ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷವನ್ನು ಬೆಂಬಲಿಸದಿರಲು ಅಥವಾ ವಿರೋಧಿಸದಿರಲು ಜಿಂದ್ ಜಿಲ್ಲೆಯ ಉಚ್ಚಾನಾದಲ್ಲಿ ಭಾನುವಾರ ನಡೆದ ಕಿಸಾನ್ ಮಹಾಪಂಚಾಯತ್‌ನಲ್ಲಿ ನಿರ್ಧರಿಸಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಭಾರತೀಯ ಕಿಸಾನ್ ನೌಜವಾನ್ ಒಕ್ಕೂಟದ ಆಶ್ರಯದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಹರಿಯಾಣ, ಪಂಜಾಬ್ ಮತ್ತು ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸಿದ್ದರು. ರೈತ ಮುಖಂಡರಾದ ಜಗಜಿತ್ ಸಿಂಗ್ ದಲ್ಲೆವಾಲ್, ಶ್ರವಣ್ ಸಿಂಗ್ ಪಂಧೇರ್, ಅಭಿಮನ್ಯು ಕೊಹಾಡ್ ಭಾಗವಹಿಸಿದ್ದರು.
ಮಹಾಪಂಚಾಯತ್‌ನಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ದಲ್ಲೆವಾಲ್, “ನಮಗೂ (ರೈತ ಚಳವಳಿ) ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಚಳವಳಿಯನ್ನು ಬಲಗೊಳಿಸುವುದು ನಮ್ಮ ಉದ್ದೇಶ. ಚುನಾವಣೆಯಲ್ಲಿ ನಾವು ಯಾರಿಗೂ ಸಹಾಯ ಮಾಡುವುದಿಲ್ಲ ಅಥವಾ ಯಾರನ್ನೂ ವಿರೋಧಿಸುವುದಿಲ್ಲ” ಎಂದು ತಿಳಿಸಿದರು.
“ನಮ್ಮ ಆಂದೋಲನವನ್ನು ಬಲಪಡಿಸುವ ನಿಟ್ಟಿನಲ್ಲಿ ನಾವು ಸರ್ಕಾರದ ವೈಫಲ್ಯಗಳು ಮತ್ತು ರೈತರ ವಿರುದ್ಧ ಕೈಗೊಂಡ ನಿರ್ಧಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಹರಿಯಾಣ ಚುನಾವಣೆ | ನಾನೇ ಅತ್ಯಂತ ಹಿರಿಯ ಶಾಸಕ; ಬಿಜೆಪಿ ಗೆದ್ದರೆ ಸಿಎಂ ಹುದ್ದೆಗೆ ಹಕ್ಕು ಮಂಡನೆ: ಅನಿಲ್ ವಿಜ್
“ನಾವು ಯಾವ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆಯೋ ಅದು ಬರೀ ಪಂಜಾಬ್, ಹರಿಯಾಣದ ರೈತರ ಬೇಡಿಕೆಯಲ್ಲ, ಇಡೀ ದೇಶದ ರೈತರ ಬೇಡಿಕೆಯಾಗಿದೆ. ಇಡೀ ದೇಶವನ್ನು ಈ ಆಂದೋಲನದೊಂದಿಗೆ ಸಂಪರ್ಕಿಸಲು ದೇಶದ ಮೂಲೆ ಮೂಲೆಗಳಲ್ಲಿ ಮಹಾಪಂಚಾಯತ್‌ಗಳನ್ನು ನಡೆಸಲಾಗುತ್ತಿದೆ. ಮುಂದಿನ ಮಹಾಪಂಚಾಯತ್ ಸೆಪ್ಟೆಂಬರ್ 22ರಂದು ಕುರುಕ್ಷೇತ್ರದ ಪಿಪ್ಲಿಯಲ್ಲಿ ನಡೆಯಲಿದೆ” ಎಂದು ಮಾಹಿತಿ ನೀಡಿದರು.
ಇನ್ನು ರೈತರನ್ನು ತಡೆದ ವಿಚಾರದ ಬಗ್ಗೆ ಮಾತನಾಡಿದ ಅವರು, “ಕಿಸಾನ್ ಮಹಾಪಂಚಾಯತ್‌ಗೆ ರೈತರನ್ನು ಬರದಂತೆ ಸರ್ಕಾರ ತಡೆದ ರೀತಿ ತುಂಬಾ ನಾಚಿಕೆಗೇಡಿನದು, ಖಂಡನೀಯ. ರೈತರು ಜಮಾಯಿಸುವುದನ್ನು ತಡೆಯಲು ಹಲವೆಡೆ ಸಿಮೆಂಟ್ ತಡೆಗೋಡೆಗಳನ್ನು ಹಾಕಲಾಗಿದೆ. ರೈತರಿಗೆ ಆಹಾರ ನೀಡಬೇಡಿ ಎಂದು ಸರ್ಕಾರ ಗುರುದ್ವಾರದ ವ್ಯವಸ್ಥಾಪಕರಿಗೆ ಹೇಳಿದೆ” ಎಂದು ಆರೋಪಿಸಿದರು.
ರೈತ ಮುಖಂಡ ಅಭಿಮನ್ಯು ಕೋಹಾದ್ ಮಾತನಾಡಿ, “ಯಾವುದೇ ರಾಜಕೀಯ ಪಕ್ಷಕ್ಕೆ ಮತ ಹಾಕುವಂತೆ ನಾವು ಮನವಿ ಮಾಡುವುದಿಲ್ಲ. ಆದರೆ ನೀವು ಮತ ಹಾಕಲು ಹೋದಾಗ ಕಳೆದ ಹತ್ತು ವರ್ಷಗಳಲ್ಲಿ ರೈತರು ಮತ್ತು ಕೂಲಿಕಾರರ ಮೇಲೆ ನಡೆದಿರುವ ದೌರ್ಜನ್ಯವನ್ನು ನೆನಪಿಸಿಕೊಳ್ಳಿ ಎಂದು ಖಂಡಿತಾ ಹೇಳುತ್ತೇವೆ” ಎಂದು ತಿಳಿಸಿದರು.
