ರಜೆ ಕೊಡಲಿಲ್ಲವೆಂದು ಕೋಪಗೊಂಡ ಸರ್ಕಾರಿ ನೌಕರನೊಬ್ಬ ತನ್ನ ನಾಲ್ವರು ಸಹೋದ್ಯೋಗಿಗಳಿಗೆ ಚಾಕುವಿನಿಂದ ಇರಿದಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಚಾಕು ದಾಳಿಯಲ್ಲಿ ಗಾಯಗೊಂಡವರನ್ನು ಜಯದೇವ್ ಚಕ್ರವರ್ತಿ, ಸಂತನು ಸಹಾ, ಸಾರ್ಥ ಲೇಟ್ ಮತ್ತು ಶೇಖ್ ಸತ್ಬುಲ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಘಟನೆಯಲ್ಲಿ ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ.
ಆರೋಪಿಯನ್ನು ಅಮಿತ್ ಕುಮಾರ್ ಸರ್ಕಾರ್ ಎಂದು ಗುರುತಿಸಲಾಗಿದ್ದು, ಈತ ರಾಜ್ಯ ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಬಿಧಾನ್ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೈಯಲ್ಲಿ ರಕ್ತಸಿಕ್ತ ಚಾಕು ಹಿಡಿದುಕೊಂಡು ನಗರದ ಬೀದಿಗಳಲ್ಲಿ ನಡೆದುಕೊಂಡು ಹೋಗುತ್ತಿದ್ದ ಆರೋಪಿಯನ್ನು ನೋಡಿ ಜನರು ಭಯಗೊಂಡಿದ್ದರು. ಚಾಕುವನ್ನು ಎಸೆಯುವಂತೆ ಅವರು ಕೇಳಿಕೊಳ್ಳುತ್ತಿದ್ದರು.
ಸಂಚಾರ ಪೊಲೀಸರು ಚಾಕುವನ್ನು ಕೆಳಗೆ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿ ಬಳಿಕ ಬಂಧಿಸಿದ್ದಾರೆ. ಆದೇಶವನ್ನು ಪಾಲಿಸಿದ ಅಮಿತ್ ಕುಮಾರ್ ಪೊಲೀಸರಿಗೆ ಶರಣಾಗಿದ್ದಾನೆ. ಅಮಿತ್ ರಜೆ ಕೇಳಿದ್ದ, ಆದರೆ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುರಹಂಕಾರಿ ದೊಡ್ಡಣ್ಣನ ಎದುರು ಮಂಡಿಯೂರಿದ ಮೋದಿ
ಅಮಿತ್ ಕುಮಾರ್ ಸರ್ಕಾರ್ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೋಲ್ಕತ್ತಾದ ನ್ಯೂಟೌನ್ ಪ್ರದೇಶದ ಕರಿಗರಿ ಭವನದಲ್ಲಿರುವ ತಮ್ಮ ಕಚೇರಿಯೊಳಗೆ ತಮ್ಮ ಸಹೋದ್ಯೋಗಿಗಳೊಂದಿಗೆ ವಾಗ್ವಾದ ನಡೆಸಿದ್ದು, ಬಳಿಕ ಚಾಕುವಿನಿಂದ ಇರಿದಿದ್ದಾನೆ. ಅಮಿತ್ ಸರ್ಕಾರ್ ಚಾಕು ದಾಳಿಯ ಸಮಯದಲ್ಲಿ ಅವರ ಕಚೇರಿಯ ಭದ್ರತಾ ಸಿಬ್ಬಂದಿಯೊಬ್ಬರಿಗೂ ಗಾಯವಾಗಿದೆ.
ಪೊಲೀಸ್ ವಿಚಾರಣೆಯ ಸಮಯದಲ್ಲಿ, ಆರೋಪಿಯು ತನ್ನ ಸಹೋದ್ಯೋಗಿಗಳು ತನ್ನ ತಂದೆಯ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾನೆ. ಇದು ಆತನನ್ನು ಕೋಪಗೊಳಿಸಿತು. ಈ ಪ್ರಕರಣದಲ್ಲಿನ ಆರೋಪಗಳು ಮತ್ತು ಪ್ರತಿ ಆರೋಪಗಳನ್ನು ತನಿಖಾ ಸಂಸ್ಥೆಗಳು ಇನ್ನೂ ಪರಿಶೀಲಿಸಬೇಕಾಗಿದೆ.
ಚಾಕು ಹೇಗೆ ಆತನ ಕೈಗೆ ಬಂತು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸರ್ಕಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
