ಸೋಮವಾರದ ಹಿಂಸಾತ್ಮಕ ಘಟನೆಗಳ ನಂತರ ಮಂಗಳವಾರ ಬೆಳಗ್ಗೆಯೇ ದೆಹಲಿಯ ಜಂತರ್ ಮಂತರ್ ಮತ್ತು ಸಂಸತ್ ಸುತ್ತಮುತ್ತದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತವರಿದಿದ್ದವು. ನೂರಾರು ದೆಹಲಿ ಪೊಲೀಸ್ ಸಿಬ್ಬಂದಿ, ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ಹಾಗೂ ಇತರ ಭದ್ರತಾ ಸಿಬ್ಬಂದಿಗಳನ್ನು ಬೆಳ್ಳಂಬೆಳಗ್ಗೆಯೇ ಮಧ್ಯ ದೆಹಲಿ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಸಂಸತ್ ಮಾರ್ಗ, ರಫಿ ಮಾರ್ಗ, ಜಂತರ್ ಮಂತರ್ ಪ್ರವೇಶ ದ್ವಾರಗಳು ಸೇರಿದಂತೆ ಕೇಂದ್ರ ದೆಹಲಿಯ ಪ್ರಮುಖ ರಸ್ತೆಗಳಲ್ಲಿ ಹೆಚ್ಚುವರಿ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಯಾವುದೇ ದೊಡ್ಡ ಮೆರವಣಿಗೆ ಸಂಸತ್ ಕಡೆಗೆ ಸಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಪೊಲೀಸರ ಈ ಸರ್ಪಗಾವಲಿನ ನಡುವೆಯೂ ಪ್ರತಿಭಟನಾ ಸ್ಥಳದತ್ತ ವಿದ್ಯಾರ್ಥಿಗಳು ಮತ್ತು ಯುವಜನರು ಬೆಳಗ್ಗೆಯೇ ಮತ್ತೆ ಬರಲಾರಂಭಿಸಿದರು. ಆದರೆ, ಅವರನ್ನು ಒಮ್ಮೆಲೇ ದೊಡ್ಡ ಸಂಖ್ಯೆಯಲ್ಲಿ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಸಣ್ಣ-ಸಣ್ಣ ಗುಂಪುಗಳಾಗಿ ಮಾತ್ರ ಒಳಗೆ ಬಿಡಲಾಯಿತು. ಪ್ರತಿಭಟನಾ ಸ್ಥಳದ ಪ್ರತಿಯೊಂದು ಪ್ರವೇಶ ದ್ವಾರದಲ್ಲೂ ತಪಾಸಣೆಗಳು ನಡೆಯುತ್ತಿದ್ದವು. ಆದಾಗ್ಯೂ, ವಿದ್ಯಾರ್ಥಿಗಳು ಭಯಪಡದೆ ಮತ್ತೆ ಜಂತರ್ ಮಂತರ್‌ಗೆ ಧಾವಿಸಿದರು.
ಜಂತರ್ ಮಂತರ್‌ಗೆ ಆಗಮಿಸಿದ ಅಭಿಜಿತ್ ದಿಪ್ಕೆ
ಸುಮಾರು ಎಂಟು ಗಂಟೆಯ ಬಳಿಕ ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಅವರು ಜಂತರ್ ಮಂತರ್‌ಗೆ ಬಂದರು. ಅಲ್ಲಿ ಸೇರಿದ್ದ ವಿದ್ಯಾರ್ಥಿಗಳು ಮತ್ತು ಯುವಜನರನ್ನುದ್ದೇಶಿಸಿ ಮಾತನಾಡಿದ ಅವರು, “ನಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ; ಅನ್ಯಾಯದ ವಿರುದ್ಧ. ಸೋಮವಾರದ ಪೊಲೀಸ್ ಕ್ರಮ ಹೋರಾಟವನ್ನು ಕುಗ್ಗಿಸಿಲ್ಲ, ಬದಲಿಗೆ ಇನ್ನಷ್ಟು ಬಲಗೊಳಿಸಿದೆ. ನಮ್ಮ ಮೇಲೆ ಎಷ್ಟೇ ಲಾಠಿ ಬೀಸಿದರೂ, ವಿದ್ಯಾರ್ಥಿಗಳ ನ್ಯಾಯದ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲ” ಎಂದು ಘೋಷಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನರ ರಾಜೀನಾಮೆ, ಪರೀಕ್ಷಾ ವ್ಯವಸ್ಥೆಯ ಸುಧಾರಣೆ, ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ಪೊಲೀಸ್ ಕ್ರಮದ ಕುರಿತು ಸ್ವತಂತ್ರ ತನಿಖೆ ನಡೆಸುವುದು ಸೇರಿದಂತೆ ಸಿಜೆಪಿಯ ಪ್ರಮುಖ ಬೇಡಿಕೆಗಳನ್ನು ಮತ್ತೊಮ್ಮೆ ವಿವರಿಸಿದರು.
ಬಳಿಕ, ಅವರು ಸೋಮವಾರದ ಪೊಲೀಸ್ ಹಿಂಸಾಚಾರದಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಭೇಟಿ ಮಾಡಲು ಮಾಡುವುದಾಗಿ ತಿಳಿದರು. ವಿದ್ಯಾರ್ಥಿ ಯುವಜನರು ಪ್ರತಿಭಟನೆಯನ್ನು ಮುಂದುವರೆಸಿದರು.
ಆಸ್ಪತ್ರೆಗೆ ಭೇಟಿ, ಗಾಯಾಳು ವಿದ್ಯಾರ್ಥಿಗಳ ಆರೋಗ್ಯದ ಕುರಿತು ಆತಂಕ
ಬೆಳಿಗ್ಗೆ ಸುಮಾರು 9.30ರ ಸುಮಾರಿಗೆ ರಾಮ ಮನೋಹರ್ ಲೋಹಿಯಾ (RML) ಆಸ್ಪತ್ರೆಯಲ್ಲಿ ಗಾಯಾಳು ವಿದ್ಯಾರ್ಥಿಗಳನ್ನು ದೀಪ್ಕೆ ಭೇಟಿ ಮಾಡಿದರು. ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಅವರು, ವೈದ್ಯರಿಂದ ಗಾಯಾಳುಗಳ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.
ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯ ಆರೋಗ್ಯದ ಬಗ್ಗೆ ಕುಟುಂಬದವರು ತೀವ್ರ ಆತಂಕ ವ್ಯಕ್ತಪಡಿಸಿದರು. ಆಕೆಗೆ ತಲೆಗೆ ಗಂಭೀರ ಪೆಟ್ಟಾಗಿದ್ದು, ನಿರಂತರ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ ಎಂದು ಕುಟುಂಬದವರು ತಿಳಿಸಿದರು. ಇದೇ ವೇಳೆ ಗಾಯಗೊಂಡ ಇತರ ವಿದ್ಯಾರ್ಥಿಗಳೂ ತಮ್ಮ ಅನುಭವಗಳನ್ನು ಸಿಜೆಪಿ ನಾಯಕರೊಂದಿಗೆ ಹಂಚಿಕೊಂಡರು.
ಆಸ್ಪತ್ರೆಯಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಭಿಜಿತ್ ದಿಪ್ಕೆ, “ವಿದ್ಯಾರ್ಥಿಗಳನ್ನು ಇನ್ನಷ್ಟು ಸುರಕ್ಷಿತವಾಗಿಡಬಹುದಿತ್ತು. ಆದರೆ, ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದರು. ಆದರೂ ವಿದ್ಯಾರ್ಥಿಗಳ ಧೈರ್ಯ ಕುಗ್ಗಿಲ್ಲ. ನ್ಯಾಯ ಸಿಗುವವರೆಗೆ ಈ ಹೋರಾಟ ಮುಂದುವರಿಯಲಿದೆ” ಎಂದು ಹೇಳಿದರು. ಗಾಯಾಳು ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಕಾನೂನು ಮತ್ತು ವೈದ್ಯಕೀಯ ನೆರವು ನೀಡಲಾಗುವುದು ಎಂದೂ ಅವರು ಭರವಸೆ ನೀಡಿದರು.
ಸ್ಪೀಕರ್ ಓಂ ಬಿರ್ಲಾ ಭೇಟಿಯಾದ ರಾಹುಲ್ ಗಾಂಧಿ
ಇದೇ ಸಮದಯಲ್ಲಿ, ಮಂಗಳವಾರದ ಲೋಕಸಭೆ ಕಲಾಪ ಆರಂಭಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್, ಶಿವಸೇನೆ (ಯುಬಿಟಿ)ಯ ಅರವಿಂದ್ ಸಾವಂತ್, ಆರ್‌ಎಸ್‌ಪಿ ಸಂಸದ ಎನ್.ಕೆ. ಪ್ರೇಮಚಂದ್ರನ್ ಸೇರಿದಂತೆ ಹಲವು ವಿಪಕ್ಷ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿದರು. ಸೋಮವಾರ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್, ಪರೀಕ್ಷಾ ಹಗರಣ ಹಾಗೂ ಕೇಂದ್ರ ಸರ್ಕಾರದ ಉತ್ತರದಾಯಿತ್ವದ ಬಗ್ಗೆ ಲೋಕಸಭೆಯಲ್ಲಿ ತಕ್ಷಣ ಚರ್ಚೆಗೆ ಅವಕಾಶ ನೀಡುವಂತೆ ಅವರು ಒತ್ತಾಯಿಸಿದರು.
“ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಪರೀಕ್ಷಾ ವ್ಯವಸ್ಥೆಯ ವೈಫಲ್ಯದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಲೇಬೇಕು” ಎಂದು ರಾಹುಲ್ ಗಾಂಧಿ ಸ್ಪೀಕರ್‌ಗೆ ಮನವಿ ಮಾಡಿದರು. ಆದರೆ, “ಸರ್ಕಾರದೊಂದಿಗೆ ಮಾತನಾಡಿ ತೀರ್ಮಾನಿಸಬೇಕು” ಎಂದು ಸ್ಪೀಕರ್ ಜಾರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಚರ್ಚೆ ನಡೆಸಲು ಸ್ಪೀಕರ್ ಕೂಡ ಸರ್ಕಾರದ ಅನುಮತಿ ಪಡೆಯಬೇಕು ಎಂದು ಹೇಳುತ್ತಿರುವುದು ಸಂಸತ್ತಿನ ಸ್ವಾಯತ್ತತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಾದ ಬಳಿಕ ವಿಪಕ್ಷಗಳು ಸಂಸತ್ತಿನ ಒಳಗೂ-ಹೊರಗೂ ಪ್ರತಿಭಟನೆಗಳನ್ನು ತೀವ್ರಗೊಳಿಸಿದವು.
ಆಸ್ಪತ್ರೆಗೆ ಜೆ.ಪಿ ನಡ್ಡಾ ಭೇಟಿ
ವಿಪಕ್ಷಗಳು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಮಯದಲ್ಲಿಯೇ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ರಾಮ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆರಳಿ ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿಯಾದರು. ಸರ್ಕಾರ ಸಂವಾದಕ್ಕೆ ಸಿದ್ಧವಿದೆ ಎಂಬ ಸಂದೇಶ ನೀಡುವುದು ಅವರ ಉದ್ದೇಶವಾಗಿತ್ತು. ಆದರೆ, ಸಿಜೆಪಿ ನಾಯಕರು ‘ಕೇವಲ ಭೇಟಿ ಸಾಕಾಗುವುದಿಲ್ಲ; ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ನಿರ್ಧಾರ ಬೇಕು’ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಮೋದಿ ಪ್ರತಿಕ್ರಿಯೆ
ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ವ್ಯವಸ್ಥೆಯನ್ನು ‘ದೋಷರಹಿತ’ವಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿಕೊಂಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಬಂಧನ, ಮರುಪರೀಕ್ಷೆ ಸೇರಿದಂತೆ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ್ದಾರೆ. ಆದರೆ, ಸೋಮವಾರದ ಲಾಠಿಚಾರ್ಜ್ ಬಗ್ಗೆ ಅವರು ಪ್ರತಿಕ್ರಿಯಿಸಲಿಲ್ಲ.
ಮೋದಿ ಮನೆ ಎದುರು ಕಾಂಗ್ರೆಸ್ ಬೃಹತ್ ಪ್ರತಿಭಟನೆ
ಇಂದಿನ ಅತ್ಯಂತ ಪ್ರಮುಖ ರಾಜಕೀಯ ಬೆಳವಣಿಗೆಯಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ ಸಂಸದರು ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮಕ್ಕೆ ಪ್ರಧಾನಿಯೇ ರಾಜಕೀಯವಾಗಿ ಹೊಣೆ ಹೊತ್ತು ಉತ್ತರಿಸಬೇಕು. ಲಾಠಿಚಾರ್ಜ್ ಕುರಿತು ಸ್ವತಂತ್ರ ತನಿಖೆ ನಡೆಸಬೇಕೆಂದೂ ಒತ್ತಾಯಿಸಿದರು.
ಈ ಲೇಖನ ಓದಿದ್ದೀರಾ?: ಬಿಜೆಪಿಗೆ ಬಿಸಿತುಪ್ಪವಾದ ಪರೀಕ್ಷಾ ಹಗರಣ, ವಾಂಗ್ಚುಕ್, ರಾಮಮಂದಿರ, ಎಥೆನಾಲ್!
