ಕೇಂದ್ರ ಸರ್ಕಾರ ನೀಡಿದ ಎಂಎಸ್‌ಪಿ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ನಾಯಕರು, ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೈತನಾಯಕ ಜಗಜಿತ್ ಸಿಂಗ್ ದಲ್ಲೇವಾಲ್,”ಎರಡೂ ಕಡೆಯ ವೇದಿಕೆಯಿಂದ ನಡೆದ ಚರ್ಚೆಯ ನಂತರ ಸರ್ಕಾರ ನೀಡಿರುವ ಪ್ರಸ್ತಾಪದಲ್ಲಿ ಏನು ಇಲ್ಲ ಎಂದು ನಿರ್ಧರಿಸಲಾಗಿದೆ. ಇದರಿಂದ ರೈತರಿಗೆ ಪ್ರಯೋಜನವಾಗುವುದಿಲ್ಲ. ಆದಕಾರಣ ನಾವು ತಿರಸ್ಕರಿಸುತ್ತೇವೆ ಎಂದು ಹೇಳಿದರು.
ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಾಂಡೇರ್ ಮಾತನಾಡಿ, ಕೇಂದ್ರವು ಚರ್ಚೆಯಲ್ಲಿ ಬೇರೆ ಏನೊ ಇದೆ ಎಂದು ಹೇಳುತ್ತಿದೆ. ಅವರು ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಯಾವುದೇ ಬೇರೆ ಪ್ರಸ್ತಾಪವನ್ನು ನೀಡಿಲ್ಲ. ದೆಹಲಿ ಚಲೋ ಮೆರವಣಿಗೆಯನ್ನು ಫೆ.21ರಂದು ಬೆಳಿಗ್ಗೆ 11 ಗಂಟೆಯಿಂದ ಪುನಃ ಆರಂಭಿಸಲಾಗುವುದು ಎಂದು ತಿಳಿಸಿದರು.
ಹರಿಯಾಣದ ಶಂಭು ಗಡಿಯಲ್ಲಿ ರೈತರನ್ನು ನಡೆಸಿಕೊಂಡ ರೀತಿ ಖಂಡನೀಯ. ರೈತರಿಗೆ ತಡೆಯೊಡ್ಡಿರುವ ಬ್ಯಾರಿಕೇಡ್‌ಗಳು ಹಾಗೂ ಆಶ್ರುವಾಯು ಪ್ರಯೋಗಿಸುತ್ತಿರುವುದರ ಸಮಸ್ಯೆಗಳನ್ನು ಚರ್ಚಿಸಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಈ ಸಮಸ್ಯೆಗಳನ್ನು ಬಗೆಹರಿಸುವುವುದಾಗಿ ಅವರು ತಿಳಿಸಿದ್ದಾರೆ. ಪಂಜಾಬ್ ಸಿಎಂ ಈ ಸಮಸ್ಯೆಗಳನ್ನು ಕೇಂದ್ರದ ಮಂತ್ರಿಗಳ ಮುಂದೆ ಇಡಬೇಕು. ಹರಿಯಾಣ ಡಿಜಿಪಿ ಕೂಡ ಪ್ರಕಟಣೆ ಹೊರಡಿಸಿ ಪೆಲಟ್ ಗನ್ ಹಾಗೂ ಅಶ್ರುವಾಯು ಶೆಲ್‌ಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ. ಈ ರೀತಿ ಮಾಡುವುದರ ವಿರುದ್ಧ ಸ್ವಯಂಪ್ರೇರಿತ ಗಂಭೀರ ಪ್ರಕರಣ ದಾಖಲಿಸಬೇಕೆಂದು ನಾವು ಸುಪ್ರೀಂ ಕೋರ್ಟಿಗೂ ಮನವಿ ಮಾಡಿದ್ದೇವೆ ಎಂದು ದಲ್ಲೇವಾಲ್ ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತವನ್ನು ಗೆಲ್ಲಿಸಿದ ಬಡವರ ಮಕ್ಕಳ ಬೆರಗಿನ ಆಟ
ಚಂಡೀಗಢದಲ್ಲಿ ರೈತರೊಂದಿಗೆ ನಡೆದ ನಾಲ್ಕನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸಚಿವರಾದ ಪಿಯೂಶ್ ಗೋಯಲ್, ಅರ್ಜುನ್ ಮುಂಡಾ ಹಾಗೂ ನಿತ್ಯಾನಂದ್ ರೈ ಕೂಡ ಭಾಗವಹಿಸಿದ್ದರು.
ಎಂಎಸ್‌ಪಿ ಖಾತರಿ ಜೊತೆಗೆ ರೈತರು ಎಂ ಎಸ್ ಸ್ವಾಮಿನಾಥನ್ ಆಯೋಗದ ಶಿಫಾರಸ್ಸುಗಳು, ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಪಿಂಚಣಿ, ಸಾಲ ಮನ್ನಾ, ವಿದ್ಯುತ್ ಶುಲ್ಕ ಇಳಿಕೆ, 2021ರಲ್ಲಿ ಲಕೀಮ್‌ಪುರ ಖೇರಿ ಗಲಭೆಯಲ್ಲಿ ರೈತರ ಮೇಲೆ ದಾಖಲಿಸಿದ್ದ ಪೊಲೀಸ್ ಪ್ರಕರಣಗಳ ರದ್ದು, 2013ರ ಭೂಸ್ವಾಧೀನ ಕಾಯ್ದೆ ಮರು ಸ್ಥಾಪನೆ ಹಾಗೂ 2020-21ರ ರೈತ ಪ್ರತಿಭಟನೆಯಲ್ಲಿ ಮೃತಪಟ್ಟ ರೈತ ಕುಟುಂಬಗಳಿಗೆ ಪರಿಹಾರ ನೀಡುವುದು ರೈತರ ಬೇಡಿಕೆಗಳಾಗಿವೆ.
ರೈತರೊಂದಿಗೆ ಮಾತುಕತೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪಿಯೂಶ್ ಗೋಯಲ್,” ಸಹಕಾರಿ ಸಂಸ್ಥೆಗಳಾದ ಎನ್ಸಿಸಿಸಿಎಫ್ ಹಾಗೂ ಎನ್ಎಎಫ್ಇಡಿ, ಪ್ರಮುಖ ಬೆಳೆ ಬೆಳೆಯುವ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಮುಂದಿನ ಐದು ವರ್ಷಗಳವರೆಗೆ ಎಂಎಸ್ಪಿಯಡಿ ಬೆಳೆಗಳನ್ನು ಖರೀದಿಸಲಿದೆ ಎಂದರು.
“ಖರೀದಿಯಲ್ಲಿ ಪ್ರಮಾಣದ ಬಗ್ಗೆ ಯಾವುದೇ ಮಿತಿಯಿರುವುದಿಲ್ಲ ಹಾಗೂ ಇದಕ್ಕಾಗಿ ಪೋರ್ಟಲ್ಅನ್ನು ಕೂಡ ಅಭಿವೃದ್ಧಿಗೊಳಿಸಲಾಗುವುದು.ಚುನಾವಣೆಗಳು ಬರಲಿದ್ದು, ನೂತನ ಸರ್ಕಾರ ರಚಿತವಾಗಲಿದೆ. ಇಂತಹ ಕೆಲವೊಂದು ಸಮಸ್ಯೆಗಳ ಬಗ್ಗೆ ಚರ್ಚೆಗಳು ಮುಂದುವರಿಯಲಿದೆ” ಎಂದು ಗೋಯಲ್ ತಿಳಿಸಿದರು.