ದೆಹಲಿ SIR ʼಮ್ಯಾಜಿಕ್‌ʼ | ಒಂದೇ ಬೂತ್‌ನ ಶೇ.99.8 ಮತದಾರರು ಡಿಲೀಟ್;‌ ಉಳಿದದ್ದು ಒಬ್ಬರೇ!

Date:

ದೆಹಲಿಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಸದ್ಯ ಇನ್ನೊಂದು ಮ್ಯಾಜಿಕ್‌ ಮಾಡಿ ತೀವ್ರ ಗಮನ ಸೆಳೆದಿದೆ. ಯಮುನಾ ನದಿ ಪ್ರವಾಹ ಪ್ರದೇಶದಲ್ಲಿರುವ ಬೇಲಾ ಎಸ್ಟೇಟ್‌ನ ಒಂದು ಮತಗಟ್ಟೆಯಲ್ಲಿ ನೋಂದಣಿಯಾಗಿದ್ದ 729 ಮತದಾರರ ಪೈಕಿ 728 ಮಂದಿಯ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ಹೊರಬಿದ್ದಿವೆ. ಅಂದರೆ, ಒಂದೇ ಮತಗಟ್ಟೆಯಲ್ಲಿ ಶೇ.99.8ರಷ್ಟು ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ.

- Advertisement -

ಈ ಮತಗಟ್ಟೆ ಚಾಂದಿನಿ ಚೌಕ್‌ ವಿಧಾನಸಭಾ ಕ್ಷೇತ್ರದ ಭಾಗ 38ಕ್ಕೆ ಸೇರಿದ್ದು, ಬೇಲಾ ಎಸ್ಟೇಟ್‌ನ ಜುಗ್ಗಿ-ಜೋಪಡಿ ಪ್ರದೇಶವನ್ನು ಒಳಗೊಂಡಿದೆ. SIRಗೂ ಮುನ್ನ ಇಲ್ಲಿ 729 ಮಂದಿ ಮತದಾರರಾಗಿ ನೋಂದಣಿಯಾಗಿದ್ದರು. ಆದರೆ ಆಗಸ್ಟ್‌ನಲ್ಲಿ ಪ್ರಕಟವಾದ ಕರಡು ಪಟ್ಟಿಯಲ್ಲಿ ಕೇವಲ ಒಬ್ಬರ ಹೆಸರು ಮಾತ್ರ ಉಳಿದಿದೆ. ಇಡೀ ಚಾಂದಿನಿ ಚೌಕ್‌ ಕ್ಷೇತ್ರದಲ್ಲೂ ಸುಮಾರು ಶೇ.38ರಷ್ಟು ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

ಬೇಲಾ ಎಸ್ಟೇಟ್‌ನಲ್ಲಿ ನಡೆದ ಹೆಸರುಗಳ ಅಳಿಸುವಿಕೆಯ ಬಗ್ಗೆ ಕೇಳಿಬರುತ್ತಿರುವ ಕಾರಣಗಳೂ ಈಗ ಚರ್ಚೆಗೆ ಕಾರಣವಾಗಿವೆ. ಸಾಮಾನ್ಯವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅಥವಾ ಅಳಿಸುವ ಸಂದರ್ಭದಲ್ಲಿ ವ್ಯಕ್ತಿಯ ವಯಸ್ಸು, ಭಾರತೀಯ ಪೌರತ್ವ, ಆ ಕ್ಷೇತ್ರದಲ್ಲಿ ವಾಸವಿರುವುದು ಅಥವಾ ಕಾನೂನಿನಡಿ ಮತದಾನಕ್ಕೆ ಅನರ್ಹರಾಗಿರುವುದನ್ನು ಪರಿಗಣಿಸಲಾಗುತ್ತದೆ. ಆದರೆ ಬೇಲಾ ಎಸ್ಟೇಟ್‌ನ ಪ್ರಕರಣದಲ್ಲಿ ಅಲ್ಲಿನ ನಿವಾಸಿಗಳು ವಾಸಿಸುತ್ತಿರುವ ಪ್ರದೇಶವೇ ‘ಅನಧಿಕೃತ’ ಎಂಬ ಕಾರಣಕ್ಕೆ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹಾಯಕ ಮತದಾರರ ನೋಂದಣಾಧಿಕಾರಿ (AERO) ಸುನಿಲ್‌ ಕುಮಾರ್‌, ಬೇಲಾ ಎಸ್ಟೇಟ್‌ನ ನಿವಾಸಿಗಳ ಬಳಿ ವಿದ್ಯುತ್‌ ಮತ್ತು ನೀರಿನ ಬಿಲ್‌ಗಳಿಲ್ಲ. ಪಕ್ಕಾ ಮನೆಗಳೂ ಇಲ್ಲ. ಅವರು ಕೃಷಿ ಭೂಮಿಯಲ್ಲಿ ವಾಸಿಸುತ್ತಿದ್ದು, ಆ ಜಾಗವೇ ಅನಧಿಕೃತವಾಗಿದೆ. ಹೀಗಾಗಿ ಅವರನ್ನು ಅಲ್ಲಿನ ಮಾನ್ಯ ನಿವಾಸಿಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೇ ಕಾರಣಕ್ಕೆ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದಿರುವುದಾಗಿ ನ್ಯೂಸ್‌ ಲಾಂಡ್ರಿ ವರದಿ ಮಾಡಿದೆ.

