ನಟ ದರ್ಶನ್ ಬಂಧನ | ಸಾಮಾಜಿಕ ಜಾಲತಾಣ, ನಾಗರಿಕ ಸಮಾಜ ಮತ್ತು ಕಾನೂನು ವೈಫಲ್ಯ

Date:

ಸದ್ಯ ರಾಜ್ಯದಲ್ಲಿ ನಟ ದರ್ಶನ್ ಅವರ ಬಂಧನ ಸುದ್ದಿಯಲ್ಲಿದೆ. ತಮ್ಮ ಆಪ್ತೆ ಪವಿತ್ರ ಗೌಡ ಅವರಿಗೆ ರೇಣುಕಾಸ್ವಾಮಿ ಎಂಬಾತ ಕೀಳುಮಟ್ಟದ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿಸಲಾಗಿದೆ ಎಂಬ ಆರೋಪ ದರ್ಶನ್ ಮೇಲಿದೆ.

ಕೊಲೆ ಪ್ರಕರಣ ಎಲ್ಲೆಡೆ ಚರ್ಚೆಯಾಗುತ್ತಿದೆ. ಕೊಲೆಯ ಸುತ್ತಲಿನ ಚರ್ಚೆ ಬರೀ ಪ್ರಕರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು, ಸಾಮಾಜಿಕ ಜಾಲತಾಣ ವ್ಯಕ್ತಿಯ ಜೀವಕ್ಕೆ, ಮಹಿಳೆಯರ ಘನತೆಗೆ ಹಾಗೂ ಚಿತ್ರರಂಗದ ಮುಂದಿನ ಭವಿಷ್ಯಕ್ಕೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಬಗೆಗಿನ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಸದ್ಯ, ಸಾಮಾಜಿಕ ಜಾಲತಾಣವನ್ನು ಜನರು ಅವ್ಯಾಹತವಾಗಿ ಬಳಕೆ ಮಾಡುತ್ತಿದ್ದಾರೆ. ಸರಿ-ತಪ್ಪುಗಳ ಎಲ್ಲೆಗಳನ್ನು ಮೀರಿದ್ದಾರೆ. ಖಾಸಗಿ-ಸಾರ್ವಜನಿಕ ವಿಚಾರವನ್ನೂ ಎಳೆದು ತರುತ್ತಿದ್ದಾರೆ. ಅಷ್ಟೇ ಅಲ್ಲ, ತಮಗೆ ಸಂಬಂಧಪಡದ ಮತ್ತೊಬ್ಬರ ಖಾಸಗಿ ಜೀವನವನ್ನು ಎಳೆದು ತಂದು ರಾಡಿ ಎಬ್ಬಿಸುತ್ತಿದ್ದಾರೆ. ವಿಷಾದಕರ ಸಂಗತಿ ಏನೆಂದರೆ, ಇದಕ್ಕೆ ಕಡಿವಾಣವೇ ಇಲ್ಲದಿರುವುದು. ಸರ್ಕಾರವಾಗಲೀ, ಪೊಲೀಸ್ ಇಲಾಖೆಯಾಗಲೀ ‘ಸೋಷಿಯಲ್ ಮೀಡಿಯಾ’ ದುರ್ಬಳಕೆ ವಿಚಾರದಲ್ಲಿ ತುರ್ತು ಕ್ರಮ ಕೈಗೊಳ್ಳದೇ ಕೈ ಚೆಲ್ಲಿ ಕುಳಿತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸದ್ಯ ರೇಣುಕಾಸ್ವಾಮಿ ಪ್ರಕರಣವನ್ನು ಗಮನಿಸುವುದಾದರೆ, ಮೊದಲಿಗೆ ರೇಣುಕಾಸ್ವಾಮಿ ನಟ ದರ್ಶನ್ ಅಭಿಮಾನಿ. ದರ್ಶನ್ ಏಕಪತ್ನಿ ವೃತಸ್ಥನಾಗಿರಬೇಕೆಂದು ಬಯಸುವವನು. ಆ ಕಾರಣಕ್ಕಾಗಿ ದರ್ಶನ್ ಪ್ರೇಯಸಿ ಪವಿತ್ರ ಗೌಡರ ವಿರುದ್ಧ ವಿನಾಕಾರಣ ದ್ವೇಷ ಬೆಳೆಸಿಕೊಂಡವನು. ಆ ದ್ವೇಷವನ್ನು ಅದುಮಿಟ್ಟುಕೊಳ್ಳಲಾಗದೆ, ತನಗೆ ಉಚಿತವಾಗಿ ದಕ್ಕಿದ ಸಾಮಾಜಿಕ ಜಾಲತಾಣ ಎಂಬ ವೇದಿಕೆಯ ಮೂಲಕ, ಪವಿತ್ರ ಗೌಡರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ. ಅದನ್ನು ಪವಿತ್ರ ಗೌಡ ತನ್ನ ಪ್ರಿಯಕರ ದರ್ಶನ್ ಗೆ ತಿಳಿಸಿದ್ದಾರೆ. ದರ್ಶನ್ ಅದನ್ನು ತನ್ನ ಸಹಚರರೊಂದಿಗೆ ಹಂಚಿಕೊಂಡಿದ್ದಾರೆ. ಅವರು ರೇಣುಕಾಸ್ವಾಮಿಯನ್ನು ಪತ್ತೆಹಚ್ಚಿ, ದರ್ಶನ್ ಮುಂದೆ ತಂದು ನಿಲ್ಲಿಸಿದ್ದಾರೆ. ಮುಂದಿನದು ಏನು ಎನ್ನುವುದು, ಈಗ ಎಲ್ಲರಿಗೂ ಗೊತ್ತಿರುವ ವಿಚಾರ.

