ಕೇಂದ್ರ ಸಚಿವರು ಹಾಗೂ ರೈತ ಸಂಘಟನೆಗಳ ನಾಯಕರಿಂದ ಮಾತುಕತೆ ಮುರಿದುಬಿದ್ದ ಹಿನ್ನೆಲೆ ಇಂದು ದೇಶದ ವಿವಿಧ ಭಾಗಗಳ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಬೃಹತ್ ಮಟ್ಟದಲ್ಲಿ ‘ದೆಹಲಿ ಚಲೋ’ ನಡೆಸಲಿವೆ.
ನಿನ್ನೆ(ಫೆ.12) ನಡೆದ ಸಭೆಯಲ್ಲಿ ರೈತ ಸಂಘಟನೆಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರ್ಣಯ ಕೈಗೊಳ್ಳದ ಕಾರಣ ಮಾತುಕತೆ ವಿಫಲವಾಯಿತು. ಆದಾಗ್ಯೂ, ಹೆಚ್ಚಿನ ವಿಷಯಗಳಲ್ಲಿ ಒಮ್ಮತವನ್ನು ಸಾಧಿಸಲಾಗಿದೆ ಮತ್ತು ಸಮಿತಿಯ ರಚನೆಯ ಮೂಲಕ ಇನ್ನು ಕೆಲವನ್ನು ಪರಿಹರಿಸುವ ಸೂತ್ರವನ್ನು ಪ್ರಸ್ತಾಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ರೈತರ ಪ್ರತಿಭಟನೆ ಹಿನ್ನೆಲೆ, ದೆಹಲಿ ಪೊಲೀಸರು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ, ಸಭೆಗಳಿಗೆ ನಿರ್ಬಂಧಗಳನ್ನು ಹೇರಿದ್ದಾರೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ರಾಜಧಾನಿ ಅಕ್ಕಪಕ್ಕದ ಗಡಿಗಳನ್ನು ಭದ್ರಪಡಿಸಿದ್ದಾರೆ.
ಹರಿಯಾಣ ಮತ್ತು ಪಂಜಾಬ್‌ನಿಂದ ಪ್ರತಿಭಟನಾ ನಿರತ ರೈತರು ಮಂಗಳವಾರ ದೆಹಲಿಯತ್ತ ಪಾದಯಾತ್ರೆ ಆರಂಭಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
ಪಂಜಾಬ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ ಅವರು ಫತೇಘರ್ ಸಾಹಿಬ್‌ನಲ್ಲಿ ರೈತ ಸಂಘಗಳೊಂದಿಗೆ ಸಭೆ ನಡೆಸಿದರು.
ಪಂಜಾಬ್‌ನ ಫತೇಘರ್ ಸಾಹಿಬ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ಲಖ್ವಿಂದರ್ ಸಿಂಗ್, “ಜನರು ಸಿದ್ಧರಾಗಿದ್ದಾರೆ ಮತ್ತು ಸಭೆ ಕೂಡ ನಡೆಯುತ್ತಿದೆ. ನಾವು ಸಾಮಾನ್ಯ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡಲು ಬಯಸುವುದಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ” ಎಂದು ಹೇಳಿದರು.
ರೈತ ಸಂಘಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲಿನ ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ದೆಹಲಿಗೆ ತೆರಳಲಿವೆ. ರೈತರು ದೆಹಲಿ ಪ್ರವೇಶಿಸದಂತೆ ಪೊಲೀಸರು ಕಾಂಕ್ರೀಟ್ ತಡೆ, ಬ್ಯಾರಿಕೇಡ್ ಮತ್ತು ಮುಳ್ಳುತಂತಿಗಳನ್ನು ಹಾಕಿದ್ದಾರೆ. ದೆಹಲಿ ಮತ್ತು ಎನ್‌ಸಿಆರ್‌ಗೆ ಆಗಮಿಸುವ ವಾಹನ ಸಂಚಾರದ ಕುರಿತು ಸಾರ್ವಜನಿಕರಿಗೆ ಸಲಹೆಗಳನ್ನು ನೀಡಲಾಗಿದೆ.