ಆದರೆ, ನಿವಾಸಿಗಳು ಮತದಾರರಾಗಿ ಅರ್ಹರಲ್ಲ ಎಂದಾದರೆ, SIR ಪ್ರಕ್ರಿಯೆಯಲ್ಲಿ ಅವರಿಗೆ ಗಣತಿ ನಮೂನೆಗಳನ್ನು ವಿತರಿಸಿದ್ದು ಮತ್ತು ಅವುಗಳನ್ನು ವಾಪಸ್‌ ಪಡೆದಿದ್ದು ಏಕೆ ಎಂಬ ಪ್ರಶ್ನೆಗೆ ಸುನಿಲ್‌ ಕುಮಾರ್‌ ಬಳಿ ಸ್ಪಷ್ಟ ಉತ್ತರವಿಲ್ಲ. ಈ ಬಗ್ಗೆ ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ.

ಮತಗಟ್ಟೆ ಮಟ್ಟದ ಅಧಿಕಾರಿ (BLO) ಗರಿಮಾ ಆರ್ಯಾ ಅವರ ಹೇಳಿಕೆಯೂ ಪ್ರಕರಣವನ್ನು ಮತ್ತಷ್ಟು ಗೊಂದಲಗೊಳಿಸಿದೆ. ಬೇಲಾ ಎಸ್ಟೇಟ್‌ನಿಂದ ಯಾವುದೇ ಗಣತಿ ನಮೂನೆಗೆ ತಾನು ಸಹಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಆ ಪ್ರದೇಶದಲ್ಲಿ ಯಾವುದೋ ಸಮಸ್ಯೆ ಕಂಡುಬಂದಿದ್ದರಿಂದ ಅದನ್ನು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಇದೀಗ ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದಿದ್ದಾರೆ.

ಆದರೆ, ಲಭ್ಯ ದಾಖಲೆಗಳು BLO ಅವರ ಹೇಳಿಕೆಗೆ ಹೊಂದಿಕೆಯಾಗುವುದಿಲ್ಲ. BLO ಮತ್ತು ಬೂತ್‌ ಏಜೆಂಟ್‌ ನಡುವೆ ನಡೆದ ಸಭೆಯ ದಾಖಲೆಯಲ್ಲಿ ಬೇಲಾ ಎಸ್ಟೇಟ್‌ನಿಂದ ಕೇವಲ ಒಂದು ಗಣತಿ ನಮೂನೆಯನ್ನು ಮಾತ್ರ ಸಂಗ್ರಹಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ನ್ಯೂಸ್‌ಲಾಂಡ್ರಿ ಪರಿಶೀಲಿಸಿದ ಕನಿಷ್ಠ 20 ಗಣತಿ ನಮೂನೆಗಳಲ್ಲಿ ಗರಿಮಾ ಆರ್ಯಾ ಅವರ ಸಹಿ ಕಂಡುಬಂದಿದೆ.

