ಚುನಾವಣಾ ಆಯೋಗವು ರಾಜ್ಯದಲ್ಲಿ ಜೂನ್ 30ರಿಂದ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಆರಂಭಿಸಲಿದೆ. ಜನರ ಪೌರತ್ವವನ್ನು ಪ್ರಶ್ನಿಸುತ್ತಿರುವ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಎಸ್ಐಆರ್ ಪ್ರಕ್ರಿಯೆ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘SIR ವಿರೋಧಿ ಜಾತ್ಯತೀತ ಸಂಘಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ’ದ ನೇತೃತ್ವದಲ್ಲಿ ಜನಪರ, ಪ್ರಗತಿಪರ, ದಲಿತ, ರೈತ ಹಾಗೂ ಜಾತ್ಯತೀತ ರಾಜಕೀಯ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆದಿವೆ. ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಈ ನೀತಿಯು ಅವೈಜ್ಞಾನಿಕ ಮತ್ತು ಜನವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರು, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ, ಕೊಪ್ಪಳ ಹಾಗೂ ಬೀದರ್ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದಿವೆ.
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಐಆರ್ ವಿರೋಧಿ ಒಕ್ಕೂಟದ ಮುಖಂಡ ನೂರ್ ಶ್ರೀಧರ್, “ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ, ನ್ಯಾಯಾಲಯ ಅಪರಾಧದ ಪರ ವಕಾಲತ್ತು ವಹಿಸಿದಾಗ ರಾಜ್ಯವನ್ನು, ರಾಜ್ಯದ ಜನರನ್ನು, ನಮ್ಮ ದೇಶದ ಸಂವಿಧಾನವನ್ನು ರಕ್ಷಿಸಿಕೊಳ್ಳಬೇಕಾದರೆ ನಾವು ಅಂತಃಸಾಕ್ಷಿಯ, ಅನನ್ಯ ದಿಟ್ಟ ಪ್ರತಿರೋಧಕ್ಕೆ ಸಿದ್ಧವಾಗಬೇಕಿದೆ” ಎಂದು ಕರೆಕೊಟ್ಟಿದ್ದಾರೆ.
“SIR ನಡೆದ ರಾಜ್ಯಗಳಲ್ಲಿ ಇದುವರೆಗೆ 6.5 ಕೋಟಿ ಮತದಾರರನ್ನು ಮತ ಪಟ್ಟಿಯಿಂದ ತೆಗೆಯಲಾಗಿದೆ. ಇದರಲ್ಲಿ ಕನಿಷ್ಟ ಅರ್ಹ ಮತದಾರರು ಇದ್ದಾರೆ ಎಂಬುದು ಅನೇಕ ಅಧ್ಯಯನಗಳು ನಿರೂಪಿಸಿವೆ. ಪಶ್ಚಿಮ ಬಂಗಾಳದಲ್ಲಂತೂ ದಾಖಲೆಗಳಿದ್ದರೂ 27 ಲಕ್ಷ ಜನರಿಗೆ ಮತದಾನದ ಹಕ್ಕನ್ನು ನಿರಾಕರಿಸಿದ್ದು ಅಕ್ಷಮ್ಯ ಅಪರಾಧ. ಅಲ್ಲಿ ಬಳಸಲಾದ ʼಲಾಜಿಕಲ್ ಡಿಸ್ಕ್ಟಿಪೆನ್ಸಿʼ ಸಾಫ್ಟ್ ವೇರ್ ಸೃಷ್ಟಿಸಿದ ಅವಾಂತರ ಹಾಗೂ ಅದರ ಹಿಂದಿನ ರಾಜಕೀಯ ದುರುದ್ದೇಶ ನ್ಯಾಯಾಂಗಕ್ಕೆ ಕಾಣದಿದ್ದರೂ ಇಡೀ ದೇಶದ ಜನರ ಕಣ್ಣಿಗೆ ನಿಚ್ಚಳವಾಗಿ ಗೋಚರಿಸಿದೆ. ಕರ್ನಾಟಕದಲ್ಲಿ ಇದನ್ನೇ ಪುನರಾವರ್ತಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಇಂದು ನಾವೆಲ್ಲರೂ ಕೂಡಿ ಈ “ಕರ್ನಾಟಕ ಪ್ರತಿರೋಧದ”ದ ಮೂಲಕ ಘೋಷಿಸುತ್ತಿದ್ದೇವೆ. ನಾವು ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಪರವಾಗಿ ಇದ್ದೇವೆ. ಆದರೆ, SIR ಹೆಸರಲ್ಲಿ ಬರುತ್ತಿರುವ ಈ ದುಷ್ಟ ಹಾಗೂ ದೋಷ ಪೂರಿತ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ” ಎಂದು ಚುನಾವಣಾ ಆಯೋಗಕ್ಕೆ ಎಚ್ಚರಿಕೆ ನೀಡಿದ್ದಾರೆ.
