ದೆಹಲಿಯಲ್ಲಿ ಯಮುನಾ ನದಿಯ ನೀರಿನ ಮಟ್ಟ ನಿಧಾನಕ್ಕೆ ಕಡಿಮೆಯಾಗುತ್ತಿದ್ದು, ಮತ್ತೆ ಮಳೆ ಬೀಳದಿದ್ದರೆ ಶೀಘ್ರದಲ್ಲೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ನಗರದ ಹಲವಾರು ಭಾಗಗಳು ಇನ್ನೂ ಜಲಾವೃತವಾಗಿರುವುದರಿಂದ, ಅಂಥ ಪ್ರದೇಶಗಳಲ್ಲಿ ಸಂಚರಿಸದಿರಲು ಮುಖ್ಯಮಂತ್ರಿ ಜನರನ್ನು ವಿನಂತಿಸಿದ್ದಾರೆ. ದೆಹಲಿಯ ಶಾಂತಿವನದಲ್ಲಿ ಮಕ್ಕಳು ಪ್ರವಾಹದಲ್ಲಿ ಆಟವಾಡುತ್ತಿರುವ ವಿಡಿಯೋವನ್ನು ಟ್ಯಾಗ್ ಮಾಡಿರುವ ಅವರು, “ಇದನ್ನು ತಪ್ಪಿಸಲು ನಾನು ಪ್ರತಿಯೊಬ್ಬರನ್ನು ಒತ್ತಾಯಿಸುತ್ತೇನೆ. ಅದು ಮಾರಣಾಂತಿಕವಾಗಬಹುದು” ಎಂದು ಎಚ್ಚರಿಸಿದ್ದಾರೆ. ವಾಜಿರಾಬಾದ್ ಮತ್ತು ಚಂದ್ರವಾಲ್‌ನಲ್ಲಿನ ನೀರು ಸಂಸ್ಕರಣಾ ಘಟಕಗಳು ಭಾನುವಾರದಿಂದ ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ದೆಹಲಿಯ ಕೆಲವು ಭಾಗಗಳಲ್ಲಿ ಜೀವನ ಮತ್ತು ಜೀವನೋಪಾಯದ ಮೇಲೆ ಪ್ರಹಾರ ಮಾಡಿದ ನಂತರ ಯಮುನಾ ಶನಿವಾರ ಬೆಳಗ್ಗೆ ಕೊಂಚ ಮಟ್ಟಿಗೆ ಇಳಿಮುಖ ಕಂಡಿದೆ.
ಇದೇ ವೇಳೆ ದೆಹಲಿಯ ಮೆಟ್ರೋ ರೈಲುಗಳ ವೇಗದ ಕುರಿತು ಹಾಕಿದ್ದ ನಿರ್ಬಂಧಗಳನ್ನೂ ತೆಗೆದುಹಾಕಲಾಗಿದ್ದು, ರೈಲುಗಳು ಎಂದಿನಂತೆ ಸಹಜ ವೇಗದಲ್ಲಿ ಸಂಚರಿಸಲಿವೆ ಎಂದು ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ಪ್ರಕಟಣೆ ತಿಳಿಸಿದೆ.
ಸುಗ್ರೀವಾಜ್ಞೆ ವಿನಾಶಕಾರಿ ಎನ್ನುವುದು ಸಾಬೀತಾಯಿತು ಎಂದ ಸಚಿವೆ
ಇನ್ನೊಂದೆಡೆ ಪ್ರವಾಹ ಸ್ಥಿತಿಗೆ ಡಿಸಿ ಸ್ಪಂದಿಸುತ್ತಿಲ್ಲ ಎಂದು ಮುಖ್ಯ ಕಾರ್ಯದರ್ಶಿ ನರೇಶ್‌ಕುಮಾರ್ ಅವರಿಗೆ ದೆಹಲಿ ಲೋಕೋಪಯೋಗಿ ಸಚಿವೆ ಅತಿಶಿ ಪತ್ರ ಬರೆದಿದ್ದಾರೆ. ಪರಿಹಾರ ಶಿಬಿರಗಳಲ್ಲಿ ನೀರು, ವಿದ್ಯುತ್, ಶೌಚಾಲಯದಂಥ ಮೂಲ ಸೌಕರ್ಯಗಳ ಕೊರತೆಯಿದೆ. ಈ ಕುರಿತು ಮಾತನಾಡಲು ತಾನು ವಿಭಾಗೀಯ ಆಯುಕ್ತರನ್ನು ಸಂಪರ್ಕಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ: ಏಕರೂಪ ನಾಗರಿಕ ಸಂಹಿತೆ; ಭಾರತದ ಬಹುತ್ವಕ್ಕೆ ಮಾರಕ
ಇದೇ ಸಂದರ್ಭದಲ್ಲಿ ದೆಹಲಿಯ ಸೇವಾ ವಿಷಯಗಳ ಆಡಳಿತಾತ್ಮಕ ನಿಯಂತ್ರಣ ಸಂಬಂಧ ಕೇಂದ್ರ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ತಂದಿದ್ದನ್ನು ನೆನಪಿಸಿರುವ ಅವರು, ‘ಸುಗ್ರೀವಾಜ್ಞೆಯು ವಿನಾಶಕಾರಿ ಎಂಬುದು ಪ್ರವಾಹ ಪರಿಹಾರ ಸಂದರ್ಭದಲ್ಲಿ ಸಾಬೀತಾಗಿದೆ’ ಎಂದಿದ್ದಾರೆ.