ಜತೆಗೆ, ತಾನು ಈಗ ಆ ಪ್ರದೇಶದ BLO ಆಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರ್ಯಾ ಹೇಳಿದ್ದಾರೆ. ಆದರೆ AERO ಸುನಿಲ್‌ ಕುಮಾರ್‌ ಅವರು ಆರ್ಯಾ ಅವರೇ ಇನ್ನೂ ಆ ಮತಗಟ್ಟೆಯ BLO ಆಗಿದ್ದಾರೆ ಎಂದು ತಿಳಿಸಿದ್ದಾರೆ.

ನಿವಾಸಿಗಳ ಆರೋಪವೇನು?

ಬೇಲಾ ಎಸ್ಟೇಟ್‌ನ ನಿವಾಸಿ ಕಮಲ್‌ ಲಾಲ್‌ ಅವರು SIR ವೇಳೆ BLOಗೆ ಗಣತಿ ನಮೂನೆಗಳನ್ನು ವಿತರಿಸಲು ಮತ್ತು ಸಂಗ್ರಹಿಸಲು ಸಹಾಯ ಮಾಡಿದ್ದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ನೋಂದಣಾಧಿಕಾರಿ (ERO) ಮನೋಜ್‌ ಕುಮಾರ್‌ ಅವರು ಪ್ರದೇಶಕ್ಕೆ ಭೇಟಿ ನೀಡಿದ್ದಾಗ, ಇಲ್ಲಿರುವವರಿಗೆ ಮತದಾರರಾಗಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂಬುದು ಅವರ ಆರೋಪ.

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮನೋಜ್‌ ಕುಮಾರ್‌, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರು ಮತ್ತೆ ಮತದಾರರಾಗಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ. ಆದರೆ, ಬೇಲಾ ಎಸ್ಟೇಟ್‌ನ ನಿವಾಸಿಗಳಿಗೆ ಮತದಾರರಾಗಿ ನೋಂದಣಿಯಾಗುವ ಅವಕಾಶವೇ ಇಲ್ಲ ಎಂದು ತಾವು ಹೇಳಿರುವುದನ್ನು ಅವರು ಒಪ್ಪಿಕೊಂಡಿಲ್ಲ.

ಕಮಲ್‌ ಲಾಲ್‌ ಅವರ ಪ್ರಕಾರ, BLO ಮತ್ತು ERO ಅವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಮನವಿ ಮಾಡಿದರೂ, ತಮ್ಮ ಕುಟುಂಬದ ಸದಸ್ಯರ ಹೆಸರುಗಳನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ದಾಖಲಿಸಲಾಗಿದೆ.

729ರಲ್ಲಿ ಒಬ್ಬರ ಹೆಸರು ಮಾತ್ರ ಉಳಿದಿದ್ದೇಕೆ?

ಬೇಲಾ ಎಸ್ಟೇಟ್‌ನ ಮತದಾರರ ಪಟ್ಟಿಯಲ್ಲಿ ಉಳಿದಿರುವ ಏಕೈಕ ಹೆಸರು ಮಹಂತ್‌ ಕಂಚನ್‌ ಗಿರಿ ಅವರದ್ದು. ಆದರೆ ತಮ್ಮೊಬ್ಬರ ಹೆಸರು ಮಾತ್ರ ಪಟ್ಟಿಯಲ್ಲಿ ಉಳಿದಿರುವುದಕ್ಕೆ ಕಾರಣವೇನು ಎಂಬುದು ತಮಗೂ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಗಣತಿ ನಮೂನೆಯಲ್ಲಿ ಕೇಳಲಾಗಿದ್ದ ಮಾಹಿತಿಯನ್ನು ಭರ್ತಿ ಮಾಡಿ BLOಗೆ ಸಲ್ಲಿಸಿದ್ದೆ. ಅದನ್ನು ಹೊರತುಪಡಿಸಿ, ತಮ್ಮ ಹೆಸರು ಮಾತ್ರ ಏಕೆ ಉಳಿದಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕಂಚನ್‌ ಗಿರಿ ತಿಳಿಸಿದ್ದಾರೆ. ಅವರು ಆ ಪ್ರದೇಶದಲ್ಲಿ ಒಬ್ಬರೇ ವಾಸಿಸುತ್ತಿದ್ದಾರೆ.

