ತಮ್ಮ ಸೇವೆಗಳ ಪ್ರಚಾರಕ್ಕಾಗಿ ಛತ್ತೀಸ್ಗಢದ ವೈದ್ಯರೊಬ್ಬರು ಆಪರೇಷನ್ ಸಿಂಧೂರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಬಳಸಿಕೊಂಡಿದ್ದು, ಸದ್ಯ ವೈದ್ಯರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ ಭಾಷಣದಲ್ಲಿ “ರಕ್ತ ಮತ್ತು ನೀರು ಜೊತೆಯಾಗಿ ಹರಿಯಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಇದನ್ನೇ ಬಳಸಿಕೊಂಡು ಪ್ರಚಾರ ಮಾಡಿದ್ದಕ್ಕೆ ಭಿಲಾಯಿ ಮೂಲದ ಮೂತ್ರಶಾಸ್ತ್ರಜ್ಞರನ್ನು ಅಮಾನತುಗೊಳಿಸಲಾಗಿದೆ.
ಶ್ರೀ ಶಂಕರಾಚಾರ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಶಿವೇಂದ್ರ ಸಿಂಗ್ ತಿವಾರಿ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೈದ್ಯಕೀಯ ಸೇವೆ ಪ್ರಚಾರವನ್ನು ಮಾಡಿದ್ದರು. ಈ ವೇಳೆ ಆಪರೇಷನ್ ಸಿಂಧೂರದ ಬಗ್ಗೆ ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ್ದರು.
ಇದನ್ನು ಓದಿದ್ದೀರಾ? ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸು ಭಾರತೀಯ ಸೈನ್ಯಕ್ಕೆ ಸಲ್ಲಬೇಕು: ಸಿಎಂ ಸಿದ್ದರಾಮಯ್ಯ
ವೈದ್ಯರು ತಮ್ಮ ಜಾಹೀರಾತು ಫಲಕದಲ್ಲಿ ಪ್ರಧಾನಿಯವರ ಸಾಲನ್ನೇ ಬಳಸಿದ್ದಾರೆ. ಅದರೊಂದಿಗೆ ತಮ್ಮ ಸಾಲುಗಳನ್ನೂ ಜಾಣತನದಿಂದ ಸೇರಿಸಿಕೊಂಡಿದ್ದಾರೆ. “ರಕ್ತ ಮತ್ತು ನೀರು ಜೊತೆಯಾಗಿ ಹರಿಯಲು ಸಾಧ್ಯವಿಲ್ಲ. ಆದ್ದರಿಂದ ನೀವು ನಿಮ್ಮ ಮೂತ್ರದಲ್ಲಿ ರಕ್ತವನ್ನು ನೋಡಿದರೆ, ತಕ್ಷಣ ಮೂತ್ರಶಾಸ್ತ್ರಜ್ಞರನ್ನು ಸಂಪರ್ಕಿಸಿ. ಅದು ಗಂಭೀರ ಸಮಸ್ಯೆ ಆಗಿರಬಹುದು” ಎಂದು ಹೇಳಿದ್ದಾರೆ.
ಈ ಜಾಹೀರಾತು ಮೂತ್ರಶಾಸ್ತ್ರೀಯ ಆರೋಗ್ಯವನ್ನು ಉತ್ತೇಜಿಸುವ ಸ್ಪಷ್ಟ ಪ್ರಯತ್ನ. ವೈದ್ಯರು ರೋಗಿಗಳಲ್ಲಿ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಬಹುದು. ಆದರೆ ಪ್ರಧಾನ ಮಂತ್ರಿಯವರ ಹೇಳಿಕೆಯೊಂದಿಗೆ ಸ್ವಯಂ ಪ್ರಚಾರ ಮಾಡುವುದು ಸರಿಯಲ್ಲ ಎಂಬ ವಾದಗಳು ಕೇಳಿಬಂದಿದೆ.
ಸದ್ಯ ಈ ಬಗ್ಗೆ ತನಿಖೆ ನಡೆಸಲು ಆಡಳಿತವು ಉನ್ನತ ಅಧಿಕಾರ ಸಮಿತಿಯನ್ನು ರಚಿಸಿದೆ ಮತ್ತು ಸಂಸ್ಥೆಯು ವೈದ್ಯರನ್ನು 15 ದಿನಗಳವರೆಗೆ ಅಮಾನತುಗೊಳಿಸಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಸ್ಥೆಯ ಡೀನ್ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. “ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ನಿಮ್ಮ ಜಾಹೀರಾತು ಅನಗತ್ಯ ಮತ್ತು ಜವಾಬ್ದಾರಿಯುತ ವೈದ್ಯಕೀಯ ಸಿಬ್ಬಂದಿಯಾಗಿ ನೀವು ಮಾಡಿದ ಅವಮಾನ. ಆಡಳಿತ ಮಂಡಳಿಯು ನಿಮ್ಮ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದೆ. ನಿಮ್ಮನ್ನು 15 ದಿನಗಳವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಉಲ್ಲೇಖಿಸಲಾಗಿದೆ.
