ಟೆಂಪೋ ಟ್ರಾವೆಲರ್ ಕಂದಕಕ್ಕೆ ಉರುಳಿ ಬಿದ್ದು ಮಹಿಳೆ ಸೇರಿದಂತೆ ಐವರು ಸಾವನ್ನಪ್ಪಿ, 17 ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ.
ಟೆಂಪೋ ಟ್ರಾವೆಲರ್ ಮಂಗಳವಾರ ಬೆಳಿಗ್ಗೆ ದೋಡಾ-ಬರಾತ್ ರಸ್ತೆಯ ಪೋಂಡಾ ಪ್ರದೇಶದಲ್ಲಿ ರಸ್ತೆಯಿಂದ ಜಾರಿ ಕಂದಕಕ್ಕೆ ಉರುಳಿದೆ. ಗಾಯಗೊಂಡ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಜಮ್ಮು-ಕಾಶ್ಮೀರ | ಕಂದಕಕ್ಕೆ ಉರುಳಿದ ಬಸ್; 36 ಮಂದಿ ದುರ್ಮರಣ
ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ನಾಗರಿಕರೂ ಸಹಾಯ ಮಾಡಿದ್ದಾರೆ. ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, 17 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ದೋಡಾದ ಮುಖ್ಯ ವೈದ್ಯಾಧಿಕಾರಿ ಡಾ. ಓಮರ್ ಕುಮಾರ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, “ಗಾಯಾಳುಗಳನ್ನು ದೋಡಾದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿದೆ. ಅಲ್ಲಿ ಇಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದು, ಮೃತರ ಸಂಖ್ಯೆ ಐದಕ್ಕೆ ತಲುಪಿದೆ” ಎಂದು ಹೇಳಿದ್ದಾರೆ.
ಗಾಯಗೊಂಡವರಲ್ಲಿ ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡವರಲ್ಲಿ ಒಬ್ಬರನ್ನು ವಿಶೇಷ ಚಿಕಿತ್ಸೆಗಾಗಿ ಜಮ್ಮು ಕಾಶ್ಮೀರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, “ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯ ಮತ್ತು ವೈದ್ಯಕೀಯ ಸಹಾಯವನ್ನು ಒದಗಿಸಲಾಗುತ್ತಿದೆ. ಜಿಲ್ಲಾಧಿಕಾರಿ ವೈಯಕ್ತಿಕವಾಗಿ ಸಂಪೂರ್ಣ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