ಇದೇ ಪ್ರದೇಶದ 27 ವರ್ಷದ ಕಂಚನ್‌ ಎಂಬ ಯುವತಿಯ ಹೆಸರು ಕೂಡ ಪಟ್ಟಿಯಿಂದ ತೆಗೆದುಹಾಕಲಾಗಿದೆ. ತಾನು ಸಮಯಕ್ಕೆ ಸರಿಯಾಗಿ ಗಣತಿ ನಮೂನೆ ಸಲ್ಲಿಸಿದ್ದರೂ ಹೆಸರು ಉಳಿದಿಲ್ಲ ಎಂದು ಅವರು ಹೇಳಿದ್ದಾರೆ. ಅವರ ತಂದೆ ಪದಮ್‌ ಸಿಂಗ್‌, ತಾಯಿ ಧೋರಾ ದೇವಿ, ಸಹೋದರ ಮತ್ತು ಅತ್ತಿಗೆಯ ಹೆಸರುಗಳನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ದಾಖಲಿಸಲಾಗಿದೆ. ಕಂಚನ್‌ ಅವರ ಹೆಸರನ್ನು ಮಾತ್ರ ‘ಗೈರುಹಾಜರು/ಪತ್ತೆಯಾಗದವರು’ ಎಂದು ನಮೂದಿಸಲಾಗಿದೆ.

ಪ್ರದೇಶವನ್ನು ತೆರವುಗೊಳಿಸುವಂತೆ ಆಗಾಗ್ಗೆ ನೋಟಿಸ್‌ಗಳು ಬರುತ್ತಿದ್ದರೂ, ಮತದಾರರ ಪಟ್ಟಿಯಿಂದ ತಮ್ಮ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಅಥವಾ ನೋಟಿಸ್‌ ನೀಡಲಾಗಿಲ್ಲ ಎಂದು ಅವರು ಹೇಳಿದ್ದಾರೆ.

2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದ 74 ವರ್ಷದ ಶಾರದಾ ದೇವಿ ಅವರ ಹೆಸರನ್ನೂ ಇದೀಗ ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ದಾಖಲಿಸಲಾಗಿದೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿರುವ ಬೆಳವಣಿಗೆಯಿಂದ ಶಾರದಾ ಅವರು ತಮ್ಮನ್ನು ಜುಗ್ಗಿಯಿಂದ ತೆರವುಗೊಳಿಸುವ ಆತಂಕದಲ್ಲಿದ್ದಾರೆ.

ಕನ್ಯಾ ಕುಮಾರ್‌ ಮತ್ತು ಅವರ ಪತಿ ಧನ್ಶು ಅವರ ಹೆಸರುಗಳನ್ನೂ ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ದಾಖಲಿಸಲಾಗಿದೆ. ಮತದಾರರ ಗುರುತಿನ ಚೀಟಿ ಕಳೆದುಕೊಂಡರೆ ವಿವಿಧ ಕೆಲಸಗಳಿಗೆ ತೊಂದರೆಯಾಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬ ನಿವಾಸಿ ಮೊಹಮ್ಮದ್‌ ಅಫ್ತಾಬ್‌ ಅವರ ಕುಟುಂಬದವರ ಹೆಸರೂ ಪಟ್ಟಿಯಿಂದ ಹೊರಬಿದ್ದಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಪಾಸ್‌ಪೋರ್ಟ್‌, ಉದ್ಯೋಗ ಮತ್ತು ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳಂತಹ ವಿಷಯಗಳಲ್ಲೂ ಸಮಸ್ಯೆ ಎದುರಾಗಬಹುದು ಎಂದು ಅವರು ಹೇಳಿದ್ದಾರೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಸತಿ ಮಾಲೀಕತ್ವ ಬೇಕೇ?