ಕೊಲೆ ಆರೋಪ ಹೊತ್ತಿರುವ ದರ್ಶನ್- ಒಬ್ಬ ನಟ, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ವ್ಯಕ್ತಿ. ದರ್ಶನ್ ಈ ಕೊಲೆ ಕುರಿತು ಏನು ಹೇಳುತ್ತಾರೆನ್ನುವುದು ಬೇರೆ ವಿಚಾರ. ಆದರೆ ಅವರ ಅಭಿಮಾನಿಗಳು, ಅದೇ ಸಾಮಾಜಿಕ ಜಾಲತಾಣಗಳ ಮೂಲಕ, ‘ಕೊಲೆಯಾದ ಸಂತ್ರಸ್ತ ತಪ್ಪು ಮಾಡಿದ್ದು, ಆತನಿಗೆ ಶಿಕ್ಷೆ ಕೊಟ್ಟಿದ್ದಾರೆ’ ಎಂದು ದರ್ಶನ್ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳು ಎತ್ತ ಸಾಗುತ್ತಿದ್ದಾರೆ ಎಂಬುದಕ್ಕೆ ಸೂಚಕವಾಗಿದೆ. ಇಂತಹ ಸಮರ್ಥತೆಗಳು ಸಮಾಜದ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ದಿಗ್ಭ್ರಮೆ ಹುಟ್ಟಿಸುತ್ತಿದೆ.

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಭಾಗಿಯಾಗಿದ್ದರೆ, ತಪ್ಪು ಮಾಡಿದ್ದರೆ, ಯಾವುದೇ ಮುಲಾಜಿಗೆ ಒಳಗಾಗದೆ ಕಾನೂನಿನ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಸುಪ್ರಿಂಕೋರ್ಟ್‌ನ ನಿರ್ಗಮಿತ ನ್ಯಾಯಾಧೀಶ ದೀಪಕ್ ಗುಪ್ತಾ, ‘ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗಳು ಶ್ರೀಮಂತರು ಹಾಗೂ ಪ್ರಭಾವಿಗಳ ಪರವಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದ್ದರು. ಅಂತಹ ದುರ್ಗತಿ ಈ ಪ್ರಕರಣಕ್ಕೆ ಬರಬಾರದು. ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು.

ಕೀಳುಮಟ್ಟದ ವೇದಿಕೆಯಾದ ಸಾಮಾಜಿಕ ಜಾಲತಾಣ

ಸಾಮಾಜಿಕ ಜಾಲತಾಣ ವೇದಿಕೆಯು ಬಳಕೆಗಿಂತ ದುರ್ಬಳಕೆಗೆ ಹೆಚ್ಚು ಆಸ್ಪದ ಕೊಡುತ್ತಿದೆ. ಅನುಕೂಲಕ್ಕಿಂತ ಅನನುಕೂಲಕ್ಕೆ ಹೆಚ್ಚು ಅವಕಾಶ ಕಲ್ಪಿಸಿಕೊಡುತ್ತಿದೆ. ಹಲವರು ಈ ವೇದಿಕೆಗಳನ್ನು ತಮ್ಮ ದುಡಿಮೆಯ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಬಹುತೇಕರು ಟೈಂ ಪಾಸ್ ಗಾಗಿ ಬಳಸುತ್ತಿದ್ದಾರೆ. ಮತ್ತೊಬ್ಬರ  ಜೀವನದಲ್ಲಿ ಇಣುಕಿ ನೋಡುವುದನ್ನು ಮೈಗೂಡಿಸಿಕೊಡಿದ್ದಾರೆ. ತಮ್ಮ ನೈಜ ಜಗತ್ತನ್ನು ಮರೆತಿದ್ದಾರೆ. ತಮಾಷೆಗಾಗಿ ಮಾಡುವ ಟ್ರೋಲ್, ರೀಲ್ಸ್ ಗಳು ಅಪರಾಧ ಪ್ರಕರಣಗಳಿಗೆ ದಾರಿ ಮಾಡಿಕೊಡುತ್ತಿವೆ. ಜತೆಗೆ, ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿವೆ. ಆರೋಗ್ಯ ಮತ್ತು ಜೀವ ಹಾನಿಗೂ ಆಹ್ವಾನವೀಯುತ್ತಿವೆ.

ಹದಿಹರೆಯದ ಮಕ್ಕಳೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗುತ್ತಿದ್ದು, ದಾರಿ ತಪ್ಪಿಸುವ ಟ್ರೋಲ್‌ಗಳು, ಕಂಟೆಂಟ್‌ಗಳು ಹಾಗೂ ವಿಡಿಯೋಗಳಿಂದ ಪ್ರೇರೇಪಿತರಾಗುತ್ತಿದ್ದಾರೆ. ವಿಭಿನ್ನವಾಗಿ ವರ್ತಿಸುವ ಮನೋವೃತ್ತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಜನರ ಗುಂಪಿನಿಂದ ದೂರವಿರುವ, ಸಾಮಾಜಿಕ ವೇದಿಕೆಗಳಲ್ಲೇ ಮುಳುಗುವ ಮೂಲಕ ಮಾನಸಿಕ ಖಿನ್ನತೆಗಳಿಗೂ ಒಳಗಾಗುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಕಮೆಂಟ್‌ಗಳು, ಪೋಸ್ಟ್‌ಗಳ ಕಾರಣಕ್ಕೆ ಹಲ್ಲೆ, ಕೊಲೆಗಳಂತಹ ಘಟನೆಗಳೂ ವರದಿಯಾಗುತ್ತಿವೆ. ಇಂತಹ ಘಟನೆಗಳು ಅನಾರೋಗ್ಯಕರ ಸಮಾಜ ಸೃಷ್ಟಿಸುವಲ್ಲಿ ಹೆಚ್ಚಿನ ಪಾಲು ಪಡೆಯುತ್ತಿವೆ. ಇದು ಹೀಗೆಯೇ ಮುಂದುವರೆದರೆ, ನಾಗರಿಕ ಸಮಾಜ, ಅನಾಗರಿಕ ಸಮಾಜವಾಗಿ ಪರಿವರ್ತನೆ ಹೊಂದಿದರೂ ಆಶ್ಚರ್ಯವಿಲ್ಲ.

