ಇತ್ತೀಚೆಗೆ, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದೆಹಲಿ ನಿವಾಸದಲ್ಲಿ ಕೋಟಿ-ಕೋಟಿ ರೂ. ಹಣ ಪತ್ತೆಯಾದ ಬಳಿಕ, ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ. ಅವರು ದೆಹಲಿ ಹೈಕೋರ್ಟ್‌ನಲ್ಲಿದ್ದಾಗ ವಿಚಾರಣೆ ನಡೆಸಿದ್ದ, ಅಂತಿಮ ತೀರ್ಪು ಬಂದಿರದ 52 ಪ್ರಕರಣಗಳನ್ನು ಹೊಸದಾಗಿ ಮರುವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ನಿರ್ಧರಿಸಿದೆ.
ಈ ಬಗ್ಗೆ ಸಾರ್ವಜನಿಕ ಸೂಚನೆ ನೀಡಿರುವ ದೆಹಲಿ ಹೈಕೋರ್ಟ್, “ನ್ಯಾಯಮೂರ್ತಿ ಯಶವಂತ್ ವರ್ಮಾ ಮತ್ತು ನ್ಯಾಯಮೂರ್ತಿ ಹರೀಶ್ ವೈದ್ಯನಾಥನ್ ಶಂಕರ್ ಅವರ ವಿಭಾಗೀಯ ಪೀಠದ ಮುಂದೆ ಈ ಹಿಂದೆ ಪಟ್ಟಿ ಮಾಡಲಾಗಿದ್ದ ಮತ್ತು ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದ ಪ್ರಕರಣಗಳು ಇವು. ಯಾವುದೇ ಆದೇಶಗಳನ್ನು ಹೊರಡಿಸಿದ ಈ 52 ಪ್ರಕರಣಗಳನ್ನು ಮರು ಪಟ್ಟಿ ಮಾಡಿ, ಹೊಸದಾಗಿ ಆರಂಭದಿಂದ ವಿಚಾರಣೆ ನಡೆಸಲಾಗುವುದು. ಸಂಬಂಧಪಟ್ಟ ಎಲ್ಲರಿಗೂ ಮಾಹಿತಿ ನೀಡಲಾಗಿದೆ” ಎಂದು ಹೇಳಿದೆ.
ಮರು ವಿಚಾರಣೆಗೆ ಪಟ್ಟಿ ಮಾಡಲಾಗಿರುವ 52 ಪ್ರಕರಣಗಳಲ್ಲಿ ಹೆಚ್ಚಿನವು ಜಿಎಸ್‌ಟಿ ಮತ್ತು ತೆರಿಗೆಗೆ ಸಂಬಂಧಿತ ವಿವಾದಗಳಿಗೆ ಸಂಬಂಧಿಸಿವೆ ಎಂದು ವರದಿಯಾಗಿದೆ.
ಈ ವರದಿ ಓದಿದ್ದೀರಾ?: ದೇಶದ್ರೋಹಿ’ಯೊಬ್ಬನ ಅಪೂರ್ಣ ಆಂದೋಲನ
ಮಾರ್ಚ್ 14ರಂದು ದೆಹಲಿಯಲ್ಲಿನ ವರ್ಮಾ ಅವರ ನಿವಾಸದಲ್ಲಿ ಬೆಂಕಿ ಅವಗಢ ಸಂಭವಿಸಿತ್ತು. ಈ ವೇಳೆ, ಕಳೆದ ತಿಂಗಳು ಅರೆ-ಬರೆ ಸುಟ್ಟುಹೋಗಿದ್ದ ಹಣದ ರಾಶಿ ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ವರ್ಮಾ ಅವರ ವಿರುದ್ಧ ಆಂತರಿಕ ತನಿಖೆ ನಡೆದು, ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ.
ಅವರನ್ನು ಅಲಹಾಬಾದ್‌ಗೆ ವರ್ಗಾವಣೆ ಮಾಡಿದ್ದನ್ನು ಅಲಹಾಬಾದ್‌ನ ಬಾರ್ ಕೌನ್ಸಿಲ್‌ಗಳು ವಿರೋಧಿಸಿದ್ದವು. ವಿರೋಧದ ಪರಿಣಾಮವಾಗಿ ಅವರ ಪ್ರಮಾಣವಚನವನ್ನು ಸಾರ್ವಜನಿಕ ಸಮಾರಂಭದಲ್ಲಿ ನಡೆಸುವ ಬದಲು ಖಾಸಗಿಯಾಗಿ ನಡೆಸಲಾಯಿತು. ಅಲ್ಲದೆ, ಸದ್ಯಕ್ಕೆ ವರ್ಮಾ ಅವರು ಯಾವುದೇ ಪ್ರಕರಣಗಳ ವಿಚರಣೆ ನಡೆಸದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿದೆ.