2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಿತೂರಿ ಆರೋಪದ ಮೇಲೆ ನನ್ನ ವಿರುದ್ಧ ದೆಹಲಿ ಪೊಲೀಸರು ಯುಎಪಿಎ ಪ್ರಕರಣ ದಾಖಲಿಸಿದ್ದಾರೆ. ಆದರೆ, ಅವರು ಯಾವ ಆಧಾರದಲ್ಲಿ ನನ್ನನ್ನು ಆರೋಪಿಯನ್ನಾಗಿ ಮಾಡಿದ್ದಾರೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಪ್ರಶ್ನಿಸಿದ್ದಾರೆ.
ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ಖಾಲಿದ್‌ರನ್ನು ಬಂಧಿಸಲಾಗಿದ್ದು, ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅವರು ಈ ಹಿಂದೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಜಾಮೀನು ನಿರಾಕರಿಸಲಾಗಿತ್ತು. ಇತ್ತೀಚೆಗೆ ಅವರು ಮತ್ತೊಮ್ಮೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಶನಿವಾರ ವಿಚಾರಣೆ ನಡೆಸಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವದಿದ್ದ ಪೀಠದ ಎದುರು ಖಾಲಿದ್ ಪರ ವಕೀಲ ತ್ರಿದೀಪ್ ಪೈಸ್ ವಾದ ಮಂಡಿಸಿದ್ದಾರೆ.
“2020ರ ದೆಹಲಿ ಗಲಭೆಗೆ ಸಂಬಂಧಿಸಿದ ಹಿಂಸಾಚಾರ ಅಥವಾ ನಿಧಿಸಂಗ್ರಹ ಚಟುವಟಿಕೆಗಳಲ್ಲಿ ಉಮರ್ ಖಾಲಿದ್ ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ನೇರವಾದ ಸಾಕ್ಷ್ಯಗಳಿಲ್ಲ. ಆದರೂ, ವಿಚಾರಣಾಧೀನ ಖೈದಿಯಾಗಿ ಸುದೀರ್ಘ ಕಾಲ ಸೆರೆವಾಸ ಅನುಭವಿಸುತ್ತಿದ್ದಾರೆ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು” ಎಂದು ತ್ರಿದೀಪ್ ವಾದಿಸಿದ್ದಾರೆ.
“ಇದೇ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಈಗಾಗಲೇ ಜಾಮೀನು ನೀಡಲಾಗಿದೆ. ಖಾಲಿದ್ ಕೂಡ ಸಮಾನತೆಯನ್ನು ಬಯಸಿದ್ದಾರೆ” ಎಂದು ತ್ರಿದೀಪ್ ಗಮನ ಸೆಳೆದಿದ್ದಾರೆ.
ಆದರೆ, ಪ್ರತಿವಾದ ಮಂಡಿಸಿದ ದೆಹಲಿ ಪೊಲೀಸರು, ಪ್ರತಿಕ್ರಿಯೆ ನೀಡಲು ಹೆಚ್ಚುವರಿ ಸಮಯವನ್ನು ಕೋರಿದ್ದು, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಹೈಕೋರ್ಟ್ ಮುಂದೂಡಿದೆ.
ಈ ವರದಿ ಓದಿದ್ದೀರಾ?: ವಿಚಾರಣೆಯೂ ಇಲ್ಲ – ಜಾಮೀನೂ ಇಲ್ಲ: ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ ಉಮರ್ ಖಾಲಿದ್
ಸಿಎಎ, ಎನ್‌ಆರ್‌ಸಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ, 2020ರಲ್ಲಿ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು. ಹಿಂಸಾಚಾರದಲ್ಲಿ 53 ಜನರು ಸಾವನ್ನಪ್ಪಿ, 700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಆ ಗಲಭೆಯಲ್ಲಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಮತ್ತು ಇತರರ ಪಿತೂರಿ ಇದೆ ಎಂದು ಆರೋಪಿಸಿ ಐವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಖಾಲಿದ್ ಅವರನ್ನು 2020ರ ಸೆಪ್ಟಂಬರ್‌ನಲ್ಲಿ ಬಂಧಿಸಲಾಗಿತ್ತು. 2022ರ ಅಕ್ಟೋಬರ್‌ನಲ್ಲಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಆದಾದ ಬಳಿಕ, ಖಾಲಿದ್ ಎರಡನೇ ಬಾರಿಗೆ ಪ್ರಕರಣದಲ್ಲಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.