ಪ್ರಕರಣ ಸಂಬಂಧ ಈದಿನ.ಕಾಮ್ ಜೊತೆ ಮಾತನಾಡಿದ ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ, ‘ಇಂತಹ ಘಟನೆಯಲ್ಲಿ ಸರ್ಕಾರಕ್ಕೆ ಮತ್ತು ಸಮಾಜಕ್ಕೆ ಒಂದು ಎಚ್ಚರಿಕೆಯಿದೆ. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ವಿರುದ್ಧ ಕೀಳು ಮಟ್ಟದ ಕಮೆಂಟ್‌ಗಳು ಹೆಚ್ಚುತ್ತಿವೆ. ಮಹಿಳೆಯರು ತಮ್ಮ ತೇಜೋವಧೆ ಮಾಡುತ್ತಿರುವ ಬಗ್ಗೆ ಸೈಬರ್ ಠಾಣೆಗೆ ತೆರಳಿ ತಮ್ಮ ಅಳಲು ತೋಡಿಕೊಳ್ಳುತ್ತಿರುವ ಘಟನೆಗಳು ಕೂಡ ವರದಿಯಾಗುತ್ತಿವೆ. ಇಂತಹ ಸಂದರ್ಭದಲ್ಲಿಯೇ ಕೊಲೆಯಂತಹ ಘಟನೆಗಳೂ ನಡೆಯುತ್ತಿವೆ. ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು, ಆರೋಪಿಗಳ ವಿರುದ್ಧ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಬೇಕು. ಸಮಾಜಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಬೇಕು. ದುಷ್ಕೃತ್ಯಗಳು ಘಟಿಸಿದ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.

ಸೆಂಟರ್ ಫಾರ್ ಮ್ಯೂಸಿಕ್‌ನ ಮೀನಾಕ್ಷಿರವಿಯವರು ಈ ದಿನ.ಕಾಮ್ ಜತೆಗೆ ಮಾತನಾಡಿ, ‘ಯಾರೇ ತಪ್ಪು ಮಾಡಿದರೂ ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಹೆಣ್ಣು ಎಂದರೆ, ಭೋಗದ ವಸ್ತುವಿನಂತೆ ನೋಡುತ್ತಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ಮನೆಯ ಒಳಗೂ ಮತ್ತು ಹೊರಗೂ ಮಹಿಳೆಯರ ಮೇಲೆ ಇಂದಿಗೂ ದೌರ್ಜನ್ಯ ನಡೆಯುತ್ತಿದೆ. ಈಗ ನ್ಯಾಯ ಸಿಗುವುದೇ ಕಷ್ಟವಾಗಿದೆ. ಈ ಪ್ರಕರಣದಲ್ಲಿ ದರ್ಶನ್ ತಪ್ಪು ಮಾಡಿದ್ದರೆ, ಖಂಡಿತ ಅವರಿಗೆ ಶಿಕ್ಷೆಯಾಗಬೇಕು’ ಎಂದಿದ್ದಾರೆ.

‘ಸಾಮಾಜಿಕ ಜಾಲತಾಣದಲ್ಲಿ ಹಲವರು ಮುಖವಾಡ ಧರಿಸಿಕೊಂಡು ಫೇಕ್ ಅಕೌಂಟ್ ಬಳಕೆ ಮಾಡಿ ಇನ್ನೊಬ್ಬರ ಬಗ್ಗೆ ಕೀಳು ಮಟ್ಟದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸುವುದು ಸಾಮಾಜಿಕ ಜಾಲತಾಣ ಬಳಕೆ ಮಾಡುವವರಿಗೆ ಪ್ರವೃತ್ತಿಯಾಗಿ ಬೆಳೆದು ಬರುತ್ತಿದೆ. ಇನ್ನೊಬ್ಬರ ಜೀವನದ ಬಗ್ಗೆ ಯೋಚನೆ ಮಾಡದೇ ತಕ್ಷಣಕ್ಕೆ ಬಾಯಿಗೆ ಬಂದಂಗೆ ಹೇಳುವುದು ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸರಿ-ತಪ್ಪುಗಳನ್ನ ವ್ಯಕ್ತಿ ತನ್ನ ದೃಷ್ಟಿಕೋನದಿಂದ ನೋಡುವುದು, ಹೇಳುವುದು ಪರಿಪಾಠವಾಗಿದೆ. ಅನಗತ್ಯವಾಗಿ ಇನ್ನೊಬ್ಬರ ಜೀವನದ ಬಗ್ಗೆ ಅನುಕಂಪ ಅಥವಾ ಇನ್ನೊಂದು ರೀತಿಯಲ್ಲಿ ನಿಂದನೆ ಭಾವನೆಗಳನ್ನು ವ್ಯಕ್ತಪಡಿಸುವುದು ಸಾಮಾಜಿಕ ಭಾವನೆಯ ರೀತಿಯಾಗುತ್ತಿದೆ’ ಎಂದು ಮನಶಾಸ್ತ್ರಜ್ಞ ಶ್ರೀಧರ್ ಈ ದಿನ.ಕಾಮ್‌ಗೆ ಹೇಳಿದರು.

ಹಿರಿಯರಿಲ್ಲದೆ ಚಿತ್ರರಂಗ ಅನಾಥ

‘ಚಿತ್ರರಂಗ ಅಪ್ಪ-ಅಮ್ಮ ಇಲ್ಲದೆ ಅನಾಥವಾಗಿದೆ. ಈ ಹಿಂದೆ ರಾಜ್‌ಕುಮಾರ್, ಅಂಬರೀಶ್ ಇದ್ದಾಗ ಈ ರೀತಿ ಘಟನೆ ನಡೆದ ಉದಾಹರಣೆಗಳಿಲ್ಲ. ದರ್ಶನ್ ಆರೋಪಿಯಾಗಿರುವ ಈ ಘಟನೆ ಸ್ಯಾಂಡಲ್‌ವುಡ್‌ಗೆ ಕಳಂಕ ತಂದಿದೆ. ಅಲ್ಲದೆ, ಅವರು ತಮ್ಮ ಅಭಿಮಾನಿಗಳಿಗೆ ಇಂತಹ ಘಟನೆಗಳಿಂದ ಕೆಟ್ಟ ಸಂದೇಶ ರವಾನೆ ಮಾಡುತ್ತಿದ್ದಾರೆ. ಈಗಾಗಲೇ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ. ಮೃತ ವ್ಯಕ್ತಿಯ ಕುಟುಂಬಕ್ಕೆ ಈಗ ಯಾರು ದಿಕ್ಕು. ತನಿಖೆ ಮಾಡಿ ತಪ್ಪಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು. ನಿಜವಾದ ಆರೋಪಿಗಳಿಗೆ ಶಿಕ್ಷೆ ನೀಡಬೇಕು’ ಎಂದು ಹೈಕೋರ್ಟ್ ವಕೀಲ ಉಮೇಶ್ ಈ ದಿನ.ಕಾಮ್ಗೆ ತಿಳಿಸಿದರು.

‘ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಕೆಟ್ಟ ಸಂದೇಶ ಬಂದರೆ, ಕಾನೂನು ಮೂಲಕ ಕ್ರಮ ತೆಗೆದುಕೊಳ್ಳಬೇಕು. ಹಲ್ಲೆ, ಕೊಲೆ ಮಾಡುವ ದಾರಿ ಸರಿಯಲ್ಲ. ಒಬ್ಬ ನಟರಾಗಿ ಸಮಾಜಕ್ಕೆ ಈ ರೀತಿ ಸಂದೇಶ ನೀಡುತ್ತಿದ್ದಾರೆ? ಸಾಮಾನ್ಯ ವ್ಯಕ್ತಿಗೆ ನೀಡುವ ಉಪಚಾರವನ್ನೇ ಇವರಿಗೂ ನೀಡಬೇಕು’ ಎಂದರು.

