ದೆಹಲಿ ಚಲೋ ಹಮ್ಮಿಕೊಂಡಿರುವ ರೈತ ಪ್ರತಿಭಟನೆಯು ಮೂರನೇ ದಿನಕ್ಕೆ ಕಾಲಿಟ್ಟಿದೆ. ರೈತರು ಹಾಗೂ ಸರ್ಕಾರದೊಂದಿಗೆ ಈಗಾಗಲೇ ಎರಡು ಸುತ್ತು ವಿಫಲಗೊಂಡಿರುವ ಮಾತುಕತೆ ಮೂರನೇ ಸುತ್ತಿಗೆ ಸಜ್ಜುಗೊಂಡಿದೆ.
ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಶ್ ಗೋಯಲ್ ಹಾಗೂ ನಿತ್ಯಾನಂದ ರೈ ಅವರು ಇಂದು ಸಂಜೆ ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಲಿದ್ದಾರೆ.
ಎರಡು ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಫೆ.13ರಂದು ರೈತರು ದೆಹಲಿ ಚಲೋ ನಡೆಸಲು ಪ್ರಾರಂಭಿಸಿದರು.
ಈ ನಡುವೆ ಭಾರತೀಯ ಕಿಸಾನ್ ಯೂನಿಯನ್ ಹರ್ಮೀತ್ ಸಿಂಗ್ ಹಾಗೂ ಪಂಜಾಬ್‌ನ ಸಂಯುಕ್ತ ಕಿಸಾನ್ ಮೋರ್ಚಾ ಫೆ.16ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿವೆ. ಈ ನಿಟ್ಟಿನಲ್ಲಿ ಫೆ.15 ರಂದು (ಇಂದು) ಪಂಜಾಬ್‌ನ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಬೆಳಿಗ್ಗೆ 11 ಗಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ಪ್ರತಿಭಟನೆ ನಡೆಸಲಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾರ್ಪೊರೇಟ್‌ಗೆ ರೆಡ್ ಕಾರ್ಪೆಟ್, ರೈತರಿಗೆ ಮುಳ್ಳಿನ ಬೇಲಿ- ಇದು ಮೋದಿ ಶೈಲಿ
ಎರಡನೇ ದಿನ (ಫೆ.14) ನಡೆದ ಪ್ರತಿಭಟನೆಯಲ್ಲಿ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಭದ್ರತಾ ಪಡೆಗಳು ಬ್ಯಾರಿಕೇಡ್‌ಗಳನ್ನು ಭೇದಿಸಲು ಯತ್ನಿಸಿದ ರೈತರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಲ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದರು.
ಹರಿಯಾಣ ಪೊಲೀಸರು ಡಾಟಾ ಸಿಂಘ್ವಾಲಾ-ಖನೌರಿ ಗಡಿಯಲ್ಲಿ ಬ್ಯಾರಿಕೇಡ್‌ಗಳಿಂದ ಭದ್ರಪಡಿಸಿದ್ದು, ರೈತರು ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ದೆಹಲಿಗೆ ಹೋಗುವುದನ್ನು ತಡೆದಿದ್ದಾರೆ. ಪ್ರತಿಭಟನಾ ನಿರತ ರೈತರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ ಮತ್ತು ಲಖೀಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ .