ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ವಿರುದ್ಧ ದಾಖಲಾಗಿರುವ ಅಕ್ರಮ ಪ್ರವೇಶ ಪ್ರಕರಣವನ್ನು ದೆಹಲಿ ಪೊಲೀಸರು ಸೋಮವಾರ ಕ್ರೈಂ ಬ್ರಾಂಚ್‌ನ ಇಂಟರ್ ಸ್ಟೇಟ್ ಸೆಲ್ ಘಟಕಕ್ಕೆ ಹಸ್ತಾಂತರಿಸಿದ್ದಾರೆ.
ನ್ಯಾಯಾಲಯವು ಇಬ್ಬರೂ ಸಿಜೆಪಿ ನಾಯಕರ ನ್ಯಾಯಾಂಗ ಬಂಧನವನ್ನು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಿದ ಕೆಲವೇ ಗಂಟೆಗಳಲ್ಲಿ ದೆಹಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ದೆಹಲಿಯ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸಲು ಅನುಮತಿ ಇಲ್ಲದ ನಿರ್ದಿಷ್ಟ ಪ್ರದೇಶಕ್ಕೆ ಖಾಸಗಿ ಆಸ್ತಿ ಮೂಲಕ ಅಕ್ರಮವಾಗಿ ಪ್ರವೇಶಿಸಿ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಈ ನಾಯಕರ ಮೇಲೆ ದೆಹಲಿ ಪೊಲೀಸರು ಮಾಡಿದ್ದಾರೆ.
ಇದನ್ನೂ ಓದಿ: ಸೌರವ್ ದಾಸ್, ಅಶುತೋಷ್ ರಾಂಕಾ ಬಿಡುಗಡೆಯಲ್ಲಿ ವಿಳಂಬ; 4 ಶ್ಯೂರಿಟಿ ಬಾಂಡ್ ತಿರಸ್ಕಾರ: ಸಿಜೆಪಿ ಆರೋಪ
ಮಂದಿರ ಮಾರ್ಗ ಪೊಲೀಸ್ ಠಾಣೆಯ ವಿಶೇಷ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಬಳಿಕ ನಾಯಕರ ಬಂಧನದ ಅವಧಿಯನ್ನು ವಿಸ್ತರಿಸಲಾಗಿತ್ತು.
ಘಟನೆಯ ಸೂಕ್ಷ್ಮತೆ ಮತ್ತು ಹೆಚ್ಚಿನ ತನಿಖೆಯ ಅಗತ್ಯವನ್ನು ಪರಿಗಣಿಸಿ, ಪ್ರಕರಣದ ಮುಂದಿನ ತನಿಖೆಯನ್ನು ಕ್ರೈಂ ಬ್ರಾಂಚ್ ವಿಭಾಗಕ್ಕೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಈ ಬಂಧನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ದೆಹಲಿ ಪೊಲೀಸರನ್ನು ಬಳಸಿ ಪ್ರತಿಭಟನೆಗಳನ್ನು ಹತ್ತಿಕ್ಕುವ ಯತ್ನ ಮಾಡುತ್ತಿದೆ ಎಂದು ಸಿಜೆಪಿ, ಇಂಡಿಯಾ ಒಕ್ಕೂಟದ ನಾಯಕರು ಆರೋಪಿಸಿದ್ದಾರೆ.





