ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಮೊಮ್ಮಗಳನ್ನು ಆಕೆಯ ಪತಿ ಹತ್ಯೆಗೈದಿರುವ ಘಟನೆ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.
ಮಾಂಝಿ ಅವರ ಮೊಮ್ಮಗಳು ಸುಷ್ಮಾ ದೇವಿ ಅವರನ್ನು ಆಕೆಯ ಪತಿ ರಮೇಶ್ ಎಂಬಾತ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.
ದಂಪತಿಗಳು ಗಯಾ ಜಿಲ್ಲೆಯ ಟಿಟುವಾ ಗ್ರಾಮದಲ್ಲಿ ವಾಸವಾಗಿದ್ದರು. ರಮೇಶ್ ವೃತ್ತಿಯಲ್ಲಿ ಚಾಲಕನಾಗಿದ್ದಾನೆ ಎಂದು ಹೇಳಲಾಗಿದೆ. ಬುಧವಾರ ರಾತ್ರಿ ಮನೆಗೆ ಬಂದ ರಮೇಶ್ ಏಕಾಏಕಿ ಸುಷ್ಮಾ ದೇವಿ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿದೆ.
ಸುಷ್ಮಾ ದೇವಿ ಬೇರೊಬ್ಬ ಯುವಕನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕಾಗಿ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗಿದೆ.
ಸುಷ್ಮಾ ದೇವಿ ಮೇಲೆ ರಮೇಶ್ ಗುಂಡು ಹಾರಿಸಿದ್ದು, ಗಾಯಗೊಂಡಿದ್ದ ಸುಷ್ಮಾ ದೇವಿ ಪ್ರಜ್ಞೆ ತಪ್ಪಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿ ರಮೇಶ್ ಪರಾರಿಯಾಗಿದ್ದಾನೆ. ಕೃತ್ಯ ನಡೆದ ಸ್ಥಳದಲ್ಲಿ ಪಿಸ್ತೂಲ್ ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದಾಗ ಮನೆಯಲ್ಲಿ ಸುಷ್ಮಾ ದೇವಿ ಅವರ ಸಹೋದರಿ ಪೂನಂ ಅವರು ಕೂಡ ಇದ್ದರು. “ಸುಷ್ಮಾ ದೇವಿ ಮತ್ತು ರಮೇಶ್ ತಮ್ಮ ಕೋಣೆಯಲ್ಲಿ ಗಲಾಟೆ ಮಾಡುತ್ತಿದ್ದರು. ಆಗ, ಸುಷ್ಮಾ ದೇವಿ ಮೇಲೆ ರಮೇಶ್ ಗುಂಡು ಹಾರಿಸಿದರು” ಎಂದು ಪೂನಂ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
“ಗುಂಡೇಟಿನ ಶಬ್ದ ಕೇಳಿ ನಾನು ಸುಷ್ಮಾ ಅವರ ಕೋಣೆಗೆ ಧಾವಿಸಿದೆ. ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು” ಎಂದು ಅವರು ಹೇಳಿದ್ದಾರೆ.
“ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮತ್ತು ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಿದ್ದೇವೆ. ಶೀಘ್ರವೇ ಆರೋಪಿಯನ್ನು ಬಂಧಿಸುತ್ತೇವೆ” ಎಂದು ಗಯಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಆನಂದ್ ಕುಮಾರ್ ಹೇಳಿದ್ದಾರೆ.