ಫೋನೋಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ (ಪಿಪಿಎಲ್) ಹಕ್ಕುಸ್ವಾಮ್ಯವನ್ನು ಹೊಂದಿರುವ ಹಾಡುಗಳನ್ನು ವಿರಾಟ್ ಕೊಹ್ಲಿ ಒಡೆತನದ ಒನ್8 ಕಮ್ಯೂನ್ ರಸ್ಟೋರೆಂಟ್‌ಗಳು/ ಕಫೆಗಳು ಪ್ರಸಾರ ಮಾಡದಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ಆದೇಶವನ್ನು ನೀಡಿದೆ.
ಮುಂದಿನ ವಿಚಾರಣೆಯ ದಿನಾಂಕದವರೆಗೆ ಆದೇಶವು ಜಾರಿಯಲ್ಲಿರುತ್ತದೆ ಮತ್ತು ಪರವಾನಗಿ ಪಡೆಯದೆ ಒನ್8 ಕಮ್ಯೂನ್ ಸಂಸ್ಥೆಯು ಪಿಪಿಎಲ್‌ನ ಹಾಡುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿ ಸಿ ಹರಿ ಶಂಕರ್ ತಿಳಿಸಿದ್ದಾರೆ.
“ಮುಂದಿನ ವಿಚಾರಣೆಯ ದಿನಾಂಕದವರೆಗೆ, ಪ್ರತಿವಾದಿಗಳು ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುವ ಇತರ ಎಲ್ಲರು ಅರ್ಜಿದಾರರ ಹಕ್ಕುಸ್ವಾಮ್ಯ ವಿಷಯ ಹೊಂದಿರುವ ಯಾವುದೇ ರೆಕಾರ್ಡಿಂಗ್‌ಗಳನ್ನು ಅರ್ಜಿದಾರರ ಪೂರ್ವ ಪರವಾನಗಿಯನ್ನು ಪಡೆಯದೆ ಪ್ಲೇ ಮಾಡುವುದನ್ನು ನಿರ್ಬಂಧಿಸಲಾಗಿದೆ” ಎಂದು ಸಿ ಹರಿ ಶಂಕರ್ ಅವರು ತಮ್ಮ ತೀರ್ಪಿನಲ್ಲಿ ಆದೇಶಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಒಳಜಗಳದಲ್ಲಿ ಬಸವಳಿದ ಬಿಜೆಪಿ; ಕರ್ನಾಟಕಕ್ಕೆ ಬೇಕು ಸಮರ್ಥ ವಿರೋಧ ಪಕ್ಷ
ಫೋನೋಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ ಸಂಸ್ಥೆಯು ವಿರಾಟ್ ಕೊಹ್ಲಿ ಒಡೆತನದ ಒನ್8 ಕಮ್ಯೂನ್ ರಸ್ಟೋರೆಂಟ್‌ಗಳು/ಕಫೆಗಳ ವಿರುದ್ಧ ತನ್ನ ಹಾಡುಗಳನ್ನು ಪ್ರಸಾರ ಮಾಡದಂತೆ ಹಕ್ಕುಸ್ವಾಮ್ಯ ಉಲ್ಲಂಘನೆಯಡಿ ಮೊಕದ್ದಮೆ ದಾಖಲಿಸಿತ್ತು.
ಯಾವುದೇ ಹಕ್ಕುಸ್ವಾಮ್ಯ ಪರವಾನಗಿ ಇಲ್ಲದೆ ಒನ್8 ಕಮ್ಯೂನ್ ತನ್ನ ರೆಸ್ಟೋರೆಂಟ್‌ಗಳು/ಕೆಫೆಗಳಲ್ಲಿ ತನ್ನ ಹಾಡುಗಳನ್ನು ಪ್ಲೇ ಮಾಡುತ್ತಿದೆ ಎಂದು ಹೇಳಲಾಗಿದೆ ಮತ್ತು ಈ ಸಂಬಂಧ ಅವರಿಗೆ ಕಾನೂನು ನೋಟಿಸ್ ನೀಡಲಾಗಿದೆ. ಆದಾಗ್ಯೂ, ಒನ್8 ಕಮ್ಯೂನ್ ಕಾನೂನು ಸೂಚನೆಯ ನಿಯಮಗಳನ್ನು ಎಂದಿಗೂ ಅನುಸರಿಸಲಿಲ್ಲ ಎಂದು ಪಿಪಿಎಲ್ ಸಂಸ್ಥೆಯ ಅರ್ಜಿದಾರರು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಒನ್8 ಕಮ್ಯೂನ್‌ನ ವಕೀಲರು, ಪರವಾನಗಿಯನ್ನು ಪಡೆಯದೆ ಪಿಪಿಎಲ್‌ನ ಹಕ್ಕುಸ್ವಾಮ್ಯದ ರೆಕಾರ್ಡಿಂಗ್‌ಗಳನ್ನು ಪ್ಲೇ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ನ್ಯಾಯಮೂರ್ತಿ ಹರಿ ಶಂಕರ್ ಅವರು ಪ್ರತಿವಾದಿಗಳ ಹೇಳಿಕೆಯನ್ನು ದಾಖಲು ಮಾಡಿಕೊಂಡರು ಮತ್ತು ಕಾನೂನಿನ ಸ್ಥಾನವು ಪ್ರಾಥಮಿಕವಾಗಿ ಸ್ಪಷ್ಟವಾಗಿದೆ ಮತ್ತು ಫೋನೋಗ್ರಾಫಿಕ್ ಪರ್ಫಾರ್ಮೆನ್ಸ್ ಲಿಮಿಟೆಡ್ ರೆಕಾರ್ಡಿಂಗ್‌ಗಳ ಹಕ್ಕುಸ್ವಾಮ್ಯದ ಮಾಲೀಕರಾಗಿರುವುದರಿಂದ, ಪರವಾನಗಿ ಇಲ್ಲದೆ ಆ ರೆಕಾರ್ಡಿಂಗ್‌ಗಳನ್ನು ಪ್ಲೇ ಮಾಡಲು ಬೇರೆಯವರಿಗೆ ಅನುಮತಿ ಇಲ್ಲ ಎಂದು ಒತ್ತಿ ಹೇಳಿದರು. ನಂತರ ಸಿ ಹರಿಶಂಕರ್ ಪೀಠ ಮಧ್ಯಂತರ ಆದೇಶ ನೀಡಲು ಮುಂದಾಯಿತು.