ನಾಪತ್ತೆಯಾಗಿದ್ದ ಸಿನಿಮಾ ನಿರ್ಮಾಪಕ ಮಹೇಶ್ ಕಲಾವಾಡಿಯಾ ಯಾನೆ ಮಹೇಶ್ ಜಿರಾವಾಲಾ ಅವರು ಜೂನ್ 12ರಂದು ನಡೆದ ಗುಜರಾತ್ ವಿಮಾನ ದುರಂತರದಲ್ಲಿ ಮೃತಪಟ್ಟಿರುವುದು ಖಚಿತವಾಗಿದೆ. ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಜೂನ್ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್‌ಇಂಡಿಯಾ AI-171 ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜಿನ ಆವರಣಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿದ್ದ 242 ಮಂದಿಯಲ್ಲಿ 241 ಮಂದಿ ಮತ್ತು ಹಾಸ್ಟೆಲ್, ಮೆಸ್‌ನಲ್ಲಿದ್ದ ಒಟ್ಟು 29 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈವರೆಗೂ ಮೃತರ ಅಧಿಕೃತ ಅಂಕಿಅಂಶ ಬಿಡುಗಡೆಯಾಗಿಲ್ಲ.
ಇದನ್ನು ಓದಿದ್ದೀರಾ? ಗುಜರಾತ್ ವಿಮಾನ ದುರಂತ | ಸಿನಿಮಾ ನಿರ್ಮಾಪಕ ನಾಪತ್ತೆ: ಅಪಘಾತದಲ್ಲಿ ಮೃತಪಟ್ಟಿರುವ ಶಂಕೆ
ಹಾಸ್ಟೆಲ್ ಆವರಣದಲ್ಲಿ ಮೃತಪಟ್ಟವರ ಪೈಕಿ ಸಿನಿಮಾ ನಿರ್ಮಾಪಕ ಮಹೇಶ್ ಕಲಾವಾಡಿಯಾ ಕೂಡಾ ಒಬ್ಬರಾಗಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು. ಡಿಎನ್‌ಎ ಪರೀಕ್ಷೆಗೆ ಮಾದರಿಯನ್ನೂ ಒದಗಿಸಿದ್ದರು. ಇಂದು(ಜೂನ್ 21) ಡಿಎನ್‌ಎ ಪರೀಕ್ಷೆಯಲ್ಲಿ ಮಹೇಶ್ ಮೃತಪಟ್ಟಿರುವುದು ಖಚಿತವಾಗಿದೆ.
ಗುಜರಾತ್ ವಿಮಾನ ದುರಂತ ನಡೆದ ಮಧ್ಯಾಹ್ನ ಲಾ ಗಾರ್ಡನ್ ಪ್ರದೇಶದಲ್ಲಿ ಯಾರನ್ನೋ ಭೇಟಿಯಾಗಲು ಹೋಗಿದ್ದರು, ಆದರೆ ಮರಳಿ ಬಂದಿಲ್ಲ ಎಂದು ಪತ್ನಿ ಹೇತಲ್ ದೂರು ನೀಡಿದ್ದರು. ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರ ಮೊಬೈಲ್ ಫೋನ್‌ನ ಕೊನೆಯ ಸ್ಥಳವು ಅಪಘಾತ ನಡೆದ ಸ್ಥಳದಿಂದ 700 ಮೀಟರ್ ದೂರದಲ್ಲಿ ಕಾಣಿಸಿಕೊಂಡಿತ್ತು.
“ಮಧ್ಯಾಹ್ನ 1:40ರ ಸುಮಾರಿಗೆ(ವಿಮಾನ ದುರಂತ ನಡೆದ ಸಮಯ) ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಅವರ ಸ್ಕೂಟರ್ ಮತ್ತು ಮೊಬೈಲ್ ಫೋನ್ ಕಾಣೆಯಾಗಿದೆ. ಇದೆಲ್ಲವೂ ಅಸಾಮಾನ್ಯ. ಅವರು ಮನೆಗೆ ಬರಲು ಆ ಮಾರ್ಗದಲ್ಲಿ ಎಂದಿಗೂ ಬಂದಿಲ್ಲ. ಅಪಘಾತದಿಂದ ಮೃತಪಟ್ಟವರಲ್ಲಿ ಅವರೂ ಒಬ್ಬರಾಗಿರುವ ಆತಂಕವಿದೆ. ಆದ್ದರಿಂದ ನಾವು ಡಿಎನ್ಎ ಮಾದರಿಗಳನ್ನು ಸಲ್ಲಿಸಿದ್ದೇವೆ” ಎಂದು ಹೇತಲ್ ತಿಳಿಸಿದ್ದರು.