ನಟ ಡಾ.ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದವರು. ಕನ್ನಡ ಚಿತ್ರರಂಗದ ಕಲಾವಿದರಿಗೆ ಹಿರಿಯರಾಗಿ, ಮಾರ್ಗದರ್ಶಕರಾಗಿ ಇದ್ದವರು. ಇವರ ಕಾಲಾನಂತರ ನಟ ಅಂಬರೀಶ್ ಅವರು ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಇದ್ದರೂ ಮುಂದೆ ನಿಂತು ಬಗೆಹರಿಸುತ್ತಿದ್ದರು. ಆದರೆ ಈಗ ರಾಜ್, ವಿಷ್ಣು ಹಾಗೂ ಅಂಬಿ ಅವರ ಕಾಲಾನಂತರ ಸ್ಯಾಂಡಲ್‌ವುಡ್ ಈಗ ಅನಾಥವಾಗಿದೆ ಎನ್ನುವುದು ನಿಜ.

ಈ ಸುದ್ದಿ ಓದಿದ್ದೀರಾ? ಕೊಲೆಯ ಹಿಂದಿದೆಯೇ ನಟ ದರ್ಶನ್ ಕೈವಾಡ? ಏನಿದು ಪ್ರಕರಣ?

ಸ್ವಯಂಪ್ರೇರಿತ ಕ್ರಮವಿಲ್ಲ

‘ಸಾಮಾಜಿಕ ಜಾಲತಾಣದಲ್ಲಿ ಯಾರಿಗೆ ಏನೇ ಸಮಸ್ಯೆ ಆದರೂ ಜನರು ಸೈಬರ್ ಠಾಣೆಗೆ ದೂರು ನೀಡಬಹುದು. ಆಗ ಕೂಡಲೇ ಕ್ರಮ ಕೈಗೊಳ್ಳತ್ತೇವೆ. ಆದರೆ, ಸ್ವಯಂಪ್ರೇರಿತವಾಗಿ ಕ್ರಮ ಕೈಗೋಳ್ಳಲಾಗುವುದಿಲ್ಲ. ಸಮಸ್ಯೆ ಉಂಟಾದವರೂ ದೂರು ನೀಡಬೇಕು’ ಎಂದು ಶಿವಾಜಿನಗರ ಸೈಬರ್ ಠಾಣೆಯ ಇನ್‌ಸ್ಪೆಕ್ಟರ್ ಈ ದಿನ.ಕಾಮ್ಗೆ ತಿಳಿಸಿದರು.

+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಪಾಲಕರು ಬೆಳೆಸಿದಾಗ ಮಾತ್ರ ಸಮಾಜದಲ್ಲಿ ಉತ್ತಮವಾಗಿ ಬೆಳೆಯಲು...

ಗದಗ | ದಲಿತ ಮುಖಂಡರ ವಿರುದ್ಧ ದೂರು ದಾಖಲು; ಹಿಂಪಡೆಯುವಂತೆ ದಸಂಸ ಆಗ್ರಹ

ದಲಿತ ಮುಖಂಡರ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ...

ರಾಯಚೂರು | 371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹ

ಕಲ್ಯಾಣ ಕರ್ನಾಟಕದ ಭಾಗಕ್ಕೆ ಸಂವಿಧಾನದಲ್ಲಿ ನೀಡಲಾಗಿರುವ 371(ಜೆ) ಅನುಷ್ಠಾನಕ್ಕೆ ಆಗ್ರಹಿಸಿ 371(ಜೆ)...

ಚುನಾವಣಾ ಫಲಿತಾಂಶಕ್ಕೂ ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಸಂಬಂಧವಿಲ್ಲ: ಸಿಎಂ ಸಿದ್ದರಾಮಯ್ಯ

“ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದದ್ದೇ, ಪೆಟ್ರೋಲ್ ಬೆಲೆ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ...