ಭಾರತದ ಫುಟ್‌ಬಾಲ್ ದಂತಕಥೆ ಸುನಿಲ್ ಛೆಟ್ರಿ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 6ರಂದು ಕುವೈತ್ ವಿರುದ್ಧ ನಡೆಯಲಿರುವ ಫಿಫಾ ವಶ್ವಿಕಪ್‌ನ ಅರ್ಹತಾ ಪಂದ್ಯವು ತಮ್ಮ ಕೊನೆಯ ಪಂದ್ಯವಾಗಲಿದೆ. ಆ ಪಂದ್ಯದ ಬಳಿಕ ನಿವೃತ್ತರಾಗುವುದಾಗಿ ತಿಳಿಸಿದ್ದಾರೆ. ಆ ಮೂಲಕ ತಮ್ಮ ಅಭೂತಪೂರ್ವ ಮತ್ತು ಸಾಟಿ ಇಲಲ್ದ ಅದ್ಭುತ ವೃತ್ತಿಜೀವನಕ್ಕೆ ತೆರೆ ಎಳೆಯಲಿದ್ದಾರೆ.
39ರ ಹರೆಯದ ಛೆಟ್ರಿ ಅವರು 19 ವರ್ಷಗಳ ಕಾಲ ಭಾರತೀಯ ತಂಡಕ್ಕಾಗಿ ಆಡಿದ್ದಾರೆ. ತಂಡದ ನಾಯಕನ ಜವಬ್ದಾರಿಯನ್ನೂ ಹೊತ್ತು, ತಂಡವನ್ನು ಮುನ್ನಡೆಸಿದ್ದಾರೆ. ಛೆಟ್ರಿ 2005ರಲ್ಲಿ ಫುಟ್‌ಬಾಲ್ ಆಟಕ್ಕೆ ಪದಾರ್ಪಣೆ ಮಾಡಿದ್ದರು. ದೇಶಕ್ಕಾಗಿ ಅವರು ಒಟ್ಟು 94 ಗೋಲುಗಳನ್ನು ಗಳಿಸಿದ್ದಾರೆ. ಭಾರತದ ಸಾರ್ವಕಾಲಿಕ ಟಾಪ್ ಸ್ಕೋರರ್ ಮತ್ತು ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರನಾಗಿ ಛೆಟ್ರಿ ದಾಖಲೆ ಬರೆದಿದ್ದಾರೆ.
ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರರಲ್ಲಿ ಛಟ್ರಿ ಮೂರನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿಯ ನಂತರದ ಸ್ಥಾನದಲ್ಲಿ ಛೆಟ್ರಿ ಇದ್ದಾರೆ. ಪ್ರಸ್ತುತ ಅಂತರರಾಷ್ಟ್ರೀಯ ಗೋಲ್-ಸ್ಕೋರರ್‌ಗಳ ಸಾರ್ವಕಾಲಿಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಕುವೈತ್ ವಿರುದ್ಧದ ಪಂದ್ಯದ ಬಳಿಕ ನಿವೃತ್ತಿ ಪಡೆಯುವುದಾಗಿ ಘೋಷಿಸಿದ ಛೆಟ್ರಿ ಅವರ ಅಂತಿಮ ಪಂದ್ಯವು ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅವರು ಪ್ರಬಲ ಸ್ಟ್ರೈಕರ್ ಆಗಿ ಸಾಕಷ್ಟು ಫುಟ್‌ಬಾಲ್ ಪಂದ್ಯಗಳನ್ನು ಆಡಿರುವ ನಗರದಲ್ಲಿಯೇ ಅವರ ಪ್ರಯಾಣ ಕೊನೆಯಾಗಲಿದೆ. ಭಾರತವು ಪ್ರಸ್ತುತ ಎ ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿ ತಕಾರ್ ತಂಡವಿದೆ.
ಛೆಟ್ರಿ ಮಾರ್ಚ್‌ನಲ್ಲಿ ತಮ್ಮ 150ನೇ ಪಂದ್ಯವನ್ನು ಆಡಿದ್ದರು. ಗುವಾಹಟಿಯಲ್ಲಿ ನಡೆದ ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೋಲು ಗಳಿಸಿದ್ದರು. ಆದರೆ, ಆ ಪಂದ್ಯದಲ್ಲಿ ಭಾರತ 1-2 ಅಂತರದಲ್ಲಿ ಸೋಲು ಕಂಡಿತ್ತು.
2005ರಲ್ಲಿ ಪಾಕಿಸ್ತಾನದ ವಿರುದ್ಧದ ನಡೆದ ಅಂತಾರಾಷ್ಟ್ರೀಯ ಪಂದ್ಯವು ಅವರ ಚೊಚ್ಚಲ ಪಂದ್ಯವಾಗಿತ್ತು. ಅದೇ ಪಂದ್ಯದಲ್ಲಿ ಚೊಚ್ಚಲ ಗೋಲನ್ನೂ ಅವರು ಗಳಿಸಿದ್ದರು. ಅಲ್ಲದೆ, ಆಟದ ಅತ್ಯಂತ ಬಿರುಸಿನ ಸ್ಟ್ರೈಕರ್‌ಗಳಲ್ಲಿ ಒಬ್ಬರೆಂದು ಗಮನ ಸೆಳೆದಿದ್ದರು. ಆ ಪಂದ್ಯವನ್ನು ಅವರು ತಮ್ಮ ಅತ್ಯುತ್ತಮ ಕ್ಷಣವೆಂದು ಬಣ್ಣಿಸಿದ್ದಾರೆ.
“ನಾನು ಎಂದಿಗೂ ಮರೆಯದ ಒಂದು ದಿನವಿದೆ. ಆ ದಿನವನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತೇನೆ. ನನ್ನ ದೇಶಕ್ಕಾಗಿ ನಾನು ಮೊದಲ ಬಾರಿಗೆ ಆಡಿದ್ದ ದಿನವದು” ಎಂದಿದ್ದಾರೆ.