ಒಂದೇ ಕುಟುಂಬದ ಐವರ ಮೃತದೇಹಗಳು ಕಾರಿನಲ್ಲಿ ಪತ್ತೆಯಾಗಿರುವ ಘಟನೆ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯಲ್ಲಿ ನಡೆದಿದೆ. ಕುಟುಂಬವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನಮನಸಮುದ್ರನ್ ಪ್ರದೇಶದ ಹಾದುಹೋಗಿರುವ ತಿರುಚಿ-ಕಾರೈಕುಡಿ ರಾಷ್ಟ್ರೀಯ ಹೆದ್ದಾರಿ ಬದಿ ನಿಂತಿದ್ದ ಕಾರಿನಲ್ಲಿ ಮೃತದೇಹಗಳು ಪತ್ತೆಯಾಗಿವೆ. ಮೃತರನ್ನು ಸೇಲಂ ಮೂಲದ ಉದ್ಯಮಿ ಮಣಿಕಂದನ್, ಅವರ ಪತ್ನಿ ನಿತ್ಯಾ, ತಾಯಿ ಸರೋಜಾ ಹಾಗೂ ಇಬ್ಬರು ಮಕ್ಕಳೆಂದು ಗುರಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಮಣಿಕಂದನ್ ಅವರ ಕಾರು ಎರಡು ದಿನಗಳಿಂದ ಒಂದೇ ಸ್ಥಳದಲ್ಲಿ ನಿಂತಿತ್ತು. ಸ್ಥಳೀಯರು ಅನುಮಾನಗೊಂಡು ಕಾರನ್ನು ಪರಿಶೀಲಿಸಿದಾಗ ಮೃತದೇಹಗಳಿರುವುದು ಪತ್ತೆಯಾಗಿದೆ. ಬಳಿಕ, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಸೇಲಂ ಮೂಲದ ಕುಟುಂಬವು ಪುದುಕ್ಕೊಟ್ಟೈನಲ್ಲಿ ಕಾರು ನಿಲ್ಲಿಸಿದ್ದು ಯಾಕೆ? ಇಲ್ಲಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರಿನಲ್ಲಿ ಆತ್ಮಹತ್ಯೆ ಪತ್ರವೂ ದೊರೆತಿದೆ ಎಂದು ತಿಳಿದುಬಂದಿದೆ.
ಕುಟುಂಬದ ಐದೂ ಜನರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ಶಂಕಿಸಲಾಗಿದೆ.
ಮೃತ ಉದ್ಯಮಿ ಮಣಿಕಂದನ್ ತಮ್ಮ ವ್ಯವಹಾರಕ್ಕಾಗಿ ಸಾಲ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.