ನಕಲಿ ಔಷಧಿ ತಯಾರಿಕೆ ಮತ್ತು ಸರಬರಾಜು ದಂಧೆಯ ಮುಖ್ಯ ಸೂತ್ರಧಾರ (ಕಿಂಗ್ ಪಿನ್) ಪ್ರಶಾಂತ್ ರಂಜನ್ ಬಾಬುಗೆ ನ್ಯಾಯಾಲಯವು ಆತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಆಗಸ್ಟ್‌ನಲ್ಲಿ ಬಿಡದಿಯ ಫಾರ್ಮ್‌ಹೌಸ್ ಮೇಲೆ ದಾಳಿ ನಡೆದು 5 ಕೋಟಿ ರೂ. ಮೌಲ್ಯದ ನಕಲಿ ಔಷಧಿ ಪತ್ತೆಯಾದ ನಂತರ ನಕಲಿ ಔಷಧಿ ದಂಧೆಯ ಕಿಂಗ್ ಪಿನ್ ಪ್ರಶಾಂತ್ ರಂಜನ್ ಬಾಬು ಅಜರ್ಬೈಜಾನ್ ಹಾಗೂ ದುಬೈನಲ್ಲಿ ತಲೆಮರೆಸಿಕೊಂಡಿದ್ದನು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ನಕಲಿ ಔಷಧಿ ಹಾವಳಿ; ದಾಳಿಯಷ್ಟೇ ಸಾಲದು, ಸರ್ಕಾರ ಕಠಿಣ ಕ್ರಮ ಜರುಗಿಸಲಿ
ಈತನ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಜಾರಿಗೊಳಿಸಿ, ಸೆಪ್ಟೆಂಬರ್ 28ರಂದು ಶಾರ್ಜಾದಿಂದ ಬೆಂಗಳೂರಿಗೆ ಬರುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ನ್ಯಾಯಾಲಯವು ಈತನನ್ನು ಅಕ್ಟೋಬರ್ 7ರವರೆಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ಒಪ್ಪಿಸಿ ಆದೇಶಿಸಿತ್ತು.
ಇದೀಗ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಪ್ರಶಾಂತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕ್ಯಾನ್ಸರ್ ಸೇರಿದಂತೆ ಜೀವ ರಕ್ಷಕ ನಕಲಿ ಔಷಧಿಗಳಿಗೆ ಅಸಲಿ ಕಂಪನಿಗಳ ಲೇಬಲ್ ಅಂಟಿಸಿ, ಅವುಗಳನ್ನು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪ್ರಮುಖ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತಿದ್ದ ಆರೋಪ ಈತನ ಮೇಲಿದೆ.




