ವರ ಮತ್ತು ಆತನ ಕುಟುಂಬದವರ ವರದಕ್ಷಿಣ ಹಾಗೂ ಚಿನ್ನದ ಮೇಲಿನ ದುರಾಸೆಯಿಂದಾಗಿ ಮದುವೆಯಾದ ಮೂರೇ ದಿನದಲ್ಲಿ ವಿವಾಹ ಸಂಬಂಧ ಮುರಿದುಬಿದ್ದಿದ್ದು, ಆರೋಪಿ ವರನಿಗೆ 3 ತಿಂಗಳು ಜೈಲು ಹಾಗೂ 3 ಲಕ್ಷ ದಂಡ ವಿಧಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ. ದಂಡದ ಹಣವನ್ನು ವಧುವಿಗೆ ಪರಿಹಾರವಾಗಿ ನೀಡಬೇಕೆಂದು ಸೂಚಿಸಿದೆ.
ತಮಿಳುನಾಡಿನ ಸೈದಾಪೇಟೆಯಲ್ಲಿ 2006ರ ಫೆಬ್ರವರಿ 3ರಂದು ವಿವಾಹ ನಡೆದಿತ್ತು. ವಿವಾಹವಾದ ಮೂರೇ ದಿನದಲ್ಲಿ ಸಂಬಂಧ ಮುರಿದುಬಿದ್ದಿತ್ತು. ಆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿರುವ ನ್ಯಾಯಾಲಯ, ಬರೋಬ್ಬರಿ 19 ವರ್ಷಗಳ ಬಳಿಕ ತೀರ್ಪು ನೀಡಿದೆ.
ವಿವಾಹ ನಿಶ್ಚಯದ ಸಮಯದಲ್ಲಿ ವಧುವಿಗೆ 60 ಪೌಂಡ್ ಮತ್ತು ವರನಿಗೆ 10 ಪೌಂಡ್ ಚಿನ್ನವನ್ನು ವಧುವಿನ ಪೋಷಕರು ನೀಡಬೇಕೆಂದು ಮಾತುಕತೆ ನಡೆಸಿದ್ದರು. ಆದರೆ, ಇನ್ಫೋಟೆಕ್ ಉದ್ಯೋಗಿಯಾಗಿದ್ದ ವರ, ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದನು. ವಿವಾಹವಾದ ಬಳಿಕ, ಉಳಿದ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕೆಂದರೆ, 30 ಪೌಂಡ್ ಚಿನ್ನ ಕೊಡಬೇಕೆಂದು ಒತ್ತಾಯಿಸಿದ್ದನು.
ವರ ಬೇಡಿಕೆಯಂತೆ ಮತ್ತೆ ಹೆಚ್ಚು ಚಿನ್ನ ಕೊಡಲು ವಧುವಿನ ಪೋಷಕರು ನಿರಾಕರಿಸಿದ್ದರು. ಆನಂತರವೂ ಮನೆಯಲ್ಲಿ ವರದಕ್ಷಿಣೆಗಾಗಿ ವಧುವನ್ನು ವರ ಮತ್ತು ಆತನ ಪೋಷಕರು ಪದೇ-ಪದೇ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ವಧು ಮೂರೇ ದಿನದಲ್ಲಿ ಗಂಡನ ಮನೆಯನ್ನು ತೊರೆದಿದ್ದರು.
ವರ ಮತ್ತು ಆತನ ಪೋಷಕರ ವರದಕ್ಷಿಣೆ ದುರಾಸೆಯನ್ನು ಸಹಿಸಲಾಗದೆ ವಧು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ವರ ಮತ್ತು ಆತನ ಪೋಷಕರ ವಿರುದ್ಧ ಐಪಿಸಿಯ ಸೆಕ್ಷನ್ 498A ಮತ್ತು ವರದಕ್ಷಿಣೆ ತಡೆ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ಡನೆಸಿದ್ದ ಸೈದಾಪೇಟೆ ವಿಚಾರಣಾ ನ್ಯಾಯಾಲಯವು ವರನನ್ನು ಐಪಿಸಿ ಮತ್ತು ಡಿಪಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. ಆತನಿಗೆ ಐಪಿಸಿಯ ಸೆಕ್ಷನ್ 498A ಅಡಿಯಲ್ಲಿ 3,000 ರೂ. ದಂಡ ಮತ್ತು ಡಿಪಿ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಒಂದು ವರ್ಷ ಶಿಕ್ಷೆ ವಿಧಿಸಿತ್ತು.
ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವರ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ಜೈಲು ಶಿಕ್ಷೆಯ ಪ್ರಮಾಣವನ್ನು 2 ವರ್ಷಗಳಿಗೆ ಏರಿಸಿತ್ತು. ನಂತರದಲ್ಲಿ, ಆರೋಪಿ ವರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆತನ ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್, ದಂಡವನ್ನು 3 ಲಕ್ಷ ರೂ.ಗೆ ಏರಿಸಿದ್ದು, ಜೈಲು ಶಿಕ್ಷೆಯ ಪ್ರಮಾಣವನ್ನು 3 ತಿಂಗಳಿಗೆ ಇಳಿಸಿದೆ.