ವಿಫಲ ಸಂಬಂಧಗಳಿಂದಾಗಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಲಹಾಬಾದ್ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಅರುಣ್ ಕುಮಾರ್ ಮಿಶ್ರಾ ಎಂಬವರ ಜಾಮೀನು ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಕ್ರಿಶನ್ ಪಹಲ್ ಅವರ ಪೀಠವು ಈ ಹೇಳಿಕೆ ನೀಡಿದೆ.
ಅರ್ಜಿದಾರರು ಮೂರು ಬಾರಿ ವಿವಾಹವಾಗಿದ್ದಾರೆ ಎಂಬ ಬಗ್ಗೆ ಮೊದಲೇ ಮಾಹಿತಿಯಿದ್ದರೂ ಮಹಿಳೆ ಆತನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಹೇಳಿಕೊಂಡ ಅಲಹಾಬಾದ್ ಹೈಕೋರ್ಟ್ 25 ವರ್ಷದ ಮಹಿಳೆ ಅತ್ಯಾಚಾರ ಆರೋಪ ಮಾಡಿರುವ 42 ವರ್ಷದ ವಿವಾಹಿತ ವ್ಯಕ್ತಿ ಮಿಶ್ರಾಗೆ ಜಾಮೀನು ನೀಡಿದೆ.
ಇದನ್ನು ಓದಿದ್ದೀರಾ? ಹಿಂದೂಗಳ ವಿವಾಹ ‘ಪವಿತ್ರವಾದುದ್ದು’ ವರ್ಷದಲ್ಲೇ ರದ್ದುಗೊಳಿಸಲಾಗದು: ಅಲಹಾಬಾದ್ ಹೈಕೋರ್ಟ್
ಅರ್ಜಿದಾರರ ಪರ ವಕೀಲರು ಎಫ್‌ಐಆರ್ ಆರು ತಿಂಗಳು ವಿಳಂಬವಾಗಿದೆ. ಸಂತ್ರಸ್ತರು ಅರ್ಜಿದಾರರೊಂದಿಗೆ ಒಮ್ಮತದ ಸಂಬಂಧ ಹೊಂದಿದ್ದರು ಎಂದು ವಾದಿಸಿದ್ದಾರೆ. ಮತ್ತೊಂದೆಡೆ ಸಂತ್ರಸ್ತರ ಪರ ವಕೀಲರು ಅರ್ಜಿದಾರರು ಈಗಾಗಲೇ ಮೂವರು ಮಹಿಳೆಯರನ್ನು ಮದುವೆಯಾಗಿದ್ದಾರೆ. ಬೇರೆ ಬೇರೆ ಮಹಿಳೆಯರನ್ನು ಪುಸಲಾಯಿಸಿ, ಆಕರ್ಷಿಸಿ ಲೈಂಗಿಕ ಸಂಪರ್ಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಈ ಪ್ರಕರಣದಲ್ಲಿಯೂ ಮಹಿಳೆಯರ ಮೇಲೆ ಅಲಹಾಬಾದ್ ಹೈಕೋರ್ಟ್ ಬೊಟ್ಟು ಮಾಡಿರುವಂತಿದೆ. ಹಾಗೆಯೇ ಪವಿತ್ರತೆ, ಸಂಸ್ಕೃತಿ ಎಂಬ ಅನವಶ್ಯಕ ಮಾತುಗಳನ್ನು ಹೈಕೋರ್ಟ್ ಉಲ್ಲೇಖಿಸಿದೆ. “ಈ ಪ್ರಕರಣವು ವಿಶಾಲವಾದ ಸಾಮಾಜಿಕ ಬದಲಾವಣೆಯ ಪ್ರತಿಬಿಂಬವಾಗಿದೆ. ಆತ್ಮೀಯ ಸಂಬಂಧದಲ್ಲಿ ಪವಿತ್ರತೆ ಮತ್ತು ಗಾಂಭೀರ್ಯವು ಕುಸಿತ ಕಂಡಿದೆ” ಎಂದು ಹೇಳಿಕೊಂಡಿದೆ.
