ಕೇರಳದ ವಯನಾಡು ದುರಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಕಣ್ಣೀರೊಂದೆ ಉಳಿದಿದ್ದು, ತಮ್ಮ ಸಂಬಂಧಿಕರನ್ನು ಕಳೆದುಕೊಂಡು ಅನಾಥರಾಗಿ ನಿಂತ ಜನರ ರೋದನೆ ಮುಗಿಲು ಮುಟ್ಟಿದೆ.
ಚೋರಲ್ ಮಲ ವ್ಯಾಪ್ತಿಯ ಮುಂಡಕೈ, ಅಟ್ಟಮಲ, ಪುದುಮಲ, ಸೂಜಿಪಾರಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತ, ಯಾವಾಗಲೂ ಗಿಜಿಗುಡುತಿತ್ತು. ಮಂಜು ಮುಸುಕಿದ ಬೆಟ್ಟ ಗುಡ್ಡಗಳ ಆ ಸೊಬಗನ್ನು ಕಣ್ತುಂಬಿಕೊಳ್ಳಲು ದೂರದೂರಿನಿಂದ ಪ್ರವಾಸಿಗರು ಬರುತ್ತಿದ್ದರು.
“ಭೂಕುಸಿತ, ಪ್ರವಾಹದೊಡನೆ ಊರಿಗೆ ಊರೇ ಕೊಚ್ಚಿಕೊಂಡು ಹೋದಾಗ ಉಳಿದಿರುವುದು ಅವಶೇಷ ಮಾತ್ರ. ಇದು ನನ್ನದು, ನನ್ನ ಮನೆ, ನಮ್ಮವರು ಎನ್ನಲು ಏನಿಲ್ಲ. ಇಲ್ಲಿ ಜನ ಇದ್ದರಾ, ಇದಾರ ಎಂಬ ಮಾತುಗಳು ಇಲ್ಲವೇ ಇಲ್ಲ. ಬರೀ ನೆನಪು ಮಾತ್ರ ಉಳಿದಿದೆ. ಕಣ್ಣೀರು ಮಾತ್ರ ನಮ್ಮದಾಗಿದೆ” ಎನ್ನುತ್ತಾರೆ ದುರಂತದಲ್ಲಿ ತಮ್ಮವರ ಕಳೆದುಕೊಂಡವರು.

“ಕುಟುಂಬ ಕುಟುಂಬಗಳೇ ಕಣ್ಮರೆ ಆದಾಗ ಅಲ್ಲಿನ ಅಸ್ತಿತ್ವವೇ ಇಲ್ಲದಾಗಿದೆ. ದುರಂತದ ಗ್ರಾಮಗಳ ನೆನೆದರೆ ಸಾಕು ಎದೆ ಜಲ್ಲೆನ್ನುತ್ತದೆ. ಹೃದಯವಿದ್ರಾವಕ ಘಟನೆಯನ್ನು ನೇರವಾಗಿ ಕಂಡರೆ, ನರಕ ಎಂದರೆ ಇದೇ ಇರಬಹುದು ಎನ್ನುವಷ್ಟು ಘೋರವಾಗಿದೆ ಇಲ್ಲಿನ ಸ್ಥಿತಿಗತಿ. ಇರುವ ನಾಲ್ಕು ದಿನದಲ್ಲಿ ಯಾವುದೂ ನನ್ನದಲ್ಲ, ನಾನು, ನನ್ನದು ಎನ್ನುವುದೆಲ್ಲ ಬರೀ ಭ್ರಮೆ ಅನ್ನುವುದನ್ನು ಪ್ರಕೃತಿ ತೋರಿಸಿಕೊಟ್ಟಿದೆ. ಇಲ್ಲಿ ಪ್ರಕೃತಿಯೊಂದೇ ಶಾಶ್ವತ ಹೊರತು ನಾವ್ಯಾರೂ ಅಲ್ಲ ಎನ್ನುವುದನ್ನು ಸಾಕ್ಷೀಕರಿಸಿದೆ” ಎಂದು ಕಣ್ಣೀರು ಹಾಕುತ್ತಾರೆ ಸ್ಥಳೀಯರು.

ಅಟ್ಟಮಲ ನಿವಾಸಿ ಹಾಗೂ ಘಟನೆಯ ಪ್ರತ್ಯಕ್ಷದರ್ಶಿ ವಿನೋದ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಮಧ್ಯರಾತ್ರಿ ಜಾನುವಾರುಗಳ ಆಕ್ರಂದನಕ್ಕೆ ಹೊರಗೆ ಬಂದು ಕಾಪಾಡಲು ಮುಂದಾದಾಗ ನೀರಿನ ಹರಿವು ಕಾಣಿಸಿತು. ಕೂಡಲೇ ಕುಟುಂಬ ಸಮೇತ ಮುಂದಿದ್ದ ಬೆಟ್ಟದ ಮೇಲೆ ಏರಿ ಪ್ರಾಣ ಉಳಿಸಿಕೊಂಡೆವು. ನೀರು ಬಂದಂತೆಲ್ಲಾ ಅಕ್ಕ ಪಕ್ಕದ ಜನ ಸಹಾಯಕ್ಕೆ ಕೂಗಿಕೊಳ್ಳುತ್ತಿದ್ದರು. ಆದರೆ ಏನೂ ಮಾಡುವ ಸ್ಥಿತಿ ಇರಲಿಲ್ಲ” ಎಂದು ಮರುಗಿದರು.

“ನಮ್ಮ ಸ್ನೇಹಿತರಾದ ಪ್ರಜೀಶ್ ಹಾಗೂ ಶರತ್ ಇಬ್ಬರು ಮೊದಲು ಪ್ರವಾಹ ಬಂದಾಗ ನಮ್ಮೊಟ್ಟಿಗೆ ಇದ್ರು. ಮತ್ತೆ ಇನ್ನೊಂದು ಸಲ ಪ್ರವಾಹ ಬರುವ ಸಮಯದಲ್ಲಿ ಮುಂಡಕೈ ಸೇತುವೆ ಕಡೆಗೆ ಬೈಕ್ ತಕೊಂಡು ಹೋಗಿದ್ದಾರೆ. ಅಲ್ಲಿ ನೀರಿನ ಹೊಡೆತಕ್ಕೆ ಸೇತುವೆ ಸಮೇತ ಕೊಚ್ಚಿಕೊಂಡು ಹೋಗಿದ್ದಾರೆ. ಪ್ರಜೀಶ್ ಮೃತದೇಹ ಅಟ್ಟಮಲದಲ್ಲಿ ಸಿಕ್ಕಿದೆ, ಶರತ್ ದೇಹ ಸಿಕ್ಕಿಲ್ಲ. ಅದರ ಹುಡುಕಾಟದಲ್ಲಿ ಇದ್ದೀವಿ” ಎಂದು ನೊಂದುಕೊಂಡರು.

ಮಹೇಶ್ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಪ್ರವಾಹ ಒಂದು ಸಲ ಮೂರು ಸಲ ಬಂದಿದ್ದು, ಅದರ ಶಬ್ದ ಹೇಳಲು ಅಸಾಧ್ಯ. ಆ ಸಮಯದಲ್ಲಿ ಏನು ಮಾಡಬೇಕು, ಏನಾಗುತ್ತಿದೆ ಒಂದೂ ತಿಳಿಯದಂತಾಯಿತು. ನೀರು ಹರಿದು ಬರುತ್ತಿರುವುದನ್ನು ಕಂಡು ತಂದೆ, ತಾಯಿ, ತಂಗಿ ಎಲ್ಲರೂ ಮನೆಯೊಳಗೆ ಕೂತೆವು. ಮನೆಯಲ್ಲೂ ನೀರು ತುಂಬಿದಾಗ ಮನೆಯ ಮೇಲಿನ ಶೀಟ್ ಒಡೆದು ಹೊರಗೆ ಬಂದಾಗ ಅಷ್ಟರಲ್ಲಿ ಅಕ್ಕ-ಪಕ್ಕದ ಮನೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಯಾರ ನೆರವಿಗೆ ಹೋಗಲು ಸಾಧ್ಯವಾಗಲಿಲ್ಲ. ನೀರು ಹೋಗಲು ಜಾಗವಿಲ್ಲದೆ ಮುಂಡಕೈ ಕಡೆಯಿಂದ ಬಂದ ನೀರು ಪುದುಮಲ ಬೆಟ್ಟದ ಕಡೆಯಿಂದ ವಾಪಸ್ ಬಂದು ನಮ್ಮ ಊರನ್ನೂ ಕೊಚ್ಚಿಕೊಂಡು ಹೋಗಿದೆ. ಇನ್ನು ಶಿವ ದೇವಾಲಯದಲ್ಲಿ ಅರ್ಚಕರು ಇದ್ರು, ಅವರು ಬೆಳಗಾಗುವಷ್ಟರಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸುಮಾರು 30 ಕಿಮೀ ದೂರದಲ್ಲಿ ಅವರ ಮೃತದೇಹ ಸಿಕ್ಕಿದೆ. ದೇವಸ್ಥಾನ ಏನೂ ಉಳಿದಿಲ್ಲ. ಎಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ” ಎಂದು ಸಂಕಟ ವ್ಯಕ್ತಪಡಿಸಿದರು.

ಮೋಹನ್ ನಂಬಿಯಾನೆ ಮಾತನಾಡಿ, “ರಾತ್ರಿ ಸಮಯದಲ್ಲಿ ನಡೆದ ಘಟನೆ ಇದು. ಆಗ ಕರೆಂಟ್ ಕೂಡ ಇರಲಿಲ್ಲ. ಭಾರೀ ಶಬ್ದ ಕೇಳಿಸುತ್ತಿತ್ತು. ಒಮ್ಮೆಲೇ ನುಗ್ಗಿದ ನೀರು ಬಂಡೆ ಕಲ್ಲು, ಮರ, ಮಣ್ಣಿನ ಜೊತೆ ಊರಿಗೆ ಊರೇ ಕೊಚ್ಚಿ ಹೋಯ್ತು. ಅದರಲ್ಲಿ ನನ್ನ ಕುಟುಂಬದ 17 ಮಂದಿಯೂ ಕಣ್ಮರೆಯಾದರು. ಈಗ ಕೆಲವೇ ಕೆಲವರ ದೇಹ ಸಿಕ್ಕಿದೆ. ಇನ್ನುಳಿದವರ ಯಾವ ಮಾಹಿತಿಯೂ ಇಲ್ಲ. ನಾವೊಂದು ಮೂರು ಮಂದಿ ಮಾತ್ರ ಬದುಕುಳಿದಿದ್ದು, ಇನ್ನೆಲ್ಲರೂ ನೀರು ಪಾಲಾಗಿದ್ದಾರೆ” ಎಂದು ಅಳಲನ್ನು ತೋಡಿಕೊಂಡರು.

ತಮಿಳುನಾಡು ಮೂಲದ ಕುಮಾರ್ ಮಾತನಾಡಿ, “ಇಲ್ಲಿ ನನ್ನ ದೊಡ್ಡಮ್ಮ, ದೊಡ್ಡಮ್ಮನ ಮಕ್ಕಳು, ಸೊಸೆಯಂದಿರು, ಮಕ್ಕಳು ವಾಸವಾಗಿದ್ದರು. ಇಲ್ಲಿಯೇ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಭೂಕುಸಿತ ದುರಂತದಲ್ಲಿ ಅಣ್ಣ ತಮ್ಮಂದಿರ ಕುಟುಂಬ ಸೇರಿ ಒಟ್ಟು ಒಂಬತ್ತು ಮಂದಿ ಜಲಸಮಾಧಿಯಾಗಿದ್ದಾರೆ. ಅದರಲ್ಲಿ ನಾಲ್ಕು ಮೃತದೇಹ ಸಿಕ್ಕಿವೆ. ಇನ್ನೆರೆಡು ಮೃತದೇಹಗಳು ಗುರುತಿಸಲಾಗದ ಸ್ಥಿತಿಯಲ್ಲಿವೆ. ಡಿಎನ್ಎ ಪರೀಕ್ಷೆ ಮಾಡುತ್ತಿದ್ದಾರೆ. ಇನ್ನು ಮೂರು ಜನರ ಮೃತದೇಹ ಸಿಕ್ಕಿಲ್ಲ” ಎಂದು ದುಃಖಿತರಾದರು.

ಈ ಸುದ್ದಿ ಓದಿದ್ದೀರಾ? ವಯನಾಡು ಭೂಕುಸಿತದಿಂದ ಸ್ಥಳೀಯರ ಜಲಸಮಾಧಿ; ಮಾನವ ಕುಲಕ್ಕೇ ಎಚ್ಚರಿಕೆಯ ಕರೆಗಂಟೆ
ವೈಷ್ಣವ್ ಮಾತನಾಡಿ, “ನಾವು ಓದುತ್ತಿರುವುದರಿಂದ ಬೇರೆ ಕಡೆ ಇದ್ದೆವು. ಇಲ್ಲಿ ನಮ್ಮ ಮನೆಯವರು ಇದ್ದರು. ಪ್ರವಾಹ ಬಂದಾಗ ಅವರೆಲ್ಲ ಕೊಚ್ಚಿಕೊಂಡು ಹೋಗಿದ್ದಾರೆ. ಯಾರ ಗುರುತೂ ಸಿಗುತ್ತಿಲ್ಲ. ಮೃತದೇಹಗಳು ಇವೆ. ಅವುಗಳನ್ನೆಲ್ಲ ನೋಡಿದಾಗ ಯಾರು ಎಂಬುದು ತಿಳಿಯುತ್ತಿಲ್ಲ. ಎಲ್ಲರೂ ಕಣ್ಮರೆಯಾಗಿದ್ದಾರೆ. ಇನ್ನೂ ಹುಡುಕಾಟದಲ್ಲಿದ್ದೇವೆ. ಆದರೆ ಯಾವ ಮಾಹಿತಿಯೂ ಇಲ್ಲ.
ಎಲ್ಲರನ್ನೂ ಕಳೆದುಕೊಂಡಿದ್ದೀವಿ” ಎಂದು ತಮ್ಮ ಅಳಲು ತೋಡಿಕೊಂಡರು.