ಪತ್ರಿಭಟನೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ವಿದ್ಯಾರ್ಥಿಗಳು ಮತ್ತು ಯುವಜನರ ಮೇಲೆ ನಡೆದಿರುವ ಈ ಪೋಲೀಸ್ ದೌರ್ಜನ್ಯವು ಸಂಪೂರ್ಣವಾಗಿ ‘ಭಾರತೀಯತೆಗೆ ವಿರುದ್ಧವಾಗಿದೆ. ಈ ಕೃತ್ಯಕ್ಕಾಗಿ ಪ್ರಧಾನಿ ಮೋದಿ ದೇಶದ ಯುವಸಮುದಾಯದ ಬಳಿ ಕ್ಷಮೆಯಾಚಿಸಬೇಕು. ಪ್ರತಿಭಟನೆ ನಡೆಸುತ್ತಿರುವ ಯುವಕರು ದೇಶದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿನ ನ್ಯೂನತೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ, ಇಡೀ ದೇಶಕ್ಕೆ ತಿಳಿದಿರುವಂತೆ ಪ್ರಸ್ತುತ ಭಾರತೀಯ ಪರೀಕ್ಷಾ ವ್ಯವಸ್ಥೆಯು ಗೆದ್ದಲು ಹಿಡಿದು ಟೊಳ್ಳಾಗಿದೆ. ಪರೀಕ್ಷಾ ಅಕ್ರಮಗಳ ಸಂಪೂರ್ಣ ಹೊಣೆ ಹೊತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
ಸೋನಂ ವಾಂಗ್ಚುಕ್ ಸ್ಥಳಾಂತರಕ್ಕೆ ಹೈಕೋರ್ಟ್ ಸೂಚನೆ
ಜುಲೈ 28ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್ಚುಕ್ ಅವರನ್ನು ಭಾನುವಾರ ದೆಹಲಿ ಪೊಲೀಸರು ಬಲವಂತವಾಗಿ ಹೊತ್ತೊಯ್ದು, ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿತ್ತು. ಆದರೆ, ಆಸ್ಪತ್ರೆಯ ವೈದ್ಯಕೀಯ ವರದಿಗಳ ಬಗ್ಗೆ ಅಪನಂಬಿಕೆ ಇದೆ. ಅವರನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದು ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೊ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯನ್ನು ಆಲಿಸಿದ ಹೈಕೋರ್ಟ್, ‘ವಾಂಗ್ಚುಕ್ ಅವರ ಕಾಳಜಿಯನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದು, ಅವರನ್ನು ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದೆ.
ತಮ್ಮ ಕೃತ್ಯವನ್ನು ಮತ್ತೆ ಸಮರ್ಥಿಸಿಕೊಂಡ ದೆಹಲಿ ಪೊಲೀಸರು
ಸೋಮವಾರ ತಾವು ವಿದ್ಯಾರ್ಥಿಗಳ ಮೇಲೆ ಎಸಗಿದ ಅಮಾನುಷ ದೌರ್ಜನ್ಯವನ್ನು ದೆಹಲಿ ಪೊಲೀಸರು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಪ್ರತಿಭಟನಾಕಾರರು ಬ್ಯಾರಿಕೇಡ್ ಒಡೆಯಲು ಯತ್ನಿಸಿದರು, ಕಲ್ಲು ತೂರಾಟ ನಡೆಸಿದರು ಹಾಗೂ ಪೊಲೀಸರ ಮೇಲೂ ಹಲ್ಲೆ ನಡೆಸಿದರು. ಆದ್ದರಿಂದ, ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ವಾಗ್ದಾಳಿ
ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, “ಬ್ರಿಟಿಷರ ಆಡಳಿತವೂ ಇಷ್ಟೊಂದು ಕ್ರೂರ ಲಾಠಿಚಾರ್ಜ್ ನಡೆಸಿರಲಿಲ್ಲ” ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ನೆರವಾಗಲು ವಿಶೇಷ ಸಹಾಯವಾಣಿ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಸಮಾಜವಾದಿ ಪಕ್ಷ, ಎಡಪಕ್ಷಗಳು ಸೇರಿದಂತೆ ಹಲವು ವಿರೋಧ ಪಕ್ಷಗಳು ವಿದ್ಯಾರ್ಥಿಗಳ ಪರವಾಗಿ ಹೇಳಿಕೆಗಳನ್ನು ನೀಡಿವೆ. ಪೊಲೀಸ್ ಕ್ರಮದ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು, ಗಾಯಾಳುಗಳಿಗೆ ಪರಿಹಾರ ನೀಡಬೇಕು ಮತ್ತು ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
ಮುಂದೇನು?
ದಿನದ ಕೊನೆಯಲ್ಲಿ ಸಿಜೆಪಿ ನಾಯಕತ್ವವು ಘೋಷಿಸಿರುವಂತೆ; ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮ ಹೋರಾಟವನ್ನು ಕುಗ್ಗಿಸಿಲ್ಲ; ಬದಲಾಗಿ ಇನ್ನಷ್ಟು ಜನರನ್ನು ಒಗ್ಗೂಡಿಸಿದೆ. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆದರೂ, ಸ್ಪಷ್ಟ ನಿರ್ಧಾರ ಬರುವವರೆಗೆ ಧರಣಿ ಮತ್ತು ಚಳವಳಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.




