ಸಾರಿಗೆ ವಿಷಯವು ರಾಜ್ಯಗಳ ವ್ಯಾಪ್ತಿಗೆ ಬರುವುದರಿಂದ ಕೇಂದ್ರ ಸರ್ಕಾರ ಇದನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಆದರೆ, ಅಗತ್ಯ ಪರ್ಮಿಟ್ ಹಾಗೂ ಇನ್ಷ್ಯೂರೆನ್ಸ್ ನಿಯಮಗಳನ್ನು ರೂಪಿಸಿ ಬೈಕ್ ಟ್ಯಾಕ್ಸಿ ಸೇವೆಗೆ ಸಮ್ಮತಿ ನೀಡಿದರೆ ಲಕ್ಷಾಂತರ ಕುಟುಂಬಗಳಿಗೆ ಆದಾಯದ ಹೊಸ ದಾರಿ ತೆರೆಯಲಿದೆ. ಹಾಗಾಗಿ ದೇಶಾದ್ಯಂತ ಖಾಸಗಿ ದ್ವಿಚಕ್ರ ವಾಹನಗಳನ್ನು ‘ಬೈಕ್ ಟ್ಯಾಕ್ಸಿ’ಗಳಾಗಿ ಬಳಸಲು ಅನುಮತಿ ನೀಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಎಲ್ಲ ರಾಜ್ಯ ಸರ್ಕಾರಗಳಲ್ಲಿ ಕೋರಿದ್ದಾರೆ.
“ಬೈಕ್ ಟ್ಯಾಕ್ಸಿ ಸೇವೆಯನ್ನು ಉತ್ತೇಜಿಸುವುದರಿಂದ ಗ್ರಾಮೀಣ ಹಾಗೂ ಅರೆ-ನಗರ ಭಾಗದ ಸುಮಾರು 8 ಕೋಟಿ ಯುವಜನರಿಗೆ ಜೀವನೋಪಾಯ ಮತ್ತು ಆದಾಯ ಸಿಗಲಿದೆ” ಎಂದು ಸಚಿವರು ಭರವಸೆ ನೀಡಿದ್ದಾರೆ.
“ರಸ್ತೆ ಸುರಕ್ಷತೆ ಹೆಚ್ಚಿಸಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ‘ನೆಗಟಿವ್ ಪಾಯಿಂಟ್ ಸಿಸ್ಟಮ್’ ಜಾರಿಗೆ ತರಲಾಗುತ್ತಿದೆ. ಚಾಲಕರು ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿದರೆ ಪ್ರತಿಯೊಂದು ತಪ್ಪಿಗೂ ನೆಗಟಿವ್ ಪಾಯಿಂಟ್ ಸಿಗಲಿದ್ದು, ನಿಗದಿತ ಮಿತಿ ಮೀರಿದರೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ ಅಥವಾ ಶಾಶ್ವತವಾಗಿ ರದ್ದುಗೊಳಿಸಲಾಗುತ್ತದೆ” ಎಂದರು.
“ಹೆದ್ದಾರಿ ಹಾಗೂ ಗಣಿಗಾರಿಕೆ ಯೋಜನೆಗಳಲ್ಲಿ ಕೆಲಸ ಮಾಡುವ ಚಾಲಕರು ಮತ್ತು ಕಾರ್ಮಿಕರಿಗಾಗಿ ‘ಸುರಕ್ಷಾ’ ಪೈಲಟ್ ಯೋಜನೆಗೆ ಗಡ್ಕರಿ ಚಾಲನೆ ನೀಡಿದ್ದಾರೆ. ಮೊದಲ ಹಂತದಲ್ಲಿ ಮಹಾರಾಷ್ಟ್ರದ ನಾಗಪುರ-ಕಾಮ್ಟಿ ಎನ್‌ಎಚ್-44 ರಸ್ತೆಯ 150 ಕಿ.ಮೀ ವ್ಯಾಪ್ತಿ ಹಾಗೂ ಚಂದ್ರಾಪುರ ಗಣಿ ಪ್ರದೇಶದಲ್ಲಿ 10,000 ಜನರಿಗೆ ಉಚಿತ ಕಣ್ಣಿನ ತಪಾಸಣೆ, ಸಾಮಾನ್ಯ ಆರೋಗ್ಯ ಪರೀಕ್ಷೆ ಜತೆಗೆ ಕೌನ್ಸೆಲಿಂಗ್ ನೀಡಲಾಗುತ್ತದೆ ಎನ್ನಲಾಗಿದೆ.
ಬೈಕ್ ಟ್ಯಾಕ್ಸಿ ಏಕೆ ಅಷ್ಟೊಂದು ಜನಪ್ರಿಯ?
ಆಟೋಗಳು ಪ್ರತಿ ಕಿಲೋಮೀಟರ್‌ಗೆ ₹15-₹18 ಹಾಗೂ ಕ್ಯಾಬ್‌ಗಳು ₹22-₹25 ವಸೂಲಿ ಮಾಡಿದರೆ, ಬೈಕ್ ಟ್ಯಾಕ್ಸಿಗಳು ಕೇವಲ ₹8-₹10 ದರದಲ್ಲಿ ಲಭ್ಯವಿವೆ. ದಿನನಿತ್ಯ ಕಚೇರಿಗೆ ತೆರಳುವ ಉದ್ಯೋಗಿಗಳಿಗೆ ಇದು ಅತ್ಯಂತ ಅಗ್ಗದ ಪ್ರಯಾಣ ಮಾರ್ಗವಾಗಿದೆ. 5 ರಿಂದ 10 ಕಿ.ಮೀ ತನಕದ ಸಣ್ಣ ಪ್ರಯಾಣಕ್ಕೆ ಕಾರುಗಳು ಟ್ರ್ಯಾಫಿಕ್‌ನಲ್ಲಿ ಸಿಲುಕಿಕೊಳ್ಳುತ್ತವೆ. ಆದರೆ, ಬೈಕ್ ಟ್ಯಾಕ್ಸಿಗಳು ಟ್ರ್ಯಾಫಿಕ್ ನೆಟ್‌ವರ್ಕ್‌ನಲ್ಲಿ ಸುಲಭವಾಗಿ ಸಂಚರಿಸಿ ಪ್ರಯಾಣಿಕರನ್ನು ನಿಖರ ಸ್ಥಳಕ್ಕೆ ತಲುಪಿಸುತ್ತವೆ. ವರದಿಗಳ ಪ್ರಕಾರ, ಬೈಕ್ ಟ್ಯಾಕ್ಸಿ ಚಾಲಕರು ಎಲ್ಲ ವೆಚ್ಚಗಳನ್ನು ಹೊರತುಪಡಿಸಿ ತಿಂಗಳಿಗೆ ₹25,000 ರಿಂದ ₹30,000 ವರೆಗೆ ಗಳಿಸುತ್ತಿದ್ದಾರೆ. ದ್ವಿಚಕ್ರ ವಾಹನ ಹೊಂದಿರುವ ಯಾರೇ ಆದರೂ ತಮ್ಮ ಬಿಡುವಿನ ವೇಳೆಯಲ್ಲಿ ಇದರಿಂದ ಆದಾಯ ಗಳಿಸಬಹುದಾಗಿದೆ.
ಇದನ್ನೂ ಓದಿದ್ದೀರಾ? ಮೋಹನ್ ಭಾಗವತ್ ಅಮೆರಿಕ ಭೇಟಿ ಪರಿಣಾಮ: ಆರ್‌ಎಸ್‌ಎಸ್ ನಂಟಿನ ದೇಣಿಗೆ ತಿರಸ್ಕರಿಸಲು ಅಮೆರಿಕದ ರಾಜಕಾರಣಿಗಳ ನಿರ್ಧಾರ
ಕೇಂದ್ರ ಸರ್ಕಾರದ ‘ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಗಳು 2025’ ಖಾಸಗಿ ಬೈಕ್‌ಗಳನ್ನು ಟ್ಯಾಕ್ಸಿಯಾಗಿ ಬಳಸಲು ಅವಕಾಶ ನೀಡಿದ್ದರೂ, ಅಂತಿಮ ನಿರ್ಧಾರವನ್ನು ರಾಜ್ಯ ಸರ್ಕಾರಗಳೇ ತೆಗೆದುಕೊಳ್ಳಬೇಕಿದೆ. ದೆಹಲಿ ಮತ್ತು ತಮಿಳುನಾಡಿನಂತಹ ರಾಜ್ಯಗಳು ಇನ್ನೂ ಸ್ಪಷ್ಟ ನಿಯಮ ರೂಪಿಸಬೇಕಿದ್ದರೆ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸುದೀರ್ಘ ಕಾನೂನು ಹೋರಾಟಗಳ ನಂತರ ಸ್ಪಷ್ಟತೆ ಸಿಕ್ಕಿದೆ. ಇನ್ನು ಕೆಲವು ನಗರಗಳಲ್ಲಿ ಇವು ಕಾನೂನುಬದ್ಧವಾಗಿದ್ದರೂ, ಪರ್ಮಿಟ್ ಮತ್ತು ನಿಯಮಾವಳಿಗಳ ಜಾರಿಯಲ್ಲಿ ಗೊಂದಲಗಳು ಮುಂದುವರಿದಿವೆ ಎಂದು ಹೇಳಿದ್ದಾರೆ.





