ಇತ್ತೀಚೆಗೆ ಹೊರ ದೇಶದಿಂದ ಭಾರತಕ್ಕೆ ಬಂದ ವ್ಯಕ್ತಿಗೆ ಮಂಕಿಪಾಕ್ಸ್ (ಎಂಪಾಕ್ಸ್) ಬಂದಿದೆ ಎಂದು ಶಂಕಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ರೋಗಿಯನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ ಮತ್ತು ಆರೋಗ್ಯವು ಸದ್ಯ ಸ್ಥಿರವಾಗಿದೆ ಎಂದು ವರದಿ ಉಲ್ಲೇಖಿಸಿದೆ. ಆದರೆ ಎಲ್ಲಿ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಲಾಗಿಲ್ಲ.
ಇದನ್ನು ಓದಿದ್ದೀರಾ? ಮಂಕಿಪಾಕ್ಸ್ ಉಲ್ಬಣ; ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದ WHO
ಮಂಕಿಪಾಕ್ಸ್ ಇದೆಯೇ ಎಂದು ತಿಳಿಯಲು ರೋಗಿಯ ರಕ್ತದ ಮಾದರಿಯ ಪರೀಕ್ಷೆ ನಡೆಸಲಾಗುತ್ತಿದೆ ಎಂದೂ ತಿಳಿಸಲಾಗಿದೆ. ಹಾಗೆಯೇ ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ಹೇಳಿದೆ.
ಆಫ್ರಿಕಾದ ಕಾಂಗೋ ಸೇರಿದಂತೆ 13 ದೇಶಗಳಲ್ಲಿ ಮಂಕಿಪಾಕ್ಸ್ ಕಾಯಿಲೆ ವೇಗವಾಗಿ ಹರಡುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಮೂರು ವರ್ಷಗಳಲ್ಲಿ ಎರಡನೇ ಬಾರಿಗೆ ಜಾಗತಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿದೆ.
ಏನಿದು ಮಂಕಿಪಾಕ್ಸ್, ಲಕ್ಷಣಗಳೇನು?
ಮಂಕಿಪಾಕ್ಸ್ ಕೂಡಾ ಸಿಡುಬಿನ ಒಂದು ಪ್ರಭೇಡವಾಗಿದೆ. ಸಾಮಾನ್ಯ ಸಿಡುಬುಗಳಲ್ಲಿ ಬರುವಂತೆ ಇದರಲ್ಲಿಯೂ ಜ್ವರ, ತಲೆನೋವು, ಮೈ-ಕೈ ನೋವು, ಬೆನ್ನು ನೋವು, ಸುಸ್ತು ಕಾಣಿಸಿಕೊಳ್ಳುತ್ತದೆ. ಚರ್ಮ ಕೆಂಪಾಗಿ ಬೊಕ್ಕೆಗಳು ಶರೀರದ ಎಲ್ಲೆಡೆ ಕಾಣಿಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಎರಡರಿಂದ ನಾಲ್ಕು ವಾರಗಳಲ್ಲಿ ಚಿಕಿತ್ಸೆ ಇಲ್ಲದಿದ್ದರೂ ಕಡಿಮೆಯಾಗುತ್ತದೆ. ಆದರೆ ಕ್ಯಾನ್ಸರ್, ಮಧುಮೇಹ ಇರುವವರು, ನವಜಾತ ಶಿಶುಗಳಿಗೆ ಮಂಕಿಪಾಕ್ಸ್ ಪ್ರಾಣಕ್ಕೆ ಕುತ್ತಾಗಬಹುದು.
