ದಲಿತ ಮಹಿಳೆಯರಿಗೆ ತೆಂಗಿನ ಚಿಪ್ಪಿನಲ್ಲಿ ಚಹಾ ಕೊಟ್ಟಿರುವ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಇಬ್ಬರು ಮಹಿಳೆಯರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಧರ್ಮಪುರಿ ಜಿಲ್ಲೆಯ ಗೋಪಿನಾಥಂಪಟ್ಟಿಯಲ್ಲಿ ಘಟನೆ ನಡೆದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಗೋಪಿನಾಥಂಪಟ್ಟಿಯಲ್ಲಿನ ಪ್ರಬಲ ಜಾತಿಯ ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಜಾತಿ ಶೋಷಣೆಯ ಕೃತ್ಯ ನಡೆದಿದೆ ಎಂದು ಕಂಬೈನಲ್ಲೂರು ಪೊಲೀಸರು ತಿಳಿಸಿದ್ದಾರೆ.
ಪೋಲಯಂಪಲ್ಲಿ ಗ್ರಾಮದ ನಾಲ್ವರು ದಲಿತ ಮಹಿಳೆಯರು – ಆರ್ ಶ್ರೀಪ್ರಿಯಾ (38), ವಿ ವೀರಮ್ಮಳ್ (55), ಕೆ ಮರಿಯಮ್ಮಳ್ (60) ಮತ್ತು ಜಿ ಸೆಲ್ವಿ (50) – ಗುರುವಾರ ಸವರ್ಣೀಯರ ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದರು. ಈ ವೇಳೆ, ಜಮೀನು ಮಾಲೀಕರ ತಾಯಿ ಎಸ್ ಚಿನ್ನತಾಯಿ ಮತ್ತು ಪತ್ನಿ ಬಿ ಧರಣಿ (35) ಕೆಲಸ ಮಾಡುತ್ತಿದ್ದ ಮಹಿಳೆಯರಿಗೆ ಚಹಾ ತಂದಿದ್ದಾರೆ. ಆದರೆ, ಅವರು ಲೋಟಗಳನ್ನು ತರದೆ, ತೆಂಗಿನ ಚಿಪ್ಪುಗಳನ್ನು ತಂದಿದ್ದರು. ಅವುಗಳಲ್ಲಿಯೇ ಚಹಾ ನೀಡಿದ್ದರುಎಂದು ಪೊಲೀಸರು ತಿಳಿಸಿದ್ದಾರೆ.
ಈ ಜಾತಿ ದೌರ್ಜನ್ಯವನ್ನು ಕಂಡ ಯುವಕರು ತಮ್ಮ ಮೊಬೈಲ್‌ನಲ್ಲಿ ಘಟನೆಯನ್ನು ವಿಡಿಯೋ ಮಾಡಿದ್ದು, ಘಟನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತೆಂಗಿನ ಚಿಪ್ಪಿನಲ್ಲಿ ಚಹಾ ಸ್ವೀಕರಿಸಿದ ನಾಲ್ವರಲ್ಲಿ ಒಬ್ಬರಾದ ಸೆಲ್ವಿ, “ಇಂತಹ ಘಟನೆಗಳು ನಮಗೆ ಹೊಸದಲ್ಲ. ಕೆಲಸ ಮಾಡುವಾಗ ಅನೇಕ ಕಡೆಗಳಲ್ಲಿ ಇಂತಹ ಪರಿಸ್ಥಿತಿಗಳನ್ನು ಎದುರಿದ್ದೇವೆ. ಅವೆಲ್ಲವೂ ಮರೆತುಹೋಗಿವೆ. ಇಂತಹ ಘಟನೆಗಳು ನಮಗೆ ಆಘಾತ ಉಂಟುಮಾಡುತ್ತವೆ. ಅವರು ತೆಂಗಿನ ಚಿಪ್ಪಿನಲ್ಲಿ ಚಹಾ ಕೊಡುತ್ತಾರೆಂದು ನಮಗೆ ತಿಳಿದಿದ್ದರೆ, ನಾವು ಅಲ್ಲಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ಅವರ ಬಳಿ ಪ್ಲಾಸ್ಟಿಕ್ ಕಪ್ ಇದೆಯೇ ಎಂದು ನಾನು ಅವರನ್ನು ಕೇಳಿದೆ. ಆದರೆ, ಅವರು ಉತ್ತರಿಸಲಿಲ್ಲ” ಎಂದು ಹೇಳಿದ್ದಾರೆ.
ಚಿನ್ನತಾಯಿ ಮತ್ತು ಧರಣಿ – ಇಬ್ಬರೂ ತಾವು ಜಾತಿ ದೌರ್ಜನ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ-2015ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.