ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ, ತಾವು ಆ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡುವುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ತನ್ನ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸಿ ಎಂದು ಬಿಜೆಪಿ ನಾಯಕರಿಗೆ ಮನವಿ ಮಾಡಿರುವುದಾಗಿ ಫಡ್ನವಿಸ್ ತಿಳಿಸಿದ್ದಾರೆ.
“ಮಹಾರಾಷ್ಟ್ರದ ಫಲಿತಾಂಶದ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ. ನಾನು ಪಕ್ಷವನ್ನು ಮುನ್ನಡೆಸಿದ್ದೆ. ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಿರುವ ಹಿನ್ನೆಲೆಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ತಮ್ಮನ್ನು ತಮ್ಮ ಕರ್ತವ್ಯಗಳಿಂದ ಮುಕ್ತಗೊಳಿಸಿ ಎಂದು ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡುವವರಿಗೆ ಪಾಠ ಕಲಿಸಿದ ಫಲಿತಾಂಶ
ಈ ವರ್ಷದ ನವೆಂಬರ್ ನಂತರದಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯುವ ಕಾರಣದಿಂದ ಪಕ್ಷದ ಕಡೆ ಗಮನಹರಿಸಲು ಅವಕಾಶ ನೀಡಬೇಕೆಂದು ಬಿಜೆಪಿ ನಾಯಕರಿಗೆ ತಿಳಿಸಿರುವುದಾಗಿ ಫಡ್ನವೀಸ್ ಹೇಳಿದ್ದಾರೆ.
ಇಂದು ಬೆಳಿಗ್ಗೆ ಮಹಾರಾಷ್ಟ್ರದ ಬಿಜೆಪಿ ಘಟಕ ಪಕ್ಷದ ಕಳಪೆ ಪ್ರದರ್ಶನವನ್ನು ವಿಮರ್ಶಿಸಲು ಸಭೆಯನ್ನು ಹಮ್ಮಿಕೊಂಡಿತ್ತು. ಸಭೆಯಲ್ಲಿ ದೇವೇಂದ್ರ ಫಡ್ನವೀಸ್ ಹಾಗೂ ಜಿಬೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬವಾನ್‌ಕುಲೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ 45 ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 17 ಸ್ಥಾನ ಮಾತ್ರ ಗೆದ್ದಿತ್ತು. ಇವುಗಳಲ್ಲಿ ಬಿಜೆಪಿ 9, ಶಿಂಧೆ ಶಿವಸೇನೆ 7, ಅಜಿತ್ ಪವಾರ್ ಎನ್‌ಸಿಪಿ 1 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 2019ರ ಲೋಕಸಭಾ ಚುನಾವಣೆಯಲ್ಲಿ 23 ಸ್ಥಾನಗಳಲ್ಲಿ ಜಯಗಳಿಸಿತ್ತು.
ಇಂಡಿಯಾ ಒಕ್ಕೂಟದ ಪಕ್ಷಗಳು 30 ಸ್ಥಾನಗಳನ್ನು ಗೆದ್ದು ಉತ್ತಮ ಸಾಧನೆ ತೋರಿದ್ದವು. ಇದರಲ್ಲಿ ಕಾಂಗ್ರೆಸ್ 13, ಉದ್ಧವ್ ಠಾಕ್ರೆ ಶಿವಸೇನೆ 9, ಶರದ್ ಪವಾರ್ ಎನ್‌ಸಿಪಿ 8 ಸ್ಥಾನಗಳಲ್ಲಿ ವಿಜಯಗಳಿಸಿದ್ದವು.