ಇಂಗ್ಲಿಷ್ ಮಾಧ್ಯಮದ ಕೋರ್ಸ್‌ಗಳ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಯಲ್ಲೇ ಉತ್ತರ ಬರೆಯಲು ಯುಜಿಸಿ ಒದಗಿಸುತ್ತಿರುವ ಅವಕಾಶವು ನಾಳೆ ಹಿಂದಿಯಿಂದ ಕನ್ನಡಕ್ಕೆ ಎಂಬಂತೆ ಆಗಲೂಬಹುದು ಎಂದು ಹಿರಿಯ ಭಾಷಾಶಾಸ್ತ್ರಜ್ಞ ಮತ್ತು ಚಿಂತಕ ಡಾ. ಕೆ.ವಿ ನಾರಾಯಣ ಸಂದೇಹ ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಸರ್ಕಾರದ ಒಳ ಅಜೆಂಡಾ ಏನು ಎಂಬುದನ್ನು ಅರಿತುಕೊಂಡು ಅದು ಉಂಟುಮಾಡಬಹುದಾದ ಪರಿಸ್ಥಿತಿಯನ್ನು ಮುಂದಾಗಿ ಗ್ರಹಿಸಿ ತಕ್ಕ ಒಳದಾರಿಗಳನ್ನು ಕಟ್ಟಿಕೊಳ್ಳಬೇಕು,” ಎಂದೂ ಅವರು ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಇಂಗ್ಲಿಷ್ ಮಾಧ್ಯಮದ ಕೋರ್ಸ್‌ಗೂ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಯಲ್ಲೇ ಉತ್ತರ ಬರೆಯಲು ಅವಕಾಶ ನೀಡುವಂತೆ ವಿಶ್ವವಿದ್ಯಾಲಯಗಳಿಗೆ ‘ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್’ (ಯುಜಿಸಿ) ಎರಡು ದಿನಗಳ ಹಿಂದೆ ಪತ್ರ ಬರೆದಿತ್ತು. ಈ ಕುರಿತು ಈ ದಿನ.ಕಾಮ್ ಡಾ. ಕೆ.ವಿ ನಾರಾಯಣ ಅವರ ಪ್ರತಿಕ್ರಿಯೆ ಕೋರಿತ್ತು. ಅವರು ಪ್ರತಿಕ್ರಿಯೆ ನೀಡಿದ್ದಾರೆ.
“ಈಗ ಇಂಗ್ಲಿಷಿನಿಂದ ಕನ್ನಡಕ್ಕೆ ಎಂಬ ದಾರಿ ಇದೆ. ನಾಳೆ ಇದು ಹಿಂದಿಯಿಂದ ಕನ್ನಡಕ್ಕೆ ಎಂಬಂತೆ ಆಗಲೂಬಹುದು. ಪುಸ್ತಕಗಳನ್ನು ಕನ್ನಡದಲ್ಲಿ ಸಿದ್ಧಪಡಿಸುವ ಬದಲು ಕೇಂದ್ರ ಒದಗಿಸುವ ಹಿಂದಿ ಪುಸ್ತಕಗಳನ್ನು ಕನ್ನಡಕ್ಕೆ ರವಾನಿಸುವ ದಾರಿ ಒತ್ತಾಯದಿಂದ ತೆರೆದುಕೊಳ್ಳಲೂಬಹುದು. ಇದರಲ್ಲಿ ತಪ್ಪೇನಿದೆ ಎಂದು ಕೇಳುವವರೂ ಇದ್ದಾರೆ” ಎಂದು ಡಾ.ನಾರಾಯಣ ಹೇಳಿದ್ದಾರೆ.
“ಯುಜಿಸಿ ಹೇಳುತ್ತಿರುವ ಸ್ಥಳೀಯ ಎಂದರೆ, ಆಯಾ ರಾಜ್ಯದ ಅಧಿಕೃತ ಭಾಷೆ ಎಂಬ ಸ್ಪಷ್ಟನೆ ಅಗತ್ಯ. ಇಂಗ್ಲಿಷಿನಲ್ಲಿ ಪಾಠ ಕೇಳಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ ಎಂದು ಹೇಳುತ್ತಿದ್ದರೆ ಹಲವು ವಿಷಯಗಳಲ್ಲಿ ಈ ಅವಕಾಶ ದಶಕಗಳಿಂದ ಜಾರಿಯಲ್ಲಿದೆ. ಇದು ಹೊಸದಾಗಿ ಬಂದದ್ದಲ್ಲ” ಎಂದು ಅವರು ತಿಳಿಸಿದ್ದಾರೆ.
ಡಾ. ಕೆವಿಎನ್ ಅವರ ಪ್ರತಿಕ್ರಿಯೆಯ ಪೂರ್ಣ ಪಠ್ಯ ಈ ಕೆಳಕಂಡಂತಿದೆ
- ಇದು (ಯುಜಿಸಿ ಅಧ್ಯಕ್ಷರು ವಿವಿಗಳಿಗೆ ಬರೆದಿರುವ ಪತ್ರ) ಸಲಹೆಯೋ ಸೂಚನೆಯೋ ಗೊತ್ತಿಲ್ಲ
- ಸ್ಥಳೀಯ ಎಂದರೆ ರಾಜ್ಯದ ಅಧಿಕೃತ ಭಾಷೆ ಎಂಬ ಸ್ಪಷ್ಟನೆ ಅಗತ್ಯ. ಇಲ್ಲದಿದ್ದರೆ ಸಂವಿಧಾನ ಮಾನ್ಯ ಮಾಡುವ ಇಪ್ಪತ್ತೆರಡು ಭಾಷೆಗಳಲ್ಲಿ ಯಾವುದಾದರೂ ಆಗಬಹುದು ಎಂದು ವ್ಯಾಖ್ಯಾನಿಸಲು ಸಾಧ್ಯವಿದೆ.
- ಕರ್ನಾಟಕದ ಕಾಲೇಜೊಂದರಲ್ಲಿ ಮಧ್ಯಪ್ರದೇಶದ ವಿದ್ಯಾರ್ಥಿ ಓದುತ್ತಿದ್ದರೆ ಅವರು ಹಿಂದಿಯಲ್ಲಿ ಉತ್ತರ ಬರೆಯಲು ಅವಕಾಶವಿದೆ ಎಂದು ತಿಳಿಯಬೇಕೆ?
- ಕನ್ನಡ ಓದಿ ಬರೆಯುವ ಮಕ್ಕಳನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ಅವರು ಇಂಗ್ಲಿಷಿನಲ್ಲಿ ಪಾಠ ಕೇಳಿ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ ಎಂದು ಹೇಳುತ್ತಿದ್ದರೆ ಹಲವು ವಿಷಯಗಳಲ್ಲಿ ಈ ಅವಕಾಶ ದಶಕಗಳಿಂದ ಜಾರಿಯಲ್ಲಿದೆ. ಇದು ಹೊಸದಾಗಿ ಬಂದದ್ದಲ್ಲ.
- ಕನ್ನಡದಲ್ಲಿ ವಿಷಯವನ್ನು ಅರಿತುಕೊಳ್ಳಲು ಅನುಕೂಲವಾಗುವ ವಾತಾವರಣವನ್ನು ಉಂಟುಮಾಡಲು ತಕ್ಕ ಕ್ರಮಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿಲ್ಲ.
- ಈಗ ಇಂಗ್ಲಿಷಿನಿಂದ ಕನ್ನಡಕ್ಕೆ ಎಂಬ ದಾರಿ ಇದೆ. ನಾಳೆ ಇದು ಹಿಂದಿಯಿಂದ ಕನ್ನಡಕ್ಕೆ ಎಂಬಂತೆ ಆಗಲೂಬಹುದು. ಪುಸ್ತಕಗಳನ್ನು ಕನ್ನಡದಲ್ಲಿ ಸಿದ್ಧಪಡಿಸುವ ಬದಲು ಕೇಂದ್ರ ಒದಗಿಸುವ ಹಿಂದಿ ಪುಸ್ತಕಗಳನ್ನು ಕನ್ನಡಕ್ಕೆ ರವಾನಿಸುವ ದಾರಿ ಒತ್ತಾಯದಿಂದ ತೆರೆದುಕೊಳ್ಳಲೂಬಹುದು. ಇದರಲ್ಲಿ ತಪ್ಪೇನಿದೆ ಎಂದು ಕೇಳುವವರೂ ಇದ್ದಾರೆ.
- ಕೊನೆಯದಾಗಿ, ಮೌಲ್ಯಮಾಪನದ ಹಂತದಲ್ಲಿ ಕೆಲವು ಅಡ್ಡಿಗಳಿವೆ. ಕನ್ನಡದಲ್ಲಿ ಉತ್ತರ ಬರೆದರೆ ಆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಅಧ್ಯಾಪಕರು ದೊರೆಯುತ್ತಿಲ್ಲ ಇಲ್ಲವೇ ಅವರು ಸಿದ್ಧರಿಲ್ಲ ಎಂಬ ಮಾತನ್ನೂ ಕೇಳಿದ್ದೇನೆ. ಒಂದುವೇಳೆ ಮೌಲ್ಯಮಾಪನ ಮಾಡಿದರೂ ಇಂಗ್ಲಿಷ್ ನಲ್ಲಿ ಬರೆದರೆ ದೊರೆಯುವಷ್ಟು ಅಂಕಗಳು ದೊರೆಯುವುದಿಲ್ಲ, ತಾರತಮ್ಯಕ್ಕೆ ಒಳಗಾಗುತ್ತೇವೆ ಎಂವ ಆತಂಕ ವಿದ್ಯಾರ್ಥಿಗಳಲ್ಲಿ ನೆಲೆಯೂರಲೂಬಹುದು.
