ದೆಹಲಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ. ಮನೆ-ಮನೆ ಸಮೀಕ್ಷೆಯ ನಂತರ ಒಟ್ಟು 1.45 ಕೋಟಿ ಮತದಾರರ ಪೈಕಿ 47.7 ಲಕ್ಷ ಮಂದಿಯ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ.
ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದ ಮತದಾರರು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಅಗತ್ಯ ದಾಖಲೆಗಳೊಂದಿಗೆ ಫಾರ್ಮ್-6 ಸಲ್ಲಿಸಿ ಸೆಪ್ಟೆಂಬರ್ 30ರೊಳಗೆ ಹಕ್ಕು ಮಂಡಿಸಬಹುದು ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಅಂತಿಮ ಮತದಾರರ ಪಟ್ಟಿಯನ್ನು ನವೆಂಬರ್ 4ರಂದು ಪ್ರಕಟಿಸಲು ನಿಗದಿಪಡಿಸಲಾಗಿದೆ.
ಚುನಾವಣಾ ಆಯೋಗ ಪರಿಷ್ಕರಿಸಿರುವ ವೇಳಾಪಟ್ಟಿಯ ಪ್ರಕಾರ, ಮತದಾರರು ಸಲ್ಲಿಸುವ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸುವ ಪ್ರಕ್ರಿಯೆ ಅಕ್ಟೋಬರ್ 29ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಅಗತ್ಯವಿರುವವರಿಗೆ ನೋಟಿಸ್ ಜಾರಿ ಮಾಡಿ, ಅವುಗಳ ವಿಲೇವಾರಿಯನ್ನೂ ಪೂರ್ಣಗೊಳಿಸಲಾಗುತ್ತದೆ.
ಜೂನ್ 30ರಂದು ಆರಂಭಗೊಂಡಿದ್ದ SIR ಪ್ರಕ್ರಿಯೆ ಆಗಸ್ಟ್ 17ರಂದು ಪೂರ್ಣಗೊಂಡಿತ್ತು. ಮನೆ-ಮನೆಗೆ ತೆರಳಿ ಮತದಾರರ ವಿವರಗಳನ್ನು ಪರಿಶೀಲಿಸಿ, ಚುನಾವಣಾ ಸಿಬ್ಬಂದಿ ಸಂಗ್ರಹಿಸಿದ ಎನ್ಯೂಮರೇಷನ್ ಫಾರ್ಮ್ಗಳನ್ನು ಡಿಜಿಟಲೀಕರಣಗೊಳಿಸಿದ್ದರು.
ದೆಹಲಿ ಒಟ್ಟು 1,45,10,299 ಮತದಾರರ ಪೈಕಿ ಶೇ.67.18ರಷ್ಟು ಮಂದಿಯ ಎನ್ಯೂಮರೇಷನ್ ಫಾರ್ಮ್ಗಳನ್ನು ಮಾತ್ರ ಡಿಜಿಟಲೀಕರಣಗೊಳಿಸಲಾಗಿದೆ. ಅಂದರೆ, ಸುಮಾರು 97.5 ಲಕ್ಷ ಮತದಾರರ ವಿವರಗಳು ಕರಡು ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.
ಉಳಿದ 47.7 ಲಕ್ಷ ಮತದಾರರನ್ನು ‘ASDDO’ ವರ್ಗಕ್ಕೆ ಸೇರಿಸಲಾಗಿದೆ. ಈ ವರ್ಗದಲ್ಲಿ ಮನೆಗೆ ಲಭ್ಯವಾಗದವರು (Absent), ಸ್ಥಳಾಂತರಗೊಂಡವರು (Shifted), ಮೃತಪಟ್ಟವರು (Dead), ಒಂದಕ್ಕಿಂತ ಹೆಚ್ಚು ಬಾರಿ ನೋಂದಾಯಿತರಾಗಿರುವವರು (Duplicate) ಹಾಗೂ ಇತರರು (Others) ಸೇರಿದ್ದಾರೆ. ಈ ಕಾರಣದಿಂದ ಅವರ ಹೆಸರುಗಳನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.
ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಲ್ಲೂ ಎನ್ಯೂಮರೇಷನ್ ಫಾರ್ಮ್ಗಳ ಡಿಜಿಟಲೀಕರಣ ಪ್ರಮಾಣ ಒಂದೇ ರೀತಿಯಾಗಿಲ್ಲ. ರೋಹಿಣಿ ಕ್ಷೇತ್ರದಲ್ಲಿ ಶೇ.83.43ರಷ್ಟು ಫಾರ್ಮ್ಗಳು ಡಿಜಿಟಲೀಕರಣಗೊಂಡಿದ್ದು, ಅತಿ ಹೆಚ್ಚು ಪ್ರಮಾಣ ದಾಖಲಾಗಿದೆ. ತುಘಲಕಾಬಾದ್ನಲ್ಲಿ ಶೇ.52.15ರಷ್ಟು ಫಾರ್ಮ್ಗಳಷ್ಟೇ ಡಿಜಿಟಲೀಕರಣಗೊಂಡಿದ್ದು, 70 ಕ್ಷೇತ್ರಗಳ ಪೈಕಿ ಅತ್ಯಂತ ಕಡಿಮೆ ಪ್ರಮಾಣ ದಾಖಲಾಗಿದೆ.
ಮನೆ-ಮನೆ ಪರಿಶೀಲನೆಯ ಮೂಲಕ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಉದ್ದೇಶದಿಂದ SIR ಕೈಗೊಳ್ಳಲಾಗಿತ್ತು. ಆದರೆ ಸಮೀಕ್ಷೆಯ ವೇಳೆ ಎನ್ಯೂಮರೇಷನ್ ಫಾರ್ಮ್ಗಳು ಸ್ವೀಕರಿಸದ ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಹೊರಗುಳಿದಿವೆ. ಅಂತಹ ಮತದಾರರಿಗೆ ಇದೀಗ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆಯ ಮೂಲಕ ತಮ್ಮ ಹೆಸರುಗಳನ್ನು ಮರುಸೇರ್ಪಡೆಗೊಳಿಸಿಕೊಳ್ಳಲು ಅವಕಾಶ ನೀಡಲಾಗಿದೆ.
ದೆಹಲಿಯಲ್ಲಿ SIR ಬಳಿಕ ಲಕ್ಷಾಂತರ ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಹೊರಗುಳಿದಿರುವ ಬೆನ್ನಲ್ಲೇ, ಇದೇ ಪ್ರಕ್ರಿಯೆ ಕುರಿತು ತೆಲಂಗಾಣದಲ್ಲೂ ಗಂಭೀರ ಆತಂಕ ವ್ಯಕ್ತವಾಗಿದೆ. ದೆಹಲಿಯಲ್ಲಿ 47.7 ಲಕ್ಷ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದ್ದರೆ, ತೆಲಂಗಾಣದಲ್ಲಿ ಪರಿಶೀಲನೆ ಅಗತ್ಯವಿರುವ ಮತದಾರರ ಸಂಖ್ಯೆ 92.86 ಲಕ್ಷದಷ್ಟಿದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತಿಳಿಸಿದ್ದಾರೆ. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಈ ಕುರಿತು ಆಗಸ್ಟ್ 29ರಂದು ಮುಖ್ಯ ಚುನಾವಣಾ ಆಯುಕ್ತಗ್ಯಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ರೇವಂತ್ ರೆಡ್ಡಿ, SIR ನಿರ್ಣಾಯಕ ಹಂತ ತಲುಪಿದ್ದು, ತೆಲಂಗಾಣ ರಾಜ್ಯದ ಒಟ್ಟು ಮತದಾರರ ಪೈಕಿ ಸುಮಾರು ಮೂರನೇ ಒಂದು ಭಾಗದಷ್ಟು ಮಂದಿ ತಮ್ಮ ಅರ್ಹತೆಯನ್ನು ಮತ್ತೊಮ್ಮೆ ಸಾಬೀತುಪಡಿಸಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. ಜೂನ್ 10ರ ವೇಳೆಗೆ ತೆಲಂಗಾಣದ ಮತದಾರರ ಪಟ್ಟಿಯಲ್ಲಿದ್ದ 3.38 ಕೋಟಿ ಮತದಾರರ ಪೈಕಿ 73.39 ಲಕ್ಷ ಹೆಸರುಗಳನ್ನು ಗೈರು, ಸ್ಥಳಾಂತರಗೊಂಡ, ಮೃತಪಟ್ಟ ಮತ್ತು ದ್ವಿರಾವರ್ತಿತ (ASDD) ವರ್ಗಕ್ಕೆ ಸೇರಿಸಲಾಗಿದೆ. 2.65 ಕೋಟಿ ಎನ್ಯೂಮರೇಷನ್ ಫಾರ್ಮ್ಗಳ ಪೈಕಿ 60.50 ಲಕ್ಷದಲ್ಲಿ ಅಸಂಗತತೆ ಕಂಡುಬಂದಿದ್ದು, 32.36 ಲಕ್ಷ ಫಾರ್ಮ್ಗಳಿಗೆ ಹಿಂದಿನ ಮತದಾರರ ಪಟ್ಟಿಯೊಂದಿಗೆ ಲಿಂಕ್ ಇಲ್ಲ ಎಂದು ಗುರುತಿಸಲಾಗಿದೆ. ಒಟ್ಟಾರೆ 92.86 ಲಕ್ಷ ಮತದಾರರಿಗೆ ಪರಿಶೀಲನಾ ನೋಟಿಸ್ ನೀಡಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಂಗಾಳ SIR | ಕರಡು ಮತಪಟ್ಟಿ ಬಿಡುಗಡೆ: ಹಕ್ಕು ಕಳೆದುಕೊಂಡ 58 ಲಕ್ಷ ಮತದಾರರು
ASDD ಪ್ರಕರಣಗಳ ಪೈಕಿ 45.19 ಲಕ್ಷ, ಅಂದರೆ ಶೇ.62ರಷ್ಟು ಮಂದಿಯನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ಗುರುತಿಸಿರುವುದಕ್ಕೂ ರೇವಂತ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲಸ, ಪ್ರಯಾಣದಂತಹ ತಾತ್ಕಾಲಿಕ ಕಾರಣಗಳಿಂದ ಮನೆಯಲ್ಲಿ ಇಲ್ಲದವರನ್ನೂ ಶಾಶ್ವತವಾಗಿ ಸ್ಥಳಾಂತರಗೊಂಡವರೆಂದು ಪರಿಗಣಿಸುವ ಸಾಧ್ಯತೆಯಿದ್ದು, ಇದರಿಂದ ಅರ್ಹ ಮತದಾರರ ಹೆಸರುಗಳು ಅಳಿಕೆಯಾಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಹೈದರಾಬಾದ್, ಮೆಡ್ಚಲ್-ಮಲ್ಕಾಜ್ಗಿರಿ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿ ASDD ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿದ್ದು, ನಗರ ಪ್ರದೇಶಗಳ ಬಾಡಿಗೆದಾರರು ಮತ್ತು ವಲಸೆ ಕಾರ್ಮಿಕರಿಗೆ ನಿವಾಸದ ದಾಖಲೆ ಒದಗಿಸುವುದು ಕಷ್ಟಕರವಾಗಿದೆ ಎಂದಿದ್ದಾರೆ.
ಪ್ರಸ್ತುತ ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ನಿಗದಿಯಾಗಿರುವ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ನಾಲ್ಕು ವಾರ ವಿಸ್ತರಿಸುವಂತೆ ರೇವಂತ್ ರೆಡ್ಡಿ ಮನವಿ ಮಾಡಿದ್ದಾರೆ. ಜತೆಗೆ ಗ್ರಾಮಸಭೆ, ವಾರ್ಡ್ ಸಮಿತಿ ಸಭೆಗಳಲ್ಲಿ ಕರಡು ಪಟ್ಟಿ ಓದಿ ತಿಳಿಸುವುದು, ಮತದಾರರಿಗೆ 3-4 ವಾರಗಳ ಪ್ರತಿಕ್ರಿಯಾ ಅವಧಿ ನೀಡುವುದು, ಬೂತ್ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸುವುದು, ಹೆಚ್ಚುವರಿ ಮತದಾರರ ನೋಂದಣಿ ಅಧಿಕಾರಿಗಳನ್ನು ನೇಮಿಸುವುದು ಹಾಗೂ ನಗರ ಪ್ರದೇಶಗಳಲ್ಲಿ ವಿಕೇಂದ್ರೀಕೃತ ವಿಚಾರಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಸಲಹೆ ನೀಡಿದ್ದಾರೆ.




