ಬಿಹಾರದಲ್ಲಿ ಸೇತುವೆಗಳ ನಿರ್ಮಿಸಿದ ನಿರ್ಮಾಣ ಸಂಸ್ಥೆ ಎಸ್‌ಪಿ ಸಿಂಗ್ಲಾ ಗ್ರೂಪ್ ಆಫ್ ಕಂಪನಿಗಳ ಕಚೇರಿಗಳ ಮೇಲೆ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಪಾಟ್ನಾ, ದೆಹಲಿ ಮತ್ತು ಹರಿಯಾಣದ ಪಂಚಕುಲದಲ್ಲಿ ಶುಕ್ರವಾರ ಏಕಕಾಲದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಡಿ ಅಧಿಕಾರಿಗಳು ಪಾಟ್ನಾದ ಬೋರಿಂಗ್ ರೋಡ್ ಪ್ರದೇಶದಲ್ಲಿರುವ ಎಸ್‌ಪಿ ಸಿಂಗ್ಲಾ ಗ್ರೂಪ್ ಆಫ್ ಕಂಪನಿಗಳ ಕಚೇರಿಗೆ ತಲುಪಿ ಶೋಧ ನಡೆಸಿದರು. ಪಾಟ್ನಾ, ಝಂಜರ್‌ಪುರ, ದೆಹಲಿ ಮತ್ತು ಪುಣೆಯಲ್ಲಿ ಬಿಹಾರ-ಕೇಡರ್ ಐಎಎಸ್ ಅಧಿಕಾರಿ ಸಂಜೀವ್ ಹನ್ಸ್ ಮತ್ತು ಆರ್‌ಜೆಡಿ ಮಾಜಿ ಶಾಸಕ ಗುಲಾಬ್ ಯಾದವ್ ಅವರಿಗೆ ಸೇರಿದ ಸ್ಥಳಗಳ ಮೇಲೆ ಕೇಂದ್ರ ಸಂಸ್ಥೆ ದಾಳಿ ನಡೆಸಿದ ನಂತರ ಈ ಶೋಧಗಳನ್ನು ನಡೆಸಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಸಂಜೀವ್ ಹನ್ಸ್ ಅವರ ಮನೆಯಿಂದ ಐಷಾರಾಮಿ ಬ್ರಾಂಡ್‌ಗಳಾದ ರಾಡೋ ಮತ್ತು ರೋಲೆಕ್ಸ್ ಸೇರಿದಂತೆ 15 ವಾಚ್‌ಗಳು ಮತ್ತು ಸುಮಾರು 1.1 ಕೆಜಿ ಚಿನ್ನಾಭರಣಗಳನ್ನು ಇಡಿ ಬುಧವಾರ ವಶಪಡಿಸಿಕೊಂಡಿದೆ.
ಸಿಂಗ್ಲಾ ಗ್ರೂಪ್ ಆಫ್ ಕಂಪನಿಗಳ ಆವರಣದ ಮೇಲಿನ ದಾಳಿಗಳು ಸಂಜೀವ್ ಹನ್ಸ್ ಮತ್ತು ಮಾಜಿ ಆರ್‌ಜೆಡಿ ಶಾಸಕ ಸಂಜೀವ್ ಯಾದವ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಈ ಹಿಂದೆ ನಡೆಸಲಾದ ದಾಳಿಗಳೊಂದಿಗೆ ಸಂಬಂಧ ಹೊಂದಿವೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಬಿಹಾರ | ಮತ್ತೊಂದು ಸೇತುವೆ ಕುಸಿತ; ಮೂರು ವಾರಗಳಲ್ಲಿ 13ನೇ ಪ್ರಕರಣ!
ಸಂಜೀವ್ ಹನ್ಸ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ರಾಜ್ಯ ರಾಜಧಾನಿಯ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಹಲವಾರು ಹಿರಿಯ ಅಧಿಕಾರಿಗಳು ಮತ್ತು ಪತ್ರಕರ್ತರ ಹೆಸರನ್ನು ಒಳಗೊಂಡ ಡೈರಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಅಕ್ರಮದಲ್ಲಿ ಇವರೂ ಕೂಡಾ ಲಾಭ ಪಡೆದವರೇ ಎಂಬ ಬಗ್ಗೆ ತನಿಖೆ ನಡೆಯಲಿದೆ.
ಬಿಹಾರ ರಾಜ್ಯ ಪುಲ್ ನಿರ್ಮಾಣ್ ನಿಗಮ್ ಲಿಮಿಟೆಡ್‌ನ (BRPNNL) ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಹನ್ಸ್ ಅವರು ಲಂಚವನ್ನು ಪಡೆದು ಎಸ್‌ಪಿ ಸಿಂಗ್ಲಾ ಗ್ರೂಪ್‌ಗೆ ಬಹು ಸೇತುವೆ ಯೋಜನೆಯ ಟೆಂಡರ್‌ಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇಡಿ ಅಧಿಕಾರಿಗಳು ಈ ಹಣಕಾಸು ವಹಿವಾಟಿನ ಸಾಕ್ಷ್ಯವನ್ನೂ ವಶಪಡಿಸಿಕೊಂಡಿದ್ದಾರೆ.
ಎಸ್‌ಪಿ ಸಿಂಗ್ಲಾ ಗ್ರೂಪ್ ಆಫ್ ಕಂಪನಿ ಬಿಹಾರದ ಭಾಗಲ್‌ಪುರದ ಸುಲ್ತಂಗಂಜ್‌ನಲ್ಲಿ ಆಗುವನಿ ಸೇತುವೆಯ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ನಿರ್ವಹಿಸಿದೆ. ಆಗುವನಿ ಘಾಟ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಒಂದು ಭಾಗ ಕುಸಿದ ನಂತರ ಈ ಕಂಪನಿಯು ಹೆಚ್ಚು ಸುದ್ದಿಯಾಗಿದೆ.
ಭಾಗಲ್ಪುರ ಜಿಲ್ಲೆಯಲ್ಲಿ ಗಂಗಾ ನದಿಯ ಮೇಲೆ ಸುಮಾರು 1,716 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಚತುಷ್ಪಥ ಸೇತುವೆ 2023ರ ಜೂನ್‌ನಲ್ಲಿ ಕುಸಿದಿತ್ತು. ನಿರ್ಮಾಣದ ಸಮಯದಲ್ಲಿ ಈ ಸೇತುವೆ ಎರಡು ಬಾರಿ ಕುಸಿದಿದೆ. ಇದಾದ ಬಳಿಕ ಬಿಹಾರದಲ್ಲಿ ಹಲವಾರು ಸೇತುವೆಗಳು ಕುಸಿತಗೊಂಡಿದೆ. ಆದ್ದರಿಂದ ಈ ಸಂಸ್ಥೆಯ ಮೇಲೆ ನಡೆದ ಇಡಿ ದಾಳಿ ಗಮನ ಸೆಳೆದಿದೆ.
Bridge in Bihar collapses before inauguration.
Seventh bridge collapse since 2023 in Bihar.
Second in 2024. pic.twitter.com/7G4E8CVQkK
— Jeet Mashru (@mashrujeet) June 18, 2024