ದೂರದರ್ಶನ ಹಾಗೂ ಆಲ್ ಇಂಡಿಯಾ ರೇಡಿಯೋ ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹಾಗೂ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ನಾಯಕ ಜಿ ದೇವರಾಜನ್ ಅವರ ಕೇಂದ್ರ ಸರ್ಕಾರವನ್ನು ಟೀಕಿಸುವ ಭಾಷಣದ ತುಣುಕುಗಳನ್ನು ಸೆನ್ಸಾರ್ ಮಾಡಿದೆ.
ಈ ಇಬ್ಬರು ನಾಯಕರು ತಮ್ಮ ಭಾಷಣಗಳಲ್ಲಿ ಬಳಸಿದ್ದ ‘ಕೋಮುವಾದಿ ಸರ್ವಾಧಿಕಾರಿ ಆಡಳಿತ’, ‘ಕಠಿಣ ಕಾನೂನುಗಳು’ ಹಾಗೂ ‘ಮುಸ್ಲಿಂ’ ಪದಗಳನ್ನು ಸೆನ್ಸಾರ್‌ಗೊಳಪಡಿಸಿದೆ.
ಚುನಾವಣಾ ಆಯೋಗದ ನಿರ್ದೇಶನಗಳ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೂರದರ್ಶನದ ಅಧಿಕಾರಿಗಳು ತಿಳಿಸಿದ್ದಾರೆ. ಭಾಷಣಕ್ಕೂ ಮೊದಲು ಸೀತಾರಾಮ್ ಯೆಚೂರಿ ಅವರಿಗೆ ಕೋಮುವಾದಿ ಸರ್ವಾಧಿಕಾರಿ ಆಡಳಿತ ಪದವನ್ನು ಬಳಸದಂತೆ ಕೇಂದ್ರ ಸರ್ಕಾರದ ಮಾಧ್ಯಮಗಳು ಸಲಹೆ ನೀಡಿದ್ದವು.
ಅದೇ ರೀತಿ ಜಿ ದೇವರಾಜನ್ ಅವರಿಗೆ ಮುಸ್ಲಿಮರು ಪದ ಬಳಸದಂತೆ ಕೂಡ ಎಐಆರ್ ಹಾಗೂ ದೂರದರ್ಶನ ಸೂಚನೆ ನೀಡಿತ್ತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಹಿಂದೂ-ಮುಸ್ಲಿಮ್ ರಾಜಕಾರಣ ಮಾಡುವುದಿಲ್ಲವೇ ನಮ್ಮ ಪ್ರಧಾನಿ!
ಚುನಾವಣಾ ಚಿಹ್ನೆಗಳ(ಮೀಸಲು ಮತ್ತು ಹಂಚಿಕೆ) ನಿಬಂಧನೆಗಳ ಆದೇಶ 1968ರಡಿ 6 ರಾಷ್ಟ್ರೀಯ ಪಕ್ಷಗಳು ಹಾಗೂ 59 ರಾಜ್ಯ ಪಕ್ಷಗಳಿಗೆ ಚುನಾವಣಾ ಪ್ರಚಾರ ಸುದ್ದಿ ಪ್ರಸಾರವಾಗುವ ಅರ್ಹತೆ ಹೊಂದಿವೆ. ರಾಷ್ಟ್ರ ಹಾಗೂ ರಾಜ್ಯಗಳನ್ನು ಪ್ರತಿನಿಧಿಗಳ ಚುನಾವಣಾ ಪ್ರಚಾರವನ್ನು ಪ್ರಸಾರ ಮಾಡಲು ಅನುಮತಿಸಲಾಗಿರುವುದನ್ನು ಏಪ್ರಿಲ್‌ನಲ್ಲಿ ಹೊರಡಿಸಿರುವ ಚುನಾವಣಾ ಆಯೋಗದ ಆದೇಶದಲ್ಲಿ ತಿಳಿಸಲಾಗಿತ್ತು.
ಈ ಬಗ್ಗೆ ಮಾತನಾಡಿರುವ ಸೀತಾರಾಂ ಯೆಚೂರಿ, ನಾನು ಮಾತನಾಡಿರುವ ಹಿಂದಿ ಆವೃತ್ತಿಯಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ನಂತರ ನನ್ನ ಪದಗಳನ್ನು ಅಳಿಸಿದ್ದಾರೆ ಎಂದು ಹೇಳಿದರು.
ದೇವರಾಜನ್ ಕೂಡ ಈ ಬಗ್ಗೆ ಮಾತನಾಡಿ, ನಾನು ನನ್ನ ಭಾಷಣದಲ್ಲಿ ಸಿಎಎ ವಿವಾದದಲ್ಲಿನ ತಾರತಮ್ಯದ ಷರತ್ತುಗಳ ಬಗ್ಗೆ ಉಲ್ಲೇಖಿಸಿದ್ದೆ. ಅವರು ಮುಸ್ಲಿಂ ಪದವನ್ನು ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ನಾನು ಸಿಎಎ ಕಾನೂನಿನಲ್ಲಿ ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಸರ್ಕಾರದ ಮಾಧ್ಯಮಗಳಿಗೆ ಮನವರಿಕೆ ಮಾಡಿದರೂ ಪದವನ್ನು ಉಳಿಸಿಕೊಳ್ಳದೆ ಅಳಿಸಿದ್ದಾರೆ ಎಂದು ತಿಳಿಸಿದರು.
ಈ ಇಬ್ಬರು ನಾಯಕರು ಮಾತನಾಡಿದ ಭಾಷಣವು ಏ.16ರಂದು ದೂರದರ್ಶನದಲ್ಲಿ ಪ್ರಸಾರವಾಗಿತ್ತು.