ಯುಜಿಸಿ ಪತ್ರದಲ್ಲಿ ಕೆಲವು ಪ್ರಯೋಜನಗಳೂ ಇವೆ. ಆದರೆ, ಅವುಗಳನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಎಚ್ಚರದಿಂದ ಹೆಜ್ಜೆ ಇಡಬೇಕು ಎಂದಿರುವ ಅವರು ಸಲಹೆಗಳನ್ನೂ ಸೂಚಿಸಿದ್ದಾರೆ
- ನಿಡುಗಾಲದಿಂದ ಕನ್ನಡ ಉನ್ನತ ಶಿಕ್ಷಣದಲ್ಲಿ ಕಲಿಕೆಯ ನುಡಿ ಆಗಬೇಕು ಎಂದು ಹೇಳುತ್ತಿದ್ದೇವೆ. ಅದು ಸಾಧ್ಯವಾಗಲು ಯುಜಿಸಿಯ ಈ ಸೂಚನೆ ನೆರವಾಗಬಲ್ಲುದು.
- ಉತ್ತರ ಬರೆಯುವ ಅವಕಾಶದ ಜೊತೆಗೆ ತರಗತಿಗಳಲ್ಲಿ ಪಾಠ ಕೇಳುವ ಮತ್ತು ಪಠ್ಯ ಹಾಗೂ ಪೂರಕ ಪಠ್ಯಗಳನ್ನು ಕನ್ನಡದಲ್ಲಿ ಓದುವ ಅವಕಾಶವನ್ನು ಹುಟ್ಟುಹಾಕಲು ಒಂದು ಅವಕಾಶವನ್ನು ರೂಪಿಸಿಕೊಳ್ಳಲು ಈಗ ಸಾಧ್ಯವಾಗಬಹುದು.
- ಈಗ ಇರುವ ಪಬ್ಲಿಕ್ ಮತ್ತು ಖಾಸಗಿ ಶಿಕ್ಷಣ ವ್ಯವಸ್ಥೆಯ ನಡುವೆ ಇರುವ ಕಂದರವನ್ನು ಇಲ್ಲವಾಗಿಸಲು ಈ ಸೂಚನೆಯ ನೆರವನ್ನು ಪಡೆದುಕೊಳ್ಳಬಹುದು. ಏಕೆಂದರೆ ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆಯುವ ಎಲ್ಲರಿಗೂ ಸಮಾನ ಅವಕಾಶಗಳನ್ನು ಇದರಿಂದ ರೂಪಿಸಬಹುದು. ಇಂಗ್ಲಿಷ್ ಅನ್ನು ಕಲಿಕೆಯ ನುಡಿಯನ್ನಾಗಿ ಕೆಳಹಂತದಿಂದಲೂ ಪಡೆದುಕೊಂಡು ಬಂದವರು ಈಗ ಹೊಂದಿರುವ ಆರಂಭಿಕ ನಿರಾಳತೆಗಳು ಮತ್ತು ಕನ್ನಡದಲ್ಲಿ ಕಲಿತವರಲ್ಲಿ ಇರುವ ಆತಂಕಗಳು ಆಗ ಇಲ್ಲವಾಗುತ್ತವೆ.
- ರಾಜ್ಯ ಸರಕಾರ ತನ್ನ ಜನಪರ ಧೋರಣೆಯನ್ನು ಗಟ್ಟಿಯಾಗಿ ಜಾರಿಗೆ ಕೊಡುವುದಾದರೆ ಆಗ ಇಂಗ್ಲಿಷ್ ಮೂಲಕ ಮಾತ್ರವೇ ಕಲಿಯುವುದರಿಂದ ಶಿಕ್ಷಣವು ಹುಟ್ಟು ಹಾಕಿರುವ ಅಸಮಾನತೆಯನ್ನು ಇಲ್ಲವಾಗಿಸಬಹುದು.
- ಕೇಂದ್ರ ಸರ್ಕಾರದ ಒಳ ಅಜೆಂಡಾ ಏನು ಎಂಬುದನ್ನು ಅರಿತುಕೊಂಡು ಅದು ಉಂಟುಮಾಡಬಹುದಾದ ಪರಿಸ್ಥಿತಿಯನ್ನು ಮುಂದಾಗಿ ಗ್ರಹಿಸಿ ತಕ್ಕ ಒಳದಾರಿಗಳನ್ನು ಕಟ್ಟಿಕೊಳ್ಳಬೇಕು.
ಈ ಸುದ್ದಿ ಓದಿದ್ದೀರಾ?: ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರಲಿ: ಯುಜಿಸಿ