರೋಕ್ ಅನ್ನು ಕೆಲವರು ಪ್ರಶ್ನಿಸಿದ್ದಾರೆ. “ಕಾಲೇಜಿನ ಗೋಡೆಗೆ ಸಗಣಿ ಬಳಿದ ಪ್ರಾಂಶುಪಾಲೆ ತನ್ನ ಮನೆಯ ಗೋಡೆಗೂ ಬಳಿಯಬಹುದು ಎಂದುಕೊಂಡಿದ್ದೇನೆ” ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.
ಅಷ್ಟಕ್ಕೂ ವಿದ್ಯಾವಂತರೇ ಸಗಣಿಯನ್ನು ಪವಿತ್ರವೆಂದು ಹೇಳಿರುವುದು ಇದೇ ಮೊದಲಲ್ಲ. 2023ರಲ್ಲಿ ಮಧ್ಯಪ್ರದೇಶದ ಸಾಗರ್‌ನ ವೈದ್ಯರೊಬ್ಬರು ತಮ್ಮ ಕಾರಿಗೆ ಗೋವಿನ ಸಗಣಿಯನ್ನು ಹಾಕಿದ್ದರು.
“ಗೋವಿನ ಸಗಣಿ ಲೇಪನ ಮಾಡುವುದರಿಂದ ಕಾರಿನ ಒಳಗಿನ ತಾಪಮಾನವು ಹೆಚ್ಚಾಗುವುದಿಲ್ಲ” ಎಂಬ ಅವೈಜ್ಞಾನಿಕ ಹೇಳಿಕೆಗಳನ್ನು ವೈದ್ಯರು ನೀಡಿದ್ದರು. ಹಾಗೆಯೇ 2019ರಲ್ಲಿ ಗೃಹಿಣಿ ಸೆಜಲ್ ಷಾ ಕಾರು ತಂಪಾಗಿರಲಿ ಎಂದು ತನ್ನ ಕಾರಿಗೆ ಸಗಣಿಯನ್ನು ದಪ್ಪವಾಗಿ ಬಳಿದಿದ್ದರು!
