ಚುನಾವಣಾ ಆಯೋಗವು ವಿವಿಧ ಕಂಪನಿಗಳಿಂದ ರಾಜಕೀಯ ಪಕ್ಷಗಳು ಸ್ವೀಕರಿಸಿದ ಚುನಾವಣಾ ಬಾಂಡ್ ಗಳ ನೂತನ ಅಂಕಿಅಂಶಗಳ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು ಯಾವುದೇ ಪ್ರತಿಗಳನ್ನು ಉಳಿಸಿಕೊಳ್ಳದೆ ಎಲ್ಲ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.
ಬೌತಿಕ ಪ್ರತಿಗಳನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರೀ ಮರಳಿಸಿದ ನಂತರ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಅಪ್‌ಲೋಡ್ ಮಾಡಿದೆ.
ಎಸ್‌ಬಿಐ ನೀಡಿರುವ ನೂತನ ಬಾಂಡ್‌ಗಳಲ್ಲಿ ಬಾಂಡ್‌ಗಳ ರಶೀದಿಯ ದಿನಾಂಕಗಳು ಹಾಗೂ ಪಕ್ಷಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿರುವ ವಿವರಗಳು ಒಳಗೊಂಡಿವೆ.
ಆದಾಗ್ಯೂ, ಇದು ಚುನಾವಣಾ ಬಾಂಡ್‌ಗಳ ಸಂಖ್ಯೆಯನ್ನು ಒಳಗೊಂಡಿಲ್ಲದೆ ದಾನಿಗಳನ್ನು ಸ್ವೀಕರಿಸುವವರಿಗೆ ಹೊಂದಿಸುತ್ತದೆ. ಆಯೋಗಕ್ಕೆ ಸಲ್ಲಿಸಲಾಗಿರುವ ಅಂಕಿಅಂಶಗಳಲ್ಲಿ ದಾನಿಗಳ ಪಟ್ಟಿಯ ಮಾಹಿತಿ ನೀಡಲಾಗಿದೆ.
ಅಂಕಿಅಂಶಗಳ ಪ್ರಕಾರ, ಬಿಜೆಪಿಯು ಬಾಂಡ್‌ಗಳ ಮೂಲಕ 6986 ಕೋಟಿ ರೂ.ಗಳ ಅತಿ ಹೆಚ್ಚು ನೆರವು ಪಡೆದಿದೆ. ಎರಡನೇ ಸ್ಥಾನದಲ್ಲಿ ಟಿಎಂಸಿ 1397 ಕೋಟಿ ರೂ., ಕಾಂಗ್ರೆಸ್ 1334 ಕೋಟಿ ರೂ ಹಾಗೂ ಭಾರತ್ ರಾಷ್ಟ್ರ ಸಮಿತಿ 1322 ಕೋಟಿ ರೂ. ನೆರವು ಪಡೆದಿದೆ.
ಒಡಿಶಾದ ಆಡಳಿತರೂಢ ಬಿಜೆಡಿಯು 944.5 ಕೋಟಿ ರೂ., ಡಿಎಂಕೆ 656.5 ಕೋಟಿ ರೂ. ಹಾಗೂ ಆಂಧ್ರ ಪ್ರದೇಶದ ವೈಎಸ್‌ಆರ್‌ಸಿ 442.8 ಕೋಟಿ ರೂ. ದೇಣಿಗೆ ಪಡೆದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಚ್ಚಿಟ್ಟ ಮಾಧ್ಯಮಗಳು ಬಿಚ್ಚಿಟ್ಟ ಸಾಮಾಜಿಕ ಮಾಧ್ಯಮಗಳು
ಕರ್ನಾಟಕದ ಜೆಡಿಎಸ್ 89.75 ಕೋಟಿ ರೂ. ದೇಣಿಗೆ ಪಡೆದಿದ್ದರೆ, ಇದರಲ್ಲಿ ಮೇಘಾ ಇಂಜಿನಿಯರಿಂಗ್ ಸಂಸ್ಥೆ 50 ಕೋಟಿ ರೂ. ದೇಣಿಗೆ ನೀಡಿದೆ. ಉಳಿದವರಲ್ಲಿ ಎಂಬಸ್ಸಿ, ಇನ್ಫೊಸಿಸ್ ಸಂಸ್ಥೆಗಳು ಜೆಡಿಎಸ್‌ಗೆ ದೇಣಿಗೆ ನೀಡಿದೆ.
ಸಾಂಟಿಗೊ ಮಾರ್ಟಿನ್ ಒಡೆತನದ ಫ್ಯೂಚರ್ ಗೇಮಿಂಗ್ ಹಾಗೂ ಹೋಟೆಲ್ ಸರ್ವಿಸ್ ಪ್ರೆ.ಲಿ ಸಂಸ್ಥೆ 1368 ಕೋಟಿ ರೂ.ಗಳ ಅತಿ ಹೆಚ್ಚು ದೇಣಿಗೆಯನ್ನು ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿದೆ. ಫ್ಯೂಚರ್ ಗೇಮಿಂಗ್ ಕಂಪನಿಯು ಹೆಚ್ಚು ದಾನ ನೀಡಿರುವುದು ಡಿಎಂಕೆ ಪಕ್ಷಕ್ಕೆ. ತಮಿಳುನಾಡಿನ ಆಡಳಿತರೂಢ ಪಕ್ಷಕ್ಕೆ 509 ಕೋಟಿ ರೂ. ದೇಣಿಗೆ ನೀಡಿದೆ.
ಮಾ.15ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳ ಅಂಕಿಅಂಶಗಳನ್ನು ಸ್ಪಷ್ಟ ಹಾಗೂ ನಿಖರವಾಗಿ ನೀಡಬೇಕೆಂದು ನಿರ್ದೇಶಿಸಿತ್ತು. ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ ಒಂದು ದಿನದ ನಂತರ ಬಾಂಡ್‌ಗಳ ನೂತನ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.