ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ಮಾ.1 ರಂದು ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬ ಭಾಗಿಯಾದ ಕಾರಣಕ್ಕೆ ತಮಿಳುನಾಡಿನ ಎಲ್ಲರನ್ನು ತೀವ್ರವಾದಿಗಳು ಎಂದು ನಿಂದಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಆಡಳಿತರೂಢ ಡಿಎಂಕೆ ಪಕ್ಷ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ತಮ್ಮ ಚುನಾವಣಾ ಉದ್ದೇಶಗಳಿಗಾಗಿ ಕರ್ನಾಟಕ ಹಾಗೂ ತಮಿಳುನಾಡಿನ ಜನರ ನಡುವೆ ಉದ್ದೇಶಪೂರ್ವಕವಾಗಿ ದ್ವೇಷವನ್ನು ಕೆರಳಿಸುವ ಕಾರಣಕ್ಕಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಡಿಎಂಕೆಯ ಸಂಘಟನಾತ್ಮಕ ಕಾರ್ಯದರ್ಶಿ ಆರ್ ಎಸ್ ಭಾರತಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
“ಕನ್ನಡಿಗ ಹಾಗೂ ತಮಿಳರ ಎರಡು ಸಮುದಾಯಗಳ ನಡುವೆ ದ್ವೇಷ ಮತ್ತು ಹಗೆತನವನ್ನು ಸೃಷ್ಟಿಸಲು ತಮಿಳುನಾಡು ಜನರನ್ನು ತೀವ್ರವಾದಿಗಳು ಎಂದು ಸಾಮಾನ್ಯೀಕರಿಸಿದ್ದಾರೆ. ಹೇಳಿಕೆ ನೀಡಲಾಗಿರುವ ಆರೋಪಗಳು ತಮಿಳು ಸಮುದಾಯದ ನಡುವೆ ದ್ವೇಷವನ್ನು ಹೊತ್ತಿಸುವ ಗಂಭೀರ ಸ್ವರೂಪವನ್ನು ಹೊಂದಿದೆ” ಎಂದು ಆರ್ ಎಸ್ ಭಾರತಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ಬಿಜೆಪಿ-ಜೆಡಿಎಸ್ ನಡುವಿನ ಬಿರುಕಲ್ಲ, ಬಿಕ್ಕಟ್ಟಲ್ಲ, ಆಟ
ಕರಂದ್ಲಾಜೆ ಅವರ ಹೇಳಿಕೆಯು ಬೇಜವಾಬ್ದಾರಿಯುತವಾಗಿದ್ದು, ಪ್ರಧಾನಿಯಿಂದ ಹಿಡಿದು ಬಿಜೆಪಿಯ ಎಲ್ಲ ನಾಯಕರು ಕೊಳಕು ರಾಜಕೀಯವನ್ನು ನಿಲ್ಲಿಸುವಂತೆ ಡಿಎಂಕೆ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯು ಆದ ಎಂ ಕೆ ಸ್ಟಾಲಿನ್ ಹೇಳಿದ್ದಾರೆ.
ಈ ಹೇಳಿಕೆಯು ದ್ವೇಷ ಭಾಷಣಕ್ಕೆ ಸಮಾನವಾಗಿದೆ. ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.ಕೇಂದ್ರ ಸಚಿವರು ಎರಡು ಸಮುದಾಯಗಳ ನಡುವೆ ಬಾಂಧವ್ಯಗಳನ್ನು ಕೆಡಿಸುತ್ತಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿನ ತಮಿಳು ಜನರಿಗೆ ಸಂಭಾವ್ಯ ಬೆದರಿಕೆ ತಂದೊಡ್ಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂದು ರಾಜ್ಯಸಭೆಯ ಮಾಜಿ ಸದಸ್ಯರು ಆದ ಭಾರತಿ ತಿಳಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಮಾದರಿ ನೀತಿ ಸಂಹಿತೆಯ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 123(3ಎ) ಹಾಗೂ 125 ಸಕ್ಷನ್‌ಅನ್ನು ಉಲ್ಲಂಘಿಸಿದ್ಧಾರೆ ಎಂದು ದೂರು ನೀಡಲಾಗಿದೆ.
