ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ನಿಯಮಗಳು 2025ರಲ್ಲಿ ಪ್ರಸ್ತಾಪಿಸಲಾದ ಕರಡು ನಿಯಮಗಳ ಪ್ರಕಾರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆಯಲು ಮಕ್ಕಳಿಗೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಸಾಮಾಜಿಕ ಮಾಧ್ಯಮ ಖಾತೆ ಹೊಂದಿರುವವರು ವಯಸ್ಕರು ಆಗಿರಬೇಕು ಅಥವಾ ಪೋಷಕರ ಒಪ್ಪಿಗೆ ಇರಬೇಕು ಎಂದು ನಿಯಮ ಹೇಳುತ್ತದೆ.
ಕೇಂದ್ರ ಸರ್ಕಾರ ಶುಕ್ರವಾರ ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಆಕ್ಷೇಪಣೆ ಮತ್ತು ಸಲಹೆ ನೀಡಲು ತಿಳಿಸಿದೆ. mygov.inನಲ್ಲಿ ಆಕ್ಷೇಪಣೆ ವ್ಯಕ್ತಪಡಿಸಬಹುದಾಗಿದೆ. ಫೆಬ್ರವರಿ 18ರಿಂದ ಈ ಕರಡು ನಿಯಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಶುಕ್ರವಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಭಾರತದ ಸಾಮಾಜಿಕ ಮಾಧ್ಯಮ ಆಪ್ ‘ಕೂ’ ಶೀಘ್ರದಲ್ಲೇ ಸ್ಥಗಿತ
ಸಾಮಾಜಿಕ ಮಾಧ್ಯಮ ಖಾತೆಗಳನ್ನು ತೆರೆಯಲು ಮಗುವಿಗೆ ಪೋಷಕರು ನೀಡಿದ ಒಪ್ಪಿಗೆಯನ್ನು ‘ಪರಿಶೀಲಿಸುವ’ ಅಗತ್ಯವಿದೆ ಎಂದು ನಿಯಮಗಳು ಹೇಳುತ್ತವೆ. ಇನ್ನು ವಿಶೇಷ ಚೇತನರ ಸಾಮಾಜಿಕ ಜಾಲತಾಣ ತೆರೆಯುವಾಗಲೂ ವ್ಯಕ್ತಿಯ ಒಪ್ಪಿಗೆ ಪಡೆಯಲಾಗಿದೆಯೇ ಎಂದು ಪರಿಶೀಲಿಸುವುದು ಅಗತ್ಯವಾಗಿದೆ.
ಮಗುವಿನ ಯಾವುದೇ ವೈಯಕ್ತಿಕ ಡೇಟಾ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರಕಟಿಸುವ ಮೊದಲು ಪೋಷಕರ ಒಪ್ಪಿಗೆ ಇದೆಯೇ ಎಂದು ಪರಿಶೀಲಿಸುವುದು ಮುಖ್ಯವಾಗಿದೆ ಎಂದು ಕೂಡಾ ನಿಯಮ ಹೇಳುತ್ತದೆ.
ಇನ್ನು ಈ ಕರಡು ನಿಯಮಗಳ ಪ್ರಕಾರ ಬಳಕೆದಾರರ ಕೆಲವು ಡೇಟಾಗಳನ್ನು ಅಳಿಸಬಹುದಾಗಿದೆ. ಒಂದು ಸಂಸ್ಥೆಯು ಬಳಕೆದಾರರ ವೈಯಕ್ತಿಕ ಡೇಟಾವನ್ನು ಸಂಗ್ರಹಿಸಿದರೆ ಆ ಬಗ್ಗೆ ಪಾರದರ್ಶಕತೆ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಒಂದು ವೇಳೆ ಬಳಕೆದಾರರ ಯಾವುದೇ ಡೇಟಾ ದುರ್ಬಳಕೆಯಾದರೆ ಸುಮಾರು 250 ಕೋಟಿ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ.
