ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲು, ನೀರಿನ ನಂತರ ವಿದ್ಯುತ್ ಸಮಸ್ಯೆ ಎದುರಾಗಿದೆ. ಪಟ್ಟಣದ ಹಲವು ನಗರಗಳಲ್ಲಿ ಇಂದು ಮಧ್ಯಾಹ್ನದಿಂದ ವಿದ್ಯುತ್ ಸ್ಥಗಿತಗೊಳಿಸಲಾಗಿದೆ.
ಉತ್ತರ ಪ್ರದೇಶದ ಮಂಡೋಲದ ಪವರ್ ಗ್ರಿಡ್‌ನಲ್ಲಿ ತಾಂತ್ರಿಕ ಸಮಸ್ಯೆಯುಂಟಾಗಿ ದೆಹಲಿಯಲ್ಲಿ ವಿದ್ಯುತ್ ಕೊರತೆಯುಂಟಾಗಿದೆ. ದೆಹಲಿಗೆ 1500 ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಮಂಡೋಲಾದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ವಿದ್ಯುತ್ ಸಮಸ್ಯೆಯುಂಟಾಗಿದೆ ಎಂದು ದೆಹಲಿ ಇಂಧನ ಸಚಿವೆ ಅತೀಶಿ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ ದೆಹಲಿಯಲ್ಲಿ ತಾಪಮಾನ 42 ಡಿಗ್ರಿ ಸೆಲ್ಷಿಯಸ್ ಇತ್ತು ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
“ಇಂದು ಮಧ್ಯಾಹ್ನ 2.11 ಗಂಟೆಯಿಂದ ದೆಹಲಿಯ ಬಹು ಭಾಗಗಳಲ್ಲಿ ವಿದ್ಯುತ್ ಸಮಸ್ಯೆಯುಂಟಾಗಿದೆ. ದೆಹಲಿಗೆ 1500 ಮೆಗಾವ್ಯಾಟ್ ವಿದ್ಯುತ್ ಪೂರೈಸುವ ಉತ್ತರ ಪ್ರದೇಶದ ಮಂಡೋಲಾದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಮ್ಮ ಇತರ ವಿದ್ಯುತ್ ಮೂಲಗಳಲ್ಲಿ ಸಮಸ್ಯೆಯುಂಟಾಗಿದೆ” ಎಂದು ಅತೀಶಿ ತಿಳಿಸಿದ್ದಾರೆ.
“ಕೇಂದ್ರ ಸರ್ಕಾರದಿಂದ ದೇಶದ ವಿದ್ಯುತ್ ಟ್ರಾನ್ಸ್‌ಮಿಷನ್ ನಡೆಯುವ ಹಿನ್ನೆಲೆಯಲ್ಲಿ ನಾನು ನೂತನ ವಿದ್ಯುತ್ ಸಚಿವರ ಪೂರ್ವಾನುಮತಿ ಕೇಳಿದ್ದೇನೆ. ದೇಶದಲ್ಲಿರುವ ಪವರ್ ಗ್ರಿಡ್‌ನಲ್ಲಿ ವೈಫಲ್ಯ ಉಂಟಾಗಿರುವುದು ಕಳವಳಕ್ಕೆ ಕಾರಣವಾಗಿದೆ. ದೆಹಲಿಗೆ 8 ಸಾವಿರ ಮೆಗಾವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದ್ದರೂ ವಿದ್ಯುತ್ ಸಮಸ್ಯೆಯುಂಟಾಗಿದೆ. ರಾಷ್ಟ್ರೀಯ ಮೂಲಸೌಕರ್ಯದ ವೈಫಲ್ಯದಿಂದಾಗಿ ವಿದ್ಯುತ್ ಸ್ಥಗಿತಗೊಂಡಿದೆ” ಎಂದು ಸಚಿವರು ತಿಳಿಸಿದ್ದಾರೆ.