“ಸಧ್ಯದ ಸ್ವರೂಪದ SIR ಅನ್ನು ಒಪ್ಪುವುದಿಲ್ಲ ಎಂದು ಕರ್ನಾಟಕ ಸರ್ಕಾರ ಘೋಷಿಸಬೇಕು: ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಎನ್ನುವ ಅತಂತ್ಯ ಅವೈಜ್ಞಾನಿಕ, ಅವಾಸ್ತವಿಕ, ಅಪಾರದರ್ಶಕ ಹಾಗೂ ದುರುದ್ದೇಶಪೂರಿತ ವಿಧಾನವನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಳವಡಿಸಬಾರದು. ಸ್ಪೆಲ್ಲಿಂಗ್, ದಿನಾಂಕ ಇಂತಹ ಕ್ಷುಲ್ಲಕ ವಿಚಾರಗಳನ್ನು ಇಟ್ಟುಕೊಂಡು ಮತದಾನದ ಹಕ್ಕಿನಿಂದ ಯಾರನ್ನೇ ಹೊರಗಿಡುವುದು ಅಕ್ಷಮ್ಯ ಅಪರಾಧ” ಎಂದಿದ್ದಾರೆ.

“ಮತದಾರರ ಪಟ್ಟಿ ಎಂಬುದು ರಹಸ್ಯ ದಾಖಲೆಯಲ್ಲ. ಅದು ದೇಶದ ಮತದಾರರ ಮುಕ್ತ ಪಟ್ಟಿ. ಕರಡು ಪಟ್ಟಿ ತಯಾರಾದ ನಂತರ ಯಾರ ಮತವನ್ನಾದರೂ ಸುಲಭವಾಗಿ ಹುಡುಕಬಹುದಾದ ರೀತಿಯಲ್ಲಿ, ಪಾರದರ್ಶಕತೆ ಇರುವ ರೀತಿಯಲ್ಲಿ ಅದನ್ನು ‘ಕಂಪ್ಯೂಟರ್ ರೀಡಬಲ್ ಫಾರ್ಮ್ಯಾಟಿ’ನಲ್ಲಿ ನೀಡಬೇಕು. ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ಚುನಾವಣಾ ಆಯೋಗದ ಮ್ಯಾನ್ಯುಯಲ್ನಲ್ಲಿ ಇರುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಪ್ರದೇಶಗಳಲ್ಲಿ ಆ ಭಾಗದ ಮತದಾರರ ಕರಡು ಪಟ್ಟಿಯನ್ನು ಬಹಿರಂಗವಾಗಿ ಪ್ರಕಟಿಸಿ, ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ, ಮುಕ್ತವಾದ ರೀತಿಯಲ್ಲಿ, ಎಲ್ಲರ ಸಮ್ಮುಖದಲ್ಲಿ ತಿದ್ದುಪಡಿಗಳನ್ನು ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ಎಸ್ಐಆರ್ ಪ್ರಕ್ರಿಯೆಯನ್ನು ಗಡಿಬಿಡಿಯಲ್ಲಿ ನಡೆಸಬಾರದು. ಕನಿಷ್ಟ 1 ವರ್ಷಗಳ ಅವಧಿ ನಿಗದಿ ಮಾಡಬೇಕು. ಮತದಾರರ ಪಟ್ಟಿಯ ಪರಿಶೀಲನೆ ನಡೆಸಿ ಕರಡು ಪಟ್ಟಿ ತಯಾರಿಸಲು. ಕರಡನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಲು ಹಾಗೂ ಅಹವಾಲುಗಳನ್ನು ಸ್ವೀಕರಿಸಿ ಅಂತಿಮ ಪಟ್ಟಿ ತಯಾರಿಸಲು 6 ತಿಂಗಳು ಸಮಯ ಇರಬೇಕು. ವಿವಾಹಿತ ಮಹಿಳೆಯರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಅಲೆಮಾರಿಗಳು, ಆದಿವಾಸಿಗಳು, ದಲಿತರು, ಬಡ ಅಲ್ಪಸಂಖ್ಯಾತರು ಮುಂತಾದ ದಾಖಲೆಗಳ ಗಂಭೀರ ಸಮಸ್ಯೆ ಎದುರಿಸುತ್ತಿರುವ ಜನ ವರ್ಗಗಳು ಪ್ರಜಾತಾಂತ್ರಿಕ ಪ್ರಕ್ರಿಯೆಯಿಂದ ವಂಚಿತರಾಗದಂತೆ ಒಳಗೊಳ್ಳಲು ಅವರಿಗಾಗಿ ವಿಶೇಷ ಸರಳ ಕ್ರಮಗಳನ್ನು ರೂಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ರಾಜ್ಯದ ಒಬ್ಬ ಅರ್ಹ ಮತದಾರರೂ ತಮ್ಮ ಜನ್ಮ ಸಿದ್ಧ ಹಕ್ಕನ್ನು ಕಳೆದುಕೊಳ್ಳಲು ರಾಜ್ಯ ಸರ್ಕಾರ ಅವಕಾಶ ನೀಡಬಾರದು: ಇದಕ್ಕಾಗಿ ರಾಜ್ಯ ಸರ್ಕಾರ ಸಹ ಕೆಲವು ವಿಶೇಷ ಕ್ರಮಗಳಿಗೆ ಮುಂದಾಗಬೇಕು. ವೈಜ್ಞಾನಿಕ ಹಾಗೂ ಜನಸ್ನೇಹಿ ವಿಧಾನವನ್ನು ಬಳಸಿ ರಾಜ್ಯ ಚುನಾವಣಾ ಆಯೋಗದ ಮೂಲಕ ಸ್ಥಳೀಯ ಸಂಸ್ಥೆಗಳಿಗಾಗಿ ತಯಾರಿಸಲಾಗುವ ರಾಜ್ಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು. ‘ವಿಶೇಷ ಗ್ರಾಮ ಸಭೆ ಮತ್ತು ವಾರ್ಡ್ ಸಭೆ’ಗಳನ್ನು ನಡೆಸಿ ಮತದಾರರ ಪಟ್ಟಿಯ ಪರಿಶೀಲನೆ ನಡೆಸಿ ಕರ್ನಾಟಕದ ಪಕ್ಕಾ ಪಟ್ಟಿ ಸಿದ್ಧಪಡಿಸಬೇಕು. ಈ ಪಟ್ಟಿಯಲ್ಲಿ ಬರುವ ಪ್ರತಿಯೊಬ್ಬರ ಹಿತವನ್ನು ರಕ್ಷಿಸಿಕೊಳ್ಳಲು ರಾಜ್ಯ ಹೋರಾಡಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಪ್ರದೇಶಗಳಲ್ಲಿ ‘ಮತದಾರರ ನೆರವು ಕೇಂದ್ರ’ಗಳನ್ನು ತೆರೆಯಬೇಕು. ಜನರು ಅಗತ್ಯವಿರುವ ಮೂಲ ದಾಖಲೆಗಳನ್ನು ಸತಾಯಿಸದೆ ತ್ವರಿತವಾಗಿ ಜನರಿಗೆ ನೀಡಬೇಕು ಎಂದು ಅಧಿಕಾರಿ ವರ್ಗಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕು” ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬೆಂಗಳೂರಿನ ಪ್ರತಿಭಟನೆಯಲ್ಲಿ ವಕೀಲ ವಿನಯ್ ಶ್ರೀನಿವಾಸ್, ನಿಶಾ ಗೂಳೂರು, ಮಲ್ಲಿಗೆ ಸಿರಿಮನೆ, ಶಿವಸುಂದರ್, ಬಾಬಯ್ಯ ಸೇರಿದಂತೆ ಹಲವರು ಇದ್ದರು.

ವಿಜಯಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಶ್ರೀನಾಥ ಪೂಜಾರಿ, “ನ್ಯಾಯಸಮ್ಮತ ಚುನಾವಣೆಯ ಹೆಸರಿನಲ್ಲಿ ಜಾರಿಗೆ ತರುತ್ತಿರುವ SIR ಕ್ರಮವು ಸಾಮಾನ್ಯ ಜನರ ಮತದಾನದ ಹಕ್ಕನ್ನು ಕಸಿಯುವ ಸಂಚಾಗಿದೆ. ರಾಜ್ಯ ಸರ್ಕಾರ ತಕ್ಷಣವೇ ಕೇಂದ್ರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿ ಈ ಕ್ರಮವನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣೀಹಾರ ಮಾತನಾಡಿ, “ಗ್ರಾಮೀಣ ಭಾಗದ ಬಡಜನರಿಗೆ ಜನನ ಪ್ರಮಾಣಪತ್ರ, ಭೂ ದಾಖಲೆ ಮುಂತಾದವುಗಳನ್ನು ಒದಗಿಸುವುದು ಕಷ್ಟಕರವಾಗಿದ್ದು, ಇದರಿಂದ ಸಾವಿರಾರು ಜನರು ಮತದಾನದಿಂದ ವಂಚಿತರಾಗಲಿದ್ದಾರೆ” ಎಂದು ಎಚ್ಚರಿಸಿದ್ದಾರೆ.
DSS ಮುಖಂಡ ಚೆನ್ನು ಕಟ್ಟಿಮನಿ ಅವರು, ಚುನಾವಣಾ ಆಯೋಗವು ತಕ್ಷಣ ಈ ಕ್ರಮ ಕೈಬಿಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಸದಸ್ಯೆ ಆರತಿ ಶಹಾಪುರ, ರಮೇಜಾ ನಧಾಫ್, ಅತ್ತಾಉಲ್ಲಾ ದ್ರಾಕ್ಷಿ ಸೇರಿದಂತೆ ಕಾಂಗ್ರೆಸ್, ಎಎಪಿ ಹಾಗೂ ವಿವಿಧ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.

ಕೊಪ್ಪಳದಲ್ಲಿ ಗಡಿಯಾರ ಕಂಬ ಸರ್ಕಲ್ನಿಂದ ಅಶೋಕ್ ಸರ್ಕಲ್ವರೆಗೆ ಬೃಹತ್ ಮೆರವಣಿಗೆ ನಡೆದಿದೆ. ಅಶೋಕ್ ಸರ್ಕಲ್ನಲ್ಲಿ ನಡೆದ ಸಮಾವೇಶದಲ್ಲಿ ಸಮಾನತೆಯ ಸಂದೇಶ ಸಾರಲು ಪ್ರತಿಭಟನಾಕಾರರು ಸಂವಿಧಾನದ ಪೀಠಿಕೆ ಓದಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಅಲ್ಲಮ ಪ್ರಭು ಬೆಟ್ಟದೂರು, “ಬಿಜೆಪಿಗೆ ಮತ ಹಾಕದ ದಲಿತರು, ಅಲ್ಪಸಂಖ್ಯಾತರು ಹಾಗೂ ಆದಿವಾಸಿಗಳನ್ನು ಟಾರ್ಗೆಟ್ ಮಾಡಿ ಅವರನ್ನು ಚುನಾವಣಾ ಆಯೋಗದ ಮೂಲಕ ಮತದಾರರ ಪಟ್ಟಿಯಿಂದ ಹೊರಗಿಡುವ ಕುತಂತ್ರ ನಡೆಯುತ್ತಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ರಮ್ಯಾ ಅವರು ಜಾತಿ-ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ವೀರಸಂಗಯ್ಯ ಸೇರಿದಂತೆ ಗಂಗಾವತಿ, ಕನಕಗಿರಿ, ಹೊಸಪೇಟೆ ಭಾಗದ ನೂರಾರು ಜನರು ಪಾಲ್ಗೊಂಡಿದ್ದರು.

ಬೀದರ್ನ ಅಂಬೇಡ್ಕರ್ ವೃತ್ತದಲ್ಲಿ ‘ಎಸ್ಐಆರ್ ವಿರೋಧಿ ಕರ್ನಾಟಕ, ಪ್ರಗತಿಪರ ಹಾಗೂ ಜಾತ್ಯಾತೀತ ಪಕ್ಷಗಳ ಒಕ್ಕೂಟ’ವು ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಿತ್ತು. ಪ್ರತಿಭಟನೆಯಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ವೆಲ್ಫೇರ್ ಪಾರ್ಟಿ, ಸಿಪಿಐ, ರೈತ ಸಂಘ, ದಲಿತ ಸಂಘರ್ಷ ಸಮಿತಿ (DSS), ಲಿಂಗಾಯತ ಮಹಾಸಭೆ ಹಾಗೂ ಲೈಂಗತ್ವ ಅಲ್ಪಸಂಖ್ಯಾತರು ಮತ್ತು ಅಲೆಮಾರಿ ಸಮುದಾಯಗಳ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.