ಬೇಲಾ ಎಸ್ಟೇಟ್‌ ಪ್ರಕರಣದಲ್ಲಿ ಪ್ರಮುಖವಾಗಿ ಎದುರಾಗುತ್ತಿರುವ ಪ್ರಶ್ನೆ ಇದೇ. ಚುನಾವಣಾ ಆಯೋಗದ ಮತದಾರರ ಪಟ್ಟಿ ಕುರಿತ ಮಾರ್ಗಸೂಚಿಗಳ ಪ್ರಕಾರ, ದಾಖಲೆಗಳಿಲ್ಲದ ಕಾರಣಕ್ಕೆ ಮಾತ್ರ ನಿರಾಶ್ರಿತರು, ಗುಡಿಸಲು ಅಥವಾ ಪಾದಚಾರಿ ಮಾರ್ಗಗಳಲ್ಲಿ ವಾಸಿಸುವವರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಸಾಧ್ಯವಿಲ್ಲ. ಅವರು ನಿರ್ದಿಷ್ಟ ಪ್ರದೇಶದಲ್ಲಿ ವಾಸ್ತವವಾಗಿ ನೆಲೆಸಿದ್ದರೆ, ಕ್ಷೇತ್ರ ಪರಿಶೀಲನೆಯ ಮೂಲಕ ಅವರ ನಿವಾಸವನ್ನು ದೃಢಪಡಿಸಿ ಮತದಾರರಾಗಿ ನೋಂದಾಯಿಸಬಹುದು.

ಇದಕ್ಕೆ ಸಂಬಂಧಿಸಿದಂತೆ 1950ರ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್‌ 19 ಮತ್ತು 20ರಲ್ಲೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ವಯಸ್ಸು ಮತ್ತು ‘ಸಾಮಾನ್ಯ ನಿವಾಸ’ ಪ್ರಮುಖ ಮಾನದಂಡಗಳಾಗಿವೆ. ವ್ಯಕ್ತಿ ವಾಸಿಸುವ ಜಾಗ ಅವರದೇ ಆಗಿರಬೇಕು, ಪಕ್ಕಾ ಮನೆ ಇರಬೇಕು ಅಥವಾ ವಿದ್ಯುತ್‌-ನೀರಿನ ಬಿಲ್‌ ಇರಬೇಕು ಎಂಬ ಷರತ್ತುಗಳನ್ನು ಈ ನಿಯಮಗಳು ವಿಧಿಸುವುದಿಲ್ಲ.

ಚುನಾವಣಾ ಆಯೋಗದ ಫಾರ್ಮ್‌ 6ರಲ್ಲೂ ಇದೇ ಅಂಶ ಸ್ಪಷ್ಟವಾಗಿದೆ. ಯಾವುದೇ ದಾಖಲೆಗಳಿಲ್ಲದಿದ್ದರೂ ಗುಡಿಸಲು ಅಥವಾ ಪಾದಚಾರಿ ಮಾರ್ಗದಲ್ಲಿ ವಾಸಿಸುವ ಭಾರತೀಯ ನಾಗರಿಕರ ಅರ್ಹತೆಯನ್ನು ಕ್ಷೇತ್ರ ಪರಿಶೀಲನೆಯ ಮೂಲಕ ದೃಢಪಡಿಸಿ ಮತದಾರರ ಪಟ್ಟಿಗೆ ಸೇರಿಸಲು ಅವಕಾಶವಿದೆ.

ಇದನ್ನೂ ಓದಿ: ದೆಹಲಿ SIR ಕರಡು ಪಟ್ಟಿ ಪ್ರಕಟ: 47.7 ಲಕ್ಷ ಮತದಾರರ ಹೆಸರು ಡಿಲೀಟ್

ಪಾರದರ್ಶಕತೆ ಹೋರಾಟಗಾರ್ತಿ ಅಮೃತಾ ಜೋಹ್ರಿ ಕೂಡ ಇದೇ ವಿಚಾರವನ್ನು ಎತ್ತಿದ್ದಾರೆ. ವ್ಯಕ್ತಿಯ ಬಳಿ ವಿದ್ಯುತ್‌ ಅಥವಾ ನೀರಿನ ಸಂಪರ್ಕವಿದೆಯೇ ಎಂಬುದು ಮತದಾರನಾಗುವ ಅರ್ಹತೆಯನ್ನು ನಿರ್ಧರಿಸುವ ಮಾನದಂಡವಾಗಬಾರದು. ವ್ಯಕ್ತಿ ವಾಸಿಸುತ್ತಿರುವ ಜಾಗ ಕಾನೂನುಬದ್ಧವೇ ಅಥವಾ ಅನಧಿಕೃತವೇ ಎಂಬುದನ್ನು ಚುನಾವಣಾ ಆಯೋಗದ ಪರಿಗಣನೆಗೆ ತರಬಾರದು. ಮತದಾನದ ಹಕ್ಕು ಮತ್ತು ವಸತಿ ಹಕ್ಕು ಎರಡು ಪ್ರತ್ಯೇಕ ವಿಚಾರಗಳು ಎಂದು ಅವರು ಹೇಳಿದ್ದಾರೆ.

ಬೇಲಾ ಎಸ್ಟೇಟ್‌ನ ಕರಡು ಮತದಾರರ ಪಟ್ಟಿ ಪ್ರಕಟವಾಗುವುದಕ್ಕೂ ಕೆಲವೇ ವಾರಗಳ ಮೊದಲು ದೆಹಲಿ ಹೈಕೋರ್ಟ್‌ ಕೂಡ ಇದೇ ರೀತಿಯ ವಿಚಾರದಲ್ಲಿ ಮಹತ್ವದ ಅಭಿಪ್ರಾಯ ನೀಡಿತ್ತು. Indu Prakash Singh v. State (NCT of Delhi) ಪ್ರಕರಣದಲ್ಲಿ, ದಾಖಲೆಗಳ ಮೂಲಕ ನಿವಾಸವನ್ನು ಸಾಬೀತುಪಡಿಸಲು ಸಾಧ್ಯವಾಗದ ನಿರಾಶ್ರಿತರು ಹಾಗೂ ತೆರವು ಕಾರ್ಯಾಚರಣೆಯಿಂದ ಸ್ಥಳಾಂತರಗೊಂಡವರನ್ನೂ ಕ್ಷೇತ್ರ ಪರಿಶೀಲನೆಯ ಮೂಲಕ ಮತದಾರರ ಪಟ್ಟಿಗೆ ಸೇರಿಸಲು ಚುನಾವಣಾ ಆಯೋಗದ ನಿಯಮಗಳಲ್ಲೇ ಅವಕಾಶವಿದೆ ಎಂದು ನ್ಯಾಯಾಲಯ ಹೇಳಿತ್ತು.

ಹೀಗಾಗಿ ಬೇಲಾ ಎಸ್ಟೇಟ್‌ನ ನಿವಾಸಿಗಳು ‘ಅನಧಿಕೃತ’ ಜಾಗದಲ್ಲಿ ವಾಸಿಸುತ್ತಿದ್ದಾರೆ ಎಂಬ ಕಾರಣವನ್ನೇ ಆಧರಿಸಿ ಅವರ ಹೆಸರುಗಳನ್ನು ತೆಗೆದುಹಾಕಲಾಗಿದೆಯೇ ಎಂಬುದು ಈಗ ಪ್ರಮುಖ ಪ್ರಶ್ನೆಯಾಗಿದೆ. 729 ಮತದಾರರ ಪೈಕಿ 728 ಮಂದಿಯ ಹೆಸರುಗಳು ಏಕಕಾಲದಲ್ಲಿ ಪಟ್ಟಿಯಿಂದ ಹೊರಬಿದ್ದಿರುವುದಕ್ಕೆ ಚುನಾವಣಾ ಅಧಿಕಾರಿಗಳು ಯಾವ ಮಾನದಂಡವನ್ನು ಬಳಸಿದ್ದಾರೆ ಎಂಬುದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವ ಮುನ್ನ ಸ್ಪಷ್ಟವಾಗಬೇಕಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಕಲಬುರಗಿಯಲ್ಲಿ ಎಸ್ಎಫ್ಐ 17ನೇ ರಾಜ್ಯ ಸಮ್ಮೇಳನ: ಬಸವರಾಜ ಎಸ್

ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸಲು, ಕೋಮು ಸೌಹಾರ್ದತೆಗಾಗಿ,...

ಉದ್ಯೋಗ ಮಾಹಿತಿ: SSLC, ITI ಪಾಸಾದವರಿಗೆ ಅವಕಾಶ; BHELನಲ್ಲಿ 660 ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರ್ಕಾರಿ ವಲಯದ 'ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್' (BHEL) ಸಂಸ್ಥೆ ಬೃಹತ್...

ಬಾಗಲಕೋಟೆ | ಆಶಾ ಕಾರ್ಯಕರ್ತೆಯರಿಗೆ ರೂ.15000 ಮಾಸಿಕ ವೇತನ ನಿಗದಿಪಡಿಸಲು ಆಗ್ರಹ

ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ, ